ಕರಾವಳಿ

ಖಂಬದಕೋಣೆ: ‘ಪರಿಸರ ರಕ್ಷಿಸಿ-ಜೀವನ ಉಳಿಸಿ’ ಅಭಿಯಾನಕ್ಕೆ ಕೈಜೋಡಿಸಿದ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ..!

Pinterest LinkedIn Tumblr

(ವರದಿ– ಯೋಗೀಶ್ ಕುಂಭಾಸಿ)

ಕುಂದಾಪುರ: ರೈತಾಪಿ ವರ್ಗ, ಕೂಲಿಯಾಳುಗಳು ಸಹಿತ ಜನಜೀವನ ಹಾಗೂ ವನ್ಯಜೀವಿಗಳ ಬದುಕು ಕಸಿದು ಕಾಡು ಪ್ರದೇಶವನ್ನು ಕೈಗಾರಿಕಾ ಕ್ಷೇತ್ರಕ್ಕೆ ನೀಡುವುದು ಸೂಕ್ತವಲ್ಲ, ಕೈಗಾರಿಕಾ ಚಟುವಟಿಕೆಗಾಗಿ ಕಾಡು ಪ್ರದೇಶವನ್ನು ನಾಶ ಮಾಡುವುದರಿಂದ ಪರಿಸರದ ಮೇಲೆ ವ್ಯತ್ತಿರಿಕ್ತ ಪರಿಣಾಮವಾಗಲಿದ್ದು ಜನರ ನಿತ್ಯ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ. ಇದರ ಬದಲು ಬರಡು ಭೂಮಿಯನ್ನು ಅಥವಾ ಸೂಕ್ತ ವ್ಯವಸ್ಥೆಯಿರುವ ಪ್ರದೇಶವನ್ನು ಕೈಗಾರಿಕೆಗೆ ಬಳಸಿಕೊಳ್ಳಲು ಯೋಜನೆ ರೂಪಿಸಬೇಕು ಎಂದು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಅಧ್ಯಕ್ಷ ಎಲ್.ವಿ.ಅಮೀನ್ ಹೇಳಿದರು.

ಅವರು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ರಿ. ಸರಕಾರೇತರ ಸಂಸ್ಥೆ ವನದುರ್ಗ ರೈತಶಕ್ತಿ ಗುಂಪು ರಿ. ಮತ್ತು ಹಳಗೇರಿ ಪರಿಸರ ಹಿತರಕ್ಷಣಾ ವೇದಿಕೆ ಸಹಯೋಗದಲ್ಲಿ ಮಾ.10ರಂದು ಮಹಾಲಸ ಕಲ್ಚರಲ್ ಹಾಲ್‍ನಲ್ಲಿ ನಡೆದ ಪರಿಸರ ರಕ್ಷಿಸಿ-ಜೀವನ ಉಳಿಸಿ ಅಭಿಯಾನ ಮತ್ತು ಬೃಹತ್ ಪ್ರತಿಭಟನೆ ಉದ್ಘಾಟಿಸಿ ಮಾತನಾಡಿದರು.

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಮಾತನಾಡಿ, ಅರಣ್ಯವು ಬೇಕು ಕೈಗಾರಿಕೆಯು ಬೇಕು ಆದರೆ ಜನರ ಜೀವನಕ್ಕೆ ಸಮಸ್ಯೆಯನ್ನು ಉಂಟುಮಾಡುವ ಪ್ರದೇಶದಲ್ಲಿ ಕೈಗಾರಿಕೆ ಮಾಡುವುದು ಸರಿಯಲ್ಲ. ಬೈಂದೂರಿನಲ್ಲಿ ಜನ ವಸತಿ ಇಲ್ಲದ ಇರುವ ಜಾಗ ಗುರುತಿಸಿ ಕೈಗಾರಿಕೆಯನ್ನು ಪ್ರಾರಂಭಿಸಲು ನಮ್ಮ ಬೆಂಬಲ ಇರುತ್ತದೆ ಎಂದರು.

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಉಪಾಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಮಾತನಾಡಿ, ಜನರಿಗೆ ಅನ್ಯಾಯ ಆಗಿದ್ದಲ್ಲಿ ನ್ಯಾಯ ಒದಗಿಸುವ ಸಲುವಾಗಿ ಹೋರಾಟ ನಡೆಸುವುದೇ ಸಮಿತಿಯ ಗುರಿಯಾಗಿದೆ. ಸುಮಾರು 2 ದಶಕಗಳಿಂದ ಹೋರಾಟ ನಡೆಸಿಕೊಂಡು ಬರುತ್ತಿದ್ದು ಕರಾವಳಿ ಜಿಲ್ಲೆಗಳಲ್ಲಿನ ಪ್ರಮುಖ ಸಮಸ್ಯೆಗಳನ್ನು ತಾರ್ಕಿಕ ಅಂತ್ಯ ಕಾಣಿಸಲು ಯಶ್ವಸಿಯಾಗಿದ್ದೇವೆ. ಕೈಗಾರಿಕೆ ನಮ್ಮ ವಿರೋಧ ಇಲ್ಲ, ಅರಣ್ಯ ಹಾಗೂ ರೈತರಿಗೆ ಸಮಸ್ಯೆ ಆಗುವುದನ್ನು ಮನಗಂಡು ಈ ಪ್ರದೇಶವನ್ನು ಬಿಟ್ಟು ಬದಲಿ ಜಾಗವನ್ನು ಗುರುತಿಸಿ ಕೈಗಾರಿಕೆ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.

ಖಂಬದಕೋಣೆ ಗ್ರಾ.ಪಂ.ಅಧ್ಯಕ್ಷ ಸುಕೇಶ ಶೆಟ್ಟಿ ಮಾತನಾಡಿ, ಗ್ರಾ.ಪಂ.ನ ಗಮನಕ್ಕೆ ತರದೆ ಅಧಿಕಾರಿಗಳು ಈ ಪ್ರದೇಶವನ್ನು ಕೈಗಾರಿಕೆಗೆ ಕೊಟ್ಟಿದ್ದಾರೆ ಇದಕ್ಕೆ ಎಲ್ಲ ಸದಸ್ಯರು ಸಂಪೂರ್ಣ ವಿರೋಧ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ನಡೆಸುವ ಎಲ್ಲ ರೀತಿಯ ಹೋರಾಟಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದರು.

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಉಪಾಧ್ಯಕ್ಷ ರಾಮಚಂದ್ರ ಬೈಕಂಪಾಡಿ, ಅಖಿಲ ಭಾರತ ತುಳು ಒಕ್ಕೂಟ ಅಧ್ಯಕ್ಷ ಧರ್ಮಪಾಲ್ ಯು.ದೇವಾಡಿಗ, ಉಡುಪಿ ಕ.ರಾ.ವೈ.ಸಂ.ಜಿಲ್ಲಾಧ್ಯಕ್ಷ ಡಾ| ಸುಬ್ರಹ್ಮಣ್ಯ ಭಟ್, ಮುಂಬಯಿ ದೇವಾಡಿಗ ಸಂಘದ ಅಧ್ಯಕ್ಷ ರವಿ ದೇವಾಡಿಗ, ಮುಂಬೈ ದೇವಾಡಿಗ ಸಂಘದ ಮಾಜಿ ಅಧ್ಯಕ್ಷ ಹಿರಿಯಡ್ಕ ಮೋಹನದಾಸ್, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಸಾಲಿಯಾನ್, ಕಿರಿಮಂಜೇಶ್ವರ ಗ್ರಾ.ಪಂ.ಮಾಜಿ ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ, ಸದಸ್ಯ ಈಶ್ವರ ದೇವಾಡಿಗ, ಕೊಲ್ಲೂರು ಶ್ರೀ ಮೂಕಾಂಬಿಕ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಮಾಜಿ ಸದಸ್ಯ ನರಸಿಂಹ ಹಳಗೇರಿ, ನಿವೃತ್ತ ಬ್ಯಾಂಕ್ ಮಾನ್ಯೇಜರ್ ಉದಯ ಕುಮಾರ್ ಶೆಟ್ಟಿ ಅರಣ್ಯ ಪ್ರದೇಶದಲ್ಲಿ ಕೈಗಾರಿಕಾ ವಲಯ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದರು.

ಹಳಗೇರಿ ಪರಿಸರ ಹಿತರಕ್ಷಣಾ ವೇದಿಕೆ ಪ್ರಮುಖ ಹೋರಾಟಗಾರ ನಳೀನ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಅರಣ್ಯ ಉಳಿದರೆ ನಮಗೆ ಉಳಿಗಾಲವಿದೆ ನಮ್ಮ ಜೀವನವನ್ನು ಉಳಿಸಿಕೊಳ್ಳುವ ಸಲುವಾಗಿ ಯಾವುದೇ ರೀತಿಯ ಹೋರಾಟಕ್ಕೆ ಸಿದ್ಧ‌ ಎಂದರು.

ವನದುರ್ಗ ರೈತಶಕ್ತಿ ಗುಂಪು ಸಂಯೋಜಕ ಪ್ರಭಾಕರ ಶೆಟ್ಟಿ ಸ್ವಾಗತಿಸಿದರು. ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಸಾಲಿಯಾನ್ ವಂದಿಸಿದರು.

Comments are closed.