ಕರಾವಳಿ

16 ಚಿಣ್ಣರಿರುವ ಮಣೂರು ಕಂಬಳಗದ್ದೆ‌ಬೆಟ್ಟು ಕದ್ರಿಕಟ್ಟೆ ಅಂಗನವಾಡಿ ಕೇಂದ್ರ ಸ್ಥಳಾಂತರ ಯತ್ನ?; ಪೋಷಕರ ಅಸಮಧಾನ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಕೋಟ ಗ್ರಾಮಪಂಚಾಯತ್ ವ್ಯಾಪ್ತಿಯ ಮಣೂರು ಸಮೀಪದ ಕಂಬಳಗದ್ದೆ ಬೆಟ್ಟು ಎಂಬಲ್ಲಿರುವ ಕದ್ರಿಕಟ್ಟೆ ಅಂಗನವಾಡಿ ಕೇಂದ್ರ ಸ್ಥಳಾಂತರವಾಗಬೇಕು ಎಂಬ ಯತ್ನದ ಬಗ್ಗೆ ಮಾಹಿತಿಯ ಹಿನ್ನೆಲೆಯಲ್ಲಿ ಅಂಗನವಾಡಿ ಕೇಂದ್ರದ ಎದುರು ಜಮಾಯಿಸಿದ ಪೋಷಕರು ಅಸಮಾಧಾನ ಹೊರಹಾಕಿದ ಘಟನೆ ಫೆ.25 ಶುಕ್ರವಾರ ನಡೆದಿದೆ.

ದಶಕಗಳ ಹಿಂದೆ ಈ ಭಾಗದಲ್ಲಿ ಅಂಗನವಾಡಿ ನಿರ್ಮಿಸಲಾಗಿತ್ತು. ಪ್ರಸ್ತುತ ಈ ಅಂಗನವಾಡಿಯಲ್ಲಿ 16 ಮಕ್ಕಳಿದ್ದಾರೆ. ದಾನಪತ್ರದ ಮೂಲಕ ದಾನಿಯೊಬ್ಬರು ಈ ಜಾಗ ಅಂಗನವಾಡಿ ಕೇಂದ್ರಕ್ಕೆ ಬಿಟ್ಟು ಕೊಟ್ಟಿದ್ದು 5 ವರ್ಷಗಳ ಹಿಂದೆ ಜಾಗದ ತಕರಾರು ನ್ಯಾಯಾಲಯದ ಮೆಟ್ಟಿಲೇರಿತ್ತೆನ್ನಲಾಗಿದೆ. ಸದ್ಯ ಅಂಗನವಾಡಿ ಕೇಂದ್ರ ಕೆಡವುದು ಹಾಗೂ ಸ್ಥಳಾಂತರದ ಬಗ್ಗೆ ಮಾಹಿತಿ ತಿಳಿದ ಪೋಷಕರು ಕಂಗಾಲಾಗಿದ್ದಾರೆ.

ಮಕ್ಕಳನ್ನು ಬೇರೆ ಅಂಗನವಾಡಿ ಕೇಂದ್ರಕ್ಕೆ ಕಳಿಸುವುದು ಅಸಾಧ್ಯ. ರಾಷ್ಟ್ರೀಯ ಹೆದ್ದಾರಿಯಲ್ಲಿ ಮೂರು ರಸ್ತೆ ದಾಟಿಸುವುದು ಕಷ್ಟವಾಗುತ್ತದೆ. ಅಲ್ಲದೆ ಗರ್ಭಿಣಿಯರು, ಬಾಣಂತಿಯರು ಕೂಡ ಪೌಷ್ಟಿಕಾಹಾರ ಸೇವನೆಗೆ ಇಲ್ಲಿಗೆ ಈ ತನಕ ಬರುತ್ತಿದ್ದು ಇಲ್ಲಿನ ಅಂಗನವಾಡಿ ಕೇಂದ್ರ ಬಿಟ್ಟು ಬೇರೆಡೆ ತೆರಳುವುದು ಅಸಾಧ್ಯ ಎಂದು ಸ್ಥಳೀಯರು ಹಾಗೂ ಪೋಷಕರು ತಿಳಿಸಿದ್ದಾರೆ.

ಬಿಜೆಪಿ ಕುಂದಾಪುರ ಕ್ಷೇತ್ರಾಧ್ಯಕ್ಷ ಶಂಕರ್ ಅಂಕದಕಟ್ಟೆ ಈ ವೇಳೆ ಆಗಮಿಸಿ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಖಂಡಿಸಿದರು. ಕೋಟ ಗ್ರಾ.ಪಂ‌ ಸದಸ್ಯೆ ಗುಲಾಬಿ ಪೂಜಾರಿ, ಕೋಟ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸುರೇಶ್ ಕುಂದರ್ ಐರೋಡಿ, ಮಣೂರು ಶಕ್ತಿ ಕೇಂದ್ರದ ಮಹೇಶ್ ಹೊಳ್ಳ, ಅಭಿಷೇಕ್ ಅಂಕದಕಟ್ಟೆ ಮೊದಲಾದವರು ಇದ್ದರು‌.

Comments are closed.