ಶಿವಮೊಗ್ಗ: ಬರಂಗದಳ ಕಾರ್ಯಕರ್ತ ಹರ್ಷ ಹತ್ಯೆ ನಂತರ ಕಳೆದ 3-4 ದಿನಗಳಿಂದ ನಗರದಲ್ಲಿ ಉಂಟಾಗಿದ್ದ ಪ್ರಕ್ಷುಬ್ದ ವಾತಾವರಣ ತಿಳಿಯಾಗಿದೆ. ಎಲ್ಲೆಡೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಫೆ.26ರವರೆಗೆ 144 ಸೆಕ್ಷನ್ ಹಾಗೂ ಕರ್ಫ್ಯೂ ವಿಸ್ತರಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ
ಘಟನೆ ಬಳಕ ಉದ್ರಿಕ್ತ ಗುಂಪುಗಳಿಂದ ನಡೆದ ಗಲಭೆಯಿಂದ ಸಾಕಷ್ಟು ಆಸ್ತಿಪಾಸ್ತಿ ಹಾನಿಯಾಗಿತ್ತು. ಉದ್ರಿಕ್ತ ಗುಂಪು ಹಲವು ವಾಹನಗಳಿಗೆ ಬೆಂಕಿ ಹಾಕಿದ್ದವು. ಕಳೆದ ಮೂರು ದಿನಗಳಿಂದ ನಗರದಾದ್ಯಂತ ಪೊಲೀಸ್ ಕಟ್ಟೆಚ್ಚರ ವಹಿಸಲಾಗಿದೆ. ಪರಿಸ್ಥಿತಿ ಮೇಲ್ನೋಟಕ್ಕೆ ಶಾಂತಿಯುತವಾಗಿ ಕಂಡು ಬರುತ್ತಿದ್ದರೂ ಒಳಗೊಳಗೇ ಆತಂಕ ಮಡುಗಟ್ಟಿದೆ. ಯಾವಾಗ ಇದು ಜ್ವಾಲಾಮುಖಿಯಾಗಿ ಸಿಡಿಯುತ್ತದೆಯೋ ಎಂಬ ಆತಂಕ ವ್ಯಕ್ತವಾಗಿದೆ.
ಶಿವಮೊಗ್ಗದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಭದ್ರತೆಗಾಗಿ ಮೂವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಓರ್ವ ಹೆಚ್ಚುವರಿ ರಕ್ಷಣಾಧಿಕಾರಿ, 12 ಡಿವೈಎಸ್‌ಪಿ, 39 ಪೊಲೀಸ್ ಇನ್‌ಸ್ಪೆಕ್ಟರ್, 54 ಪಿಎಸ್‌ಐ, 48 ಎಎಸ್‌ಐ, 20 ಕೆಎಸ್‌ಆರ್‌ಪಿ ತುಕಡಿ, 10 ಡಿಎಆರ್ ತುಕಡಿ ಮತ್ತು 1 ಆರ್‌ಎಎಫ್ ತುಕಡಿಯನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಶಿವಮೊಗ್ಗದಲ್ಲೇ ಬೀಡುಬಿಟ್ಟಿದ್ದಾರೆ.
ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ, ವೃತ್ತಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಗಲಭೆ ನಡೆದ ಹಳೆ ಶಿವಮೊಗ್ಗ ಭಾಗದಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಸೀಗೆಹಟ್ಟಿ, ಇಮಾಮ್ ಬಾಡ, ಆಜಾದ್ ನಗರ, ಎಂಕೆಕೆ ರಸ್ತೆ, ಓಟಿ ರಸ್ತೆ, ರವಿವರ್ಮ ಬೀದಿ ಸೇರಿದಂತೆ ಹಲವೆಡೆ ಪೊಲೀಸರು ಬೀಡುಬಿಟ್ಟಿದ್ದಾರೆ. ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಆರ್’ಎಎಫ್ ತಂಡವನ್ನು ನಿಯೋಜಿಸಲಾಗಿದೆ.
Comments are closed.