ಕರ್ನಾಟಕ

ಹಿಜಾಬ್, ಕೇಸರಿ ಶಾಲು ಸಂಘರ್ಷವಾಗುತ್ತಿರುವ ಶಾಲಾ-ಕಾಲೇಜುಗಳಿಗೆ ತಕ್ಷಣ ರಜೆ ನೀಡಲು ಸಿಎಂಗೆ ಸಿದ್ದರಾಮಯ್ಯ ಆಗ್ರಹ

Pinterest LinkedIn Tumblr

ಬೆಂಗಳೂರು: ಹಿಜಾಬ್ – ಕೇಸರಿ ಶಾಲು ಸಂಘರ್ಷ ನಡೆಯುತ್ತಿರುವ ಶಾಲಾ ಕಾಲೇಜುಗಳಿಗೆ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತಕ್ಷಣ ರಜೆ ಘೋಷಿಸಿ ಆನ್‌ ಲೈನ್ ತರಗತಿಗಳನ್ನು ಶುರು ಮಾಡಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಗ್ರಹಪಡಿಸುತ್ತಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದಾರೆ.

ಹಿಜಾಬ್-ಕೇಸರಿ ಶಾಲು ನಡುವಿನ ಸಂಘರ್ಷ ಅತಿರೇಕಕ್ಕೆ ತಲುಪಿ ವಿದ್ಯಾರ್ಥಿಗಳು ಪರಸ್ಪರ ಕಾದಾಟಕ್ಕೆ ಇಳಿದು ಶಾಲಾ-ಕಾಲೇಜುಗಳೇ ಕದನಕಣಗಳಾಗುತ್ತಿರುವುದು ಅಪಾಯಕಾರಿ ಬೆಳವಣಿಗೆ.
ವಿದ್ಯಾರ್ಥಿಗಳು ಸಂಘರ್ಷಕ್ಕೆ ಇಳಿದಿರುವ ಕಡೆಗಳಲ್ಲಿ ಪುಂಡು ವಿದ್ಯಾರ್ಥಿಗಳ ಮೇಲೆ ಕಠಿಣ ಕ್ರಮಕೈಗೊಳ್ಳದೆ ಪೊಲೀಸರು ಮೂಕ ಪ್ರೇಕ್ಷಕರಾಗಿರುವುದು ವಿದ್ಯಾರ್ಥಿಗಳ ಹೆತ್ತವರಲ್ಲಿ ಆತಂಕ ಹುಟ್ಟಿಸಿದೆ.

ಪ್ರಾರಂಭದ ಹಂತದಲ್ಲಿಯೇ ಸ್ಥಳೀಯವಾಗಿ ಸೌಹಾರ್ದಯುತವಾಗಿ ಬಗೆಹರಿಸಬಹುದಾಗಿದ್ದ ಸರಳ‌ ಸಮಸ್ಯೆಯನ್ನು ರಾಜಕೀಯ ಕಾರಣಕ್ಕಾಗಿ ಉಲ್ಭಣಗೊಳಿಸಿರುವ ರಾಜ್ಯ ಸರ್ಕಾರ ಈಗ ಪರಿಸ್ಥಿತಿ ನಿಯಂತ್ರಿಸಲಾಗದೆ ಕೈಚೆಲ್ಲಿ ಕೂತಿದೆ.
ಸಮಸ್ಯೆಯನ್ನು ಇತ್ಯರ್ಥಗೊಳಿಸುವ ಹೊಣೆಗಾರಿಕೆ ಹೊಂದಿರುವ ರಾಜ್ಯ ಶಿಕ್ಷಣ ಸಚಿವರು ಮತ್ತು ಗೃಹಸಚಿವರು ನೀಡುತ್ತಿರುವ ಪ್ರಚೋದನಾಕಾರಿ ಹೇಳಿಕೆ ಪರಿಸ್ಥಿತಿ ಬಿಗಡಾಯಿಸಲು ಕಾರಣವಾಗಿರುವುದು ವಿಷಾದನೀಯ.

ಈ ಹಿನ್ನೆಲೆಯಲ್ಲಿ‌ ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಮುಖ್ಯಮಂತ್ರಿಗಳು ತಕ್ಷಣ ಮಧ್ಯಪ್ರವೇಶಿಸಿ ಶಾಲಾ‌ ಕಾಲೇಜುಗಳಿಗೆ ರಜೆ ಘೋಷಿಸಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗದಂತೆ ಆನ್ ಲೈನ್ ತರಗತಿಗಳನ್ನು ತಕ್ಷಣ ಶುರು ಮಾಡಬೇಕು ಎಂದು ಸಿದ್ದರಾಮಯ್ಯ ಆಗ್ರಹ ಮಾಡಿದ್ದಾರೆ.

Comments are closed.