ಆರೋಗ್ಯ

ಕೊರೋನಾ ದಿನೇದಿನೇ ಹೆಚ್ಚುತ್ತಿರುವಾಗ ಪಾದಯಾತ್ರೆ ಅಗತ್ಯವೇನೆಂದು ಹೈಕೋರ್ಟ್ ಗರಂ; ರಾಜ್ಯ ಸರಕಾರ, ಕೆ‌.ಪಿ.ಸಿ.ಸಿ.ಗೆ ನೋಟಿಸ್

Pinterest LinkedIn Tumblr

ಬೆಂಗಳೂರು: ಕಾಂಗ್ರೆಸ್​ ಮೇಕೆದಾಟು ಪಾದಯಾತ್ರೆಯು ಜ.12 ಬುಧವಾರ 4ನೇ ದಿನಕ್ಕೆ ಕಾಲಿಡುತ್ತಿದ್ದಂತೆ ಪಾದಯಾತ್ರೆ ವಿರುದ್ಧ ನೀಡಲಾದ ಪಿಐಎಲ್ ಹೈಕೋರ್ಟ್ ಅಂಗಳಕ್ಕೆ ತಲುಪಿದೆ.

ಈ ಬಗ್ಗೆ ಇಂದು ತುರ್ತು ವಿಚಾರಣೆ ನಡೆಸಿದ ಹೈಕೋರ್ಟ್ ರಾಜ್ಯದಲ್ಲಿ ಕೋವಿಡ್ ಸೋಂಕು ದಿನೇದಿನೇ ಹೆಚ್ಚಾಗುತ್ತಿರುವುದರ ಮಧ್ಯೆ ಪಾದಯಾತ್ರೆ ನಡೆಸುವ ಅಗತ್ಯವೇನಿದೆ ಎಂದು ಛೀಮಾರಿ ಹಾಕಿದೆ. ಇದಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ರಾಜ್ಯ ಹೈಕೋರ್ಟ್​ ನೋಟಿಸ್​ ನೀಡಿದೆ. ರಾಮನಗರ ಜಿಲ್ಲಾಡಳಿತ, ಬಿಬಿಎಂಪಿ ಹಾಗೂ ಕೆಪಿಸಿಸಿಗೂ ರಾಜ್ಯ ಹೈಕೋರ್ಟ್​ ನೋಟಿಸ್ ನೀಡಿದೆ.

ಕೊರೋನಾ ಕೇಸ್​ ಹೆಚ್ಚುತ್ತಿರೋ ಹೊತ್ತಲ್ಲಿ ಪಾದಯಾತ್ರೆ ಬೇಕಿತ್ತಾ ಎಂದು PILನಲ್ಲಿ ಪ್ರಶ್ನಿಸಿದ್ದರು. ಇದೀಗ ಹೈಕೋರ್ಟ್​​, ಪಾದಯಾತ್ರೆ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದ್ದರೂ ಏಕೆ ಕ್ರಮ ಕೈಗೊಂಡಿಲ್ಲ, ಜನವರಿ 14ರಂದು ನಮಗೆ ಉತ್ತರ ಕೊಡಿ ಎಂದು ಸರ್ಕಾರಕ್ಕೆ ಸೂಚನೆ ನೀಡಿದೆ.

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಮೂರನೇ ಅಲೆ ನಿಯಂತ್ರಿಸಲು ಕರ್ನಾಟಕ ಸರ್ಕಾರ ಕಠಿಣ ನಿಯಮಗಳನ್ನ ಜಾರಿಗೆ ತಂದಿದೆ. ಆದರೆ ಕಾಂಗ್ರೆಸ್ ನಾಯಕರು ಕೊರೋನಾ ನಿಮಯಗಳನ್ನ ಗಾಳಿಗೆ ತೂರಿ ಮೇಕೆದಾಟು ಯೋಜನೆ ಆಗ್ರಹಿಸಿ ಪಾದಯಾತ್ರೆ ನಡೆಸುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಾದಯಾತ್ರೆ ನಿಲ್ಲಿಸಬೇಕೆಂದು ಹೈಕೋರ್ಟ್ ಗೆ ವಕೀಲ ಶ್ರೀಧರ್ ಪ್ರಭು ಎಂಬುವವರು ಕೂಡ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ತುರ್ತು ವಿಚಾರಣೆ ನಡೆಸುವಂತೆ ಮನವಿ ಮಾಡಿಕೊಂಡಿದ್ದರು.

ಇಂದು ತುರ್ತು ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್ ವಿಭಾಗೀಯ ಪೀಠ, ಕೋವಿಡ್ ಹೆಚ್ಚುತ್ತಿರುವಾಗ ನೀವು ಹೇಗೆ ಪಾದಯಾತ್ರೆ ನಡೆಸುತ್ತೀರಿ, ಪಾದಯಾತ್ರೆ ನಡೆಸಲು ಸರ್ಕಾರದ ಅನುಮತಿ ತೆಗೆದುಕೊಂಡಿದ್ದೀರಾ, ಸರ್ಕಾರದ ಮಾರ್ಗಸೂಚಿ ಪಾಲಿಸಲು ನಿಮ್ಮ ಕ್ರಮವೇನು, ನೀವು ಪಾಲಿಸುತ್ತಿರುವ ಕೊರೋನಾ ನಿಯಮಗಳೇನು ನಾಳೆಯೊಳಗೆ ಉತ್ತರಿಸಿ ಎಂದು ಕೆಪಿಸಿಸಿಗೆ ನೊಟೀಸ್ ಜಾರಿ ಮಾಡಿದೆ.

ಇನ್ನು ರಾಜ್ಯ ಸರ್ಕಾರವನ್ನು ಪ್ರಶ್ನಿಸಿರುವ ಹೈಕೋರ್ಟ್ ವಿಭಾಗೀಯ ಪೀಠ, ನೀವು ರ್ಯಾಲಿಗೆ ಅನುಮತಿ ನೀಡಿಲ್ಲವೆಂದಾದರೆ ಪಾದಯಾತ್ರೆ ವಿರುದ್ಧ ಕ್ರಮ ಕೈಗೊಳ್ಳಲು ಯಾರಿಗಾಗಿ ಕಾಯುತ್ತಿದ್ದೀರಿ, ಕೋವಿಡ್ ಬಿಗಡಾಯಿಸುತ್ತಿರುವಾಗ ನೀವು ಶಿಷ್ಠಾಚಾರ ಪಾಲಿಸುತ್ತಿದ್ದೀರಾ..? ಈ ಬಗ್ಗೆ ಉತ್ತರಿಸಿ ಎಂದು ರಾಜ್ಯ ಸರ್ಕಾರಕ್ಕೂ ನೊಟೀಸ್ ಜಾರಿ ಮಾಡಿ ಮುಂದಿನ ವಿಚಾರಣೆಯನ್ನು ಜನವರಿ 14ಕ್ಕೆ ಮುಂದೂಡಿದೆ.

Comments are closed.