ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಕೊನೆಯ ಚಿತ್ರವಾದ ಬಹು ನಿರೀಕ್ಷಿತ ‘ಜೇಮ್ಸ್’ ಚಿತ್ರದ ‘ಸಲಾಂ ಸೋಲ್ಜರ್’ ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಆಗಿದ್ದು ಈ ಹಾಡನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಿಡುಗಡೆ ಮಾಡಿದ್ದಾರೆ.
ಪುನೀತ್ ರಾಜ್‌ಕುಮಾರ್ ನಟನೆಯ, ಚೇತನ್ ಕುಮಾರ್ ನಿರ್ದೇಶನದ ‘ಜೇಮ್ಸ್’ ಚಿತ್ರದ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಮಾರ್ಚ್ 17 ಪುನೀತ್ ಹುಟ್ಟುಹಬ್ಬಕ್ಕೆ ‘ಜೇಮ್ಸ್’ ಸಿನಿಮಾ ರಿಲೀಸ್ ಆಗಲಿದೆ. ಪಿಆರ್ಕೆ ಆಡಿಯೋ ಮೂಲಕ ಬಿಡುಗಡೆ ಆಗಿರುವ ಈ ‘ಸಲಾಂ ಸೋಲ್ಜರ್’ ಹಾಡಿನಲ್ಲಿ ಪುನೀತ್ ರಾಜ್ಕುಮಾರ್ ಅವರು ಸೈನಿಕನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರಕ್ಕೆ ಆಕ್ಷನ್ ಕಟ್ ಹೇಳುವುದರ ಜೊತೆಗೆ ‘ಸಲಾಂ ಸೋಲ್ಜರ್..’ ಹಾಡಿಗೆ ಚೇತನ್ ಕುಮಾರ್ ಸಾಹಿತ್ಯ ಬರೆದಿದ್ದಾರೆ. ಸಂಜಿತ್ ಹೆಗಡೆ ಮತ್ತು ಚರಣ್ ರಾಜ್ ಕಂಠದಲ್ಲಿ ಈ ಗೀತೆ ಮೂಡಿಬಂದಿದೆ. ಸಾಂಗ್ ನೋಡಿ ಖುಷಿಪಟ್ಟಿರುವ ಅಭಿಮಾನಿಗಳು ಸಿನಿಮಾ ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಈ ಚಿತ್ರದ ಹಾಡುಗಳಿಗೆ ಯುವ ಸಂಗೀತ ನಿರ್ದೇಶಕ ಚರಣ್ ರಾಜ್ ಸಂಗೀತ ನೀಡಿದ್ದಾರೆ. ಕಿಶೋರ್ ಪತ್ತಿಕೊಂಡ ಅವರ ನಿರ್ಮಾಣದಲ್ಲಿ ‘ಜೇಮ್ಸ್’ ಸಿನಿಮಾ ಮೂಡಿಬಂದಿದೆ.
ಇತ್ತೀಚೆಗಷ್ಟೇ ಚಿತ್ರದ ‘ಟ್ರೇಡ್ಮಾರ್ಕ್..’ ಲಿರಿಕಲ್ ವಿಡಿಯೋ ಸಖತ್ ಸುದ್ದಿ ಮಾಡಿತ್ತು. ‘ಜೇಮ್ಸ್’ ಚಿತ್ರಕ್ಕೆ ಸೆನ್ಸಾರ್ನಲ್ಲಿ ಯಾವುದೇ ಕಟ್ ಇಲ್ಲದೆ ಯು/ಎ ಪ್ರಮಾಣಪತ್ರ ಸಿಕ್ಕಿದೆ. ಇದರ ಜತೆಗೆ ಸಿನಿಮಾದಲ್ಲಿ ಯಾವುದೇ ದೃಶ್ಯವನ್ನು ಕಟ್ ಮಾಡಲು ಸೆನ್ಸಾರ್ ಮಂಡಳಿ ಸೂಚನೆ ನೀಡಿಲ್ಲ ಎಂದು ನಿರ್ದೇಶಕ ಚೇತನ್ ಕುಮಾರ್ ಹೇಳಿದ್ದರು. ಸಿನಿಮಾದಲ್ಲಿ ಪುನೀತ್ ಪಾತ್ರಕ್ಕೆ ಅವರ ಸಹೋದರ ಶಿವರಾಜ್ಕುಮಾರ್ ಡಬ್ ಮಾಡಿದ್ದಾರೆ.
Comments are closed.