ಕರಾವಳಿ

ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಾಲಯದಲ್ಲಿ ಫೆ.7 ರಿಂದ ಧ್ವಜಮರ ಪ್ರತಿಷ್ಠಾಪನೆ, ಬ್ರಹ್ಮ ಕಲಶೋತ್ಸವ; ಪೂರ್ವಭಾವಿ ಸಭೆ (Video)

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಇತಿಹಾಸ ಪ್ರಸಿದ್ಧವಾದ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಾಲಯದಲ್ಲಿ ಜೀರ್ಣೋದ್ಧಾರ ಕಾರ್ಯಗಳು ಅಂತಿಮ ಹಂತ ತಲುಪಿದೆ. 2022ನೇ ಫೆಬ್ರವರಿ 7 ರಿಂದ ಮೊದಲ್ಘೊಂಡು ಫೆ.17 ರವರೆಗೆ ನೂತನ ಧ್ವಜ ಮರ ಪ್ರತಿಷ್ಠಾಪನೆ, ಬ್ರಹ್ಮ ಕಲಶೋತ್ಸವ ಹಾಗೂ ಶ್ರೀಮನ್ಮಹಾರಥೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ಸರ್ಕಾರದ ಕೋವಿಡ್ – 19ರ ನಿಯಮಾವಳಿಗಳಂತೆ ಉತ್ಸವಗಳನ್ನು ನಡೆಸಲು ದೇವಳ ವ್ಯವಸ್ಥಾಪನಾ ಸಮಿತಿ, ಜೀರ್ಣೋದ್ಧಾರ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ನಿರ್ಧರಿಸಿವೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಗೋಪಾಡಿ ಶ್ರೀನಿವಾಸ ರಾವ್ ಮಾಹಿತಿ ನೀಡಿದರು.

ಡಿ.21ರ ಮಂಗಳವಾರ ಸಂಜೆ ಶ್ರೀ ಕೋಟಿಲಿಂಗೇಶ್ವರ ದೇವಾಲಯದ ವಠಾರದಲ್ಲಿ, ಸಾರ್ವಜನಿಕ ಭಕ್ತಾಭಿಮಾನಿಗಳ ಸಲಹೆ – ಸೂಚನೆಗಳನ್ನು ಪಡೆಯುವ ಸಲುವಾಗಿ ಆಯೋಜಿಸಿದ ಸಾರ್ವಜನಿಕ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ಭಗವಂತನ ಕೃಪಕಟಾಕ್ಷದಿಂದ ಉತ್ತಮ ಜೀವನ ನಿರ್ವಹಣೆ ಸಾಧ್ಯ. ನಾವು ಮುಂದಿನ ಪೀಳಿಗೆಗೆ ಸ್ವಸ್ಥ ಸಮಾಜ ನಿರ್ಮಿಸಲು ಮನುಷ್ಯನನ್ನು ಅನುಸಂಧಾನಕನಾಗಿ ಭಗವಂತ ಸೃಷ್ಟಿಸಿದ್ದು ಈ‌ ಕರ್ತವ್ಯವನ್ನು ನಿರ್ವಹಿಸುವ ಜವಬ್ದಾರಿ ಎಲ್ಲರದ್ದಾಗಿದೆ. ಭಗವಂತನ ಸೇವೆ ಮಾಡುವ ಸುಯೋಗ ಇದೀಗಾ ಒದಗಿಬಂದಿದೆ. ಈ ಉತ್ಸವ ಪ್ರತಿಯೊಬ್ಬರದ್ದು ಎಂಬ ಭಾವನೆಯೊಂದಿಗೆ ಸಾಂಗವಾಗಿ ನಡೆಯಲು ಕ್ರಮವಹಿಸೋಣ. ಈ ಅಚ್ಚುಕಟ್ಟಿನ ಕಾರ್ಯಕ್ರಮ ಇತಿಹಾಸ ಪುಟ ಸೇರಲು ಎಲ್ಲರ ಭಾಗವಹಿಸುವಿಕೆ ಅಗತ್ಯ. ಅರ್ಚಕ‌ ವೃಂದ, ವಾಲಗದವರು, ದೇವಳದ ಸಿಬ್ಬಂದಿ ಹಾಗೂ ದೇವರನ್ನು ಹೊರುವ, ತಟ್ಟಿರಾಯ ಹೊರುವ ಮಂದಿಯಿರುವ ಭಗವಂತನ ಆಂತರಿಕ ಸೇವಾ ಭಕ್ತ ತಂಡದವರ ಬೆಂಬಲದೊಂದಿಗೆ ನಿಶ್ಚಿತ ಸಮಯಕ್ಕೆ ಎಲ್ಲಾ ಧಾರ್ಮಿಕ ಕಾರ್ಯಗಳು ಜರುಗುವಂತೆ ನಡೆದುಕೊಳ್ಳಬೇಕು. ಸ್ವಚ್ಚತೆಗೆ ಬಹಳಷ್ಟು ಆದ್ಯತೆ ನೀಡುವ ಕೆಲಸ ಉತ್ಸವ ಸಂದರ್ಭದಲ್ಲಿ ಪ್ರಮುಖವಾಗಿದೆ. ಇದಕ್ಕಾಗಿ ಕಾರ್ಯಪಡೆ ಮಾಡಲಿದ್ದೇವೆ ಎಂದರು.

ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ ಮಾರ್ಕೋಡು ಮಾತನಾಡಿ, ಸಪ್ತಮೋಕ್ಷ ಕ್ಷೇತ್ರಗಳಲ್ಲಿ ಒಂದಾದ ಕೋಟಿಲಿಂಗೇಶ್ವರ ದೇವಸ್ಥಾನದ ಕೋಟಿತೀರ್ಥ ಸರೋವರದ ಕಾಯಕಲ್ಪ, ಹಾಗೂ ದೇವಳದಲ್ಲಿ ಸಂಕಲ್ಪ ಮಾಡಿದ ಬಳಿಕ ಕೋಟೇಶ್ವರದಲ್ಲಿ ನಡೆದ ಕೃಷಿ ಮೇಳ. ಇದೆರಡು ಅವಿಸ್ಮರಣೀಯ ಕಾರ್ಯವಾಗಿ ಚರಿತ್ರೆಯಾಗಿದೆ. ಇದಾದ ಬಳಿಕ ಮೂರನೇ ಕಾರ್ಯಕ್ರಮವಾಗಿ ಸುಮಾರು 6 ದಶಕಗಳ ನಂತರ ಬ್ರಹ್ಮಕಲಶೋತ್ಸವದಂತಹ ಮಹತ್ಕಾರ್ಯ ನಡೆಯುತ್ತಿದ್ದು ಎಲ್ಲರ ಸಹಭಾಗಿತ್ವದಲ್ಲಿ, ಯಾವುದೇ ಅಭಿಪ್ರಾಯ ಬೇಧವಿಲ್ಲದ ಇದೊಂದು ಯಶಸ್ವಿ ಹಾಗೂ ಮಾದರಿ ಕಾರ್ಯವಾಗಬೇಕು. ಸಮಿತಿ ರಚನೆ ಮಾಡುವಾಗ ಎಲ್ಲಾ ಸಮುದಾಯದವರನದನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ದೇವರಿಗೆ ಶಕ್ತಿ ಎಂದಿಗೂ ಕಮ್ಮಿಯಾಗುವುದಿಲ್ಲ. ಆದರೆ ಸನ್ನಿಧಿಯ ಶಿಷ್ಟಾಚಾರಗಳಲ್ಲಿ ಯಾವುದೇ ಲೋಪದೋಷಗಳು ನಡೆದಾಗ ಅದನ್ನು ಪರಿಹರಿಸಲು ಬ್ರಹ್ಮಕಲಶೋತ್ಸವ ಕಾರ್ಯ ನಡೆಯಲಿದ್ದು ದೇವಳ ಇನ್ನಷ್ಟು ವಿಜೃಂಭಿಸಲಿದೆ ಎನ್ನುವುದು ತಾತ್ವಿಕ ವಿಚಾರವಾಗುತ್ತದೆ. ಸಾರ್ವಜನಿಕರ ಸಹಭಾಗಿತ್ವದಲ್ಲಿ ಇಂತಹ ಕಾರ್ಯಕ್ರಮ ನಡೆಯಬೇಕಿದೆ ಎಂದರು.

ಭಕ್ತರ ಮನವಿಯೇನು..?
ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನವು ಸೀಮೆಗೆ ಸಂಬಂಧಿಸಿದ ದೇವಸ್ಥಾನವಾಗಿದ್ದರಿಂದ ಎಲ್ಲರಿಗೆ ಸಂಬಂದಪಟ್ಟಿದೆ. ಹೀಗಾಗಿ ಎಲ್ಲಾ ಸಮುದಾಯದವರನ್ನು 24 ಸಮಿತಿಯಲ್ಲಿ ತೊಡಗಿಸಿಕೊಳ್ಳುವಂತೆ ವಿಶ್ವಾಸಕ್ಕೆ ಪಡೆದುಕೊಳ್ಳಬೇಕು. ನಾಲ್ಕೈದು ಜನರ ಗುಂಪುಗಾರಿಕೆ ಮಾಡಿದರೆ ಗೊಂದಲವಾಗಲಿದ್ದು ಅದಕ್ಕೆ ಅವಕಾಶ ನೀಡಬಾರದು. ಎಲ್ಲರಿಗೂ ಒಮ್ಮತವಾಗುವ ಸಮಿತಿ ರಚಿಸುವ ಅಗತ್ಯವಿದೆ. ‌ಹಾಗೆಯೇ ಮುಖ್ಯಪ್ರಾಣ ದೇವಸ್ಥಾನಕ್ಕೂ ಇದೇ ಸಂದರ್ಭ ಕಾಯಕಲ್ಪ ನೀಡುವ ಕಾರ್ಯವಾಗಬೇಕು ಎಂಬ ಅಭಿಪ್ರಾಯ ನೆರೆದ ಭಕ್ತರಿಂದ ಕೇಳಿಬಂತು.

ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ತಂತ್ರಿ ಹಾಗೂ ಅರ್ಚಕರಾದ ಪ್ರಸನ್ನ ಕುಮಾರ್ ಐತಾಳ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೋಣಿ‌ ಕೃಷ್ಣದೇವ ಕಾರಂತ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಸುರೇಶ್ ಬೆಟ್ಟಿನ್ ವೇದಿಕೆಯಲ್ಲಿದ್ದರು.

ಪ್ರಮುಖರಾದ ಶ್ರೀಧರ ಕಾಮತ್, ಮಲ್ಯಾಡಿ ಶಿವರಾಮ ಶೆಟ್ಟಿ, ವ್ಯವಸ್ಥಾಪನ ಸಮಿತಿ ಸದಸ್ಯ ನೇರಂಬಳ್ಳಿ ರಾಘವೇಂದ್ರ ರಾವ್ ಮೊದಲಾದವರು ಮಾತನಾಡಿದರು.

ಜೀರ್ಣೋದ್ದಾರ ಸಮಿತಿ ಕಾರ್ಯದರ್ಶಿ ಪ್ರಭಾಕರ ಗಾಣಿಗ ಕಾರ್ಯಕ್ರಮ ನಿರೂಪಿಸಿದರು. ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಗಣೇಶ್ ಗೌಡ ವಂದಿಸಿದರು.

Comments are closed.