ಕುಂದಾಪುರ: ಯಕ್ಷಕಾಶಿ ಎಂದೇ ಕರೆಯಲ್ಪಡುವ ಕುಂದಾಪುರದ ನೆಹರೂ ಮೈದಾನದಲ್ಲಿ ಉದ್ಯಮಿ ಮಂಜುನಾಥ್ ಪೂಜಾರಿ ಬೆಳ್ಳಾಡಿ ಸಾರಥ್ಯದಲ್ಲಿ ಶನಿವಾರ ರಾತ್ರಿ ಪ್ರದರ್ಶನಗೊಂಡ ಅಮರಾವತಿಯ ಅಮರ ಚರಿತೆ ವೈಭವವು ನಿಜ ಗಜ ಆಗಮನ ಸಹಿತ ಹತ್ತಾರು ಹೊಸತನಕ್ಕೆ ಸಾಕ್ಷಿಯಾಗಿದ್ದು ಪ್ರೇಕ್ಷಕರ ಮನಸೂರೆಗೊಂಡಿತು.
ಯಕ್ಷಗಾನಕ್ಕೂ ಮುನ್ನ ನಡೆದ ಸಭಾ ಕಾರ್‍ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತೆ, ಜಾನಪದ ಅಕಾಡೆಮಿಯ ಅಧ್ಯಕ್ಷೆ ಮಂಜಮ್ಮ ಜೋಗತಿ, ಹಿರಿಯ ಯಕ್ಷಗಾನ ಕಲಾವಿದ ಬಳ್ಕೂರು ಕೃಷ್ಣ ಯಾಜಿ, ಖ್ಯಾತ ಭಾಗವತ ರಾಘವೇಂದ್ರ ಆಚಾರ್ಯ ಜನ್ಸಾಲೆ, ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಉಡುಪಿ ಫುಡ್ ಹಬ್‌ನ ಡಾ| ಅಶೋಕ್ ಶೆಟ್ಟಿ ಬೆಳ್ಳಾಡಿ ಅವರನ್ನು ದೂರದ ಹರಿಹರ ಮಠದಿಂದ ಆಗಮಿಸಿದ ನಿಜ ಗಜ ಶ್ರೀ ದೇವಿ ಸಮ್ಮಾನಿಸಿದ್ದು ವಿಭಿನ್ನವಾಗಿತ್ತು.
ಸಮ್ಮಾನ ಸ್ವೀಕರಿಸಿ ಮಾತನಾಡಿದ ಮಂಜಮ್ಮ ಜೋಗತಿ, ರಾಜ್ಯದಲ್ಲಿಯೇ ಉಡುಪಿ ಜಿಲ್ಲೆಗೆ ಬಂದಷ್ಟು ಬೇರೆ ಯಾವ ಜಿಲ್ಲೆಗೂ ಹೋಗಿಲ್ಲ. ಹಾಗಾಗಿ ನಾನು ಒಂದು ರೀತಿಯಲ್ಲಿ ಉಡುಪಿಯ ಮಗಳಿದ್ದಂತೆ. ಬಳ್ಳಾರಿಯಿಂದ ಉಡುಪಿಯ ಕುಂದಾಪುರ, ಕೋಟ, ಹೆಬ್ರಿ ಸಹಿತ ಅನೇಕ ಬಾರಿ ಕಾರ್‍ಯಕ್ರಮಗಳಿಗಾಗಿ ಬಂದಿದ್ದೇನೆ. ಇದು ನನ್ನ ತವರೂರು ಎಂದು ಹೇಳುತ್ತೇನೆ. ಇಲ್ಲಿಗೆ ಕೆಲ ದಿನ ಬರದಿದ್ದರೆ ನಿನ್ನ ತವರು ಉಡುಪಿಗೆ ಈ ಸಲ ಹೋಗಲಿಲ್ವಾ ಎಂದು ನಮ್ಮ ಊರಿನವರು ಕೇಳುವ ಮಟ್ಟಿಗೆ ಉಡುಪಿ ಜಿಲ್ಲೆಯೊಂದಿಗೆ ನಂಟಿರುವ ಬಗ್ಗೆ ಹೇಳಿಕೊಂಡರು.
ಈ ಸಂದರ್ಭದಲ್ಲಿ ಮುಂಬಯಿ ಬಂಟರ ಸಂಘದ ಉಪಾಧ್ಯಕ್ಷ ಉಳ್ತೂರು ಮೋಹನ್‌ದಾಸ್ ಶೆಟ್ಟಿ, ಮುಂಬಯಿ ಉದ್ಯಮಿ ಆದರ್ಶ್ ಶೆಟ್ಟಿ ಹಾಲಾಡಿ, ಜಿ.ಪಂ. ಮಾಜಿ ಅಧ್ಯಕ್ಷ ರಾಜು ಪೂಜಾರಿ, ಉದ್ಯಮಿಗಳಾದ ಡಾ| ವಿಜಯಕೃಷ್ಣ ಪಡುಕೋಣೆ ಬೆಂಗಳೂರು, ಶರತ್ ಶೆಟ್ಟಿ ಬೆಳ್ಳಾಡಿ, ಜಗದೀಶ್ ಶೆಟ್ಟಿ ಕುದ್ರುಕೋಡ್, ಅರವಿಂದ್ ಪೂಜಾರಿ, ಸದಾಶಿವ ಪೂಜಾರಿ, ಸಂಘಟಕ ಮಂಜುನಾಥ್ ಪೂಜಾರಿ ಬೆಳ್ಳಾಡಿ ಮತ್ತಿತರರು ಉಪಸ್ಥಿತರಿದ್ದರು.
ಯಕ್ಷ ಕವಿ ಪವನ್ ಕಿರಣ್ಕೆರೆ ಪ್ರಸ್ತಾವಿಸಿದರು. ಅವಿನಾಶ್ ಕಾಮತ್ ಸಮ್ಮಾನಿತರನ್ನು ಪರಿಚಯಿಸಿದರು. ಶಿಕ್ಷಕ ಮಹೇಶ್ ವಕ್ವಾಡಿ ಸ್ವಾಗತಿಸಿ, ಕಾರ್‍ಯಕ್ರಮ ನಿರೂಪಿಸಿದರು.
Comments are closed.