ಕರಾವಳಿ

ಏತ ನೀರಾವರಿ ಯೋಜನೆಯಿಂದ ತಲ್ಲೂರು, ಉಪ್ಪಿನಕುದ್ರು ಭಾಗಕ್ಕೆ ಅನ್ಯಾಯವಾಗಿದೆ: ತಲ್ಲೂರು ಗ್ರಾಮಸಭೆಯಲ್ಲಿ ನಾಗರೀಕರ ಆಕ್ರೋಷ..!

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಸೌಕೂರು ಏತ ನೀರಾವರಿ‌ ಯೋಜನೆಯು ತಲ್ಲೂರು ಹಾಗೂ ಉಪ್ಪಿನಕುದ್ರು ಭಾಗಕ್ಕೆ ಅನ್ಯಾಯವಾಗಿದೆ, ಮೂಲ ಯೋಜನೆ ತಿರುಚಲಾಗಿದೆ ಎಂಬ ಗಂಭೀರ ಆರೋಪವನ್ನು ಗ್ರಾಮಸ್ಥ ಚಂದ್ರಮ ತಲ್ಲೂರು ಮಾಡಿದರು.

ತಾಲ್ಲೂಕಿನ ತಲ್ಲೂರಿನಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಬುಧವಾರ ನಡೆದ ತಲ್ಲೂರು ಗ್ರಾಮಪಂಚಾಯತ್ ಗ್ರಾಮಸಭೆಯಲ್ಲಿ ಈ ಆರೋಪ ಕೇಳಿಬಂದಿದೆ.

ಏತ ನೀರಾವರಿ ಯೋಜನೆ ಗುತ್ತಿಗೆದಾರರು ಬಹುತೇಕ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎಂದವರು ಆರೋಪಿಸಿದರು. ಅಲ್ಲದೆ ಎರಡೂ ಗ್ರಾಮಗಳಿಗೆ ಬೇಸಿಗೆಯಲ್ಲಿ ಕುಡಿಯಲು ನೀರಿನ ತಾತ್ವಾರ ಇದ್ದು ಏತ ನೀರಾವರಿ ಯೋಜನೆ ಮರೀಚಿಕೆಯಾಗಿರುವುದು‌ ದುರಂತ. ಆ ಭಾಗದ ಗ್ರಾಮಪಂಚಾಯತ್ ಸದಸ್ಯರುಗಳು ಧ್ವನಿಯೆತ್ತದಿರುವುದು ಸರಿಯಲ್ಲ‌ ಎಂದರು. ಇದಕ್ಕೆ ಉತ್ತರಿಸಿದ ಉಪಾಧ್ಯಕ್ಷ ಗಿರೀಶ್ ಎಸ್. ನಾಯಕ್, ತಲ್ಲೂರು ಮತ್ತು ಉಪ್ಪಿನಕುದ್ರು ನೀರಿನ ಅಗತ್ಯತೆ ಬಗ್ಗೆ ಈಗಾಗಾಲೇ ಶಾಸಕರ ಬಳಿ ಮನವಿ‌ ಮಾಡಿದ್ದೇವೆ ಎಂದರು. ಏತ ನೀರಾವರಿ ಕಾಮಗಾರಿಯ ಹಿನ್ನೆಲೆ ವಿದ್ಯುತ್ ಸಂಪರ್ಕದ ಕುರಿತು ಗ್ರಾಮಪಂಚಾಯತ್ ಅನುಮತಿ ಪಡೆಯದೆ ಕೆಲಸ ಮಾಡಲಾಗಿದೆ ಎಂದು ಮೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳಲಾಯಿತು. ತಲ್ಲೂರು ಗ್ರಾಮಕ್ಕೆ ಏತ ನೀರಾವರಿಯಿಂದ ನೀರು ಹರಿಸದಿದ್ದರೆ ಇಲ್ಲಿಂದ ವಿದ್ಯುತ್ ಸಂಪರ್ಕ ಕಲ್ಪಿಸದಂತೆ ನಿರ್ಣಯ ಮಾಡಲು ಗ್ರಾಮಸ್ಥರಾದ ವೆಂಕಟ್, ಚಂದ್ರಮ ತಲ್ಲೂರು, ಕರಣ್ ಪೂಜಾರಿ ಆಗ್ರಹಿದರು.

ತಲ್ಲೂರು ಪೇಟೆಯಲ್ಲಿರುವ ವಸತಿ ಸಮುಚ್ಚಯವೊಂದರಿಂದ ಕೊಳಚೆ ನೀರನ್ನು ಚರಂಡಿಗೆ ಬಿಡುತ್ತಿದ್ದು ದುರ್ನಾತ ಬೀರುತ್ತಿದೆ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಿ, ಪಿಟ್ ತೆರವು ಮಾಡಿಸಿ‌ ಎಂದು ಚಂದ್ರಮ ತಲ್ಲೂರು ಆಗ್ರಹಿಸಿದರು. ಇದಕ್ಕೆ ಧ್ವನಿಗೂಡಸಿದ ಕರಣ ಪೂಜಾರಿ, ಇದು ಸಾರ್ವಜನಿಕರ ಬಹುದೊಡ್ಡ ಸಮಸ್ಯೆ, ಪ್ರತಿ ಗ್ರಾಮಸಭೆಯಲ್ಲಿ ಇದರ ಬಗ್ಗೆ ನಿರ್ಣಯಿಸಲಾಗುತ್ತಿದ್ದರೂ ಯಾವುದೇ ಸೂಕ್ತ ಕ್ರಮಕ್ಕೆ ಮುಂದಾಗದಿರುವುದು ದುರಂತ ಎಂದರು.

ಕಳೆದ ಗ್ರಾಮಸಭೆಯಲ್ಲಿ ಹೆದ್ದಾರಿ ಕಾಮಗಾರಿಯ ಗುತ್ತಿಗೆ ಕಂಪೆನಿ ಐ.ಆರ್.ಬಿ ಬಗ್ಗೆ ಹಲವು ದೂರುಗಳನ್ನು ಹೇಳಲಾಗಿತ್ತು. ಸಂಬಂಧಪಟ್ಟ ಅಧಿಕಾರಿಗಳು ಬಾರಲಿಲ್ಲ. ಮಳೆಗಾದಲ್ಲಿ ಈ ಬಾರಿ ಬಹಳಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವ ನಿರ್ಣಯ ಮಾಡುವಂತೆ ಮಾಜಿ ತಾ.ಪಂ ಸದಸ್ಯ, ಗ್ರಾಮಸ್ಥ ಕರಣ್ ಕುಮಾರ್ ಪೂಜಾರಿ ಹೇಳಿದರು.

ಉಪ್ಪಿನಕುದ್ರು ಚಿಪ್ಪು ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಗುರುತಿನ ಚೀಟಿ ನೀಡಬೇಕೆಂದು ಈ ಹಿಂದಿನ ಗ್ರಾಮಸಭೆಯಲ್ಲಿ ತೀರ್ಮಾನ ಮಾಡಲಾಗಿತ್ತು. ನೀರಿನಲ್ಲಿ ಕೆಲಸ ಮಾಡುವವರು ಏನಾದರೂ ಅವಘಡವಾದರೆ ಪರಿಹಾರಕ್ಕೆ ಇಲಾಖಾ ಗುರುತಿನ ಚೀಟಿ ಸಹಕಾರಿಯಾಗುತ್ತದೆ ಎಂದು ಚಂದ್ರಮ ತಲ್ಲೂರು ಹೇಳಿದರು. ಇದಕ್ಕೆ ಧ್ವನಿಗೂಡಿಸಿದ ವೆಂಕಟ, ವಿಜೇಂದ್ರ, ಅಶೋಕ್ ಮಾತನಾಡಿ ಜೀವನಭದ್ರತೆ ಒದಗಿಸಲು ಅಗತ್ಯ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.

ತಲ್ಲೂರು ವಿಜಯ ಬ್ಯಾಂಕ್ ನಲ್ಲಿ ಎಟಿಎಂ ಸಮಸ್ಯೆ ಬಗ್ಗೆ ಮಹಿಳೆಯೊಬ್ಬರು ಅಸಮಾಧಾನ ತೋಡಿಕೊಂಡರು. ತಲ್ಲೂರು 3ನೇ ವಾರ್ಡ್ ಆಶಾ ಕಾರ್ಯಕರ್ತೆ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ರತ್ನಾ ಪೂಜಾರಿ ಆರೋಪಿಸಿದರು. ತಲ್ಲೂರು ಕೋಟೆಬಾಗಿಲು ರಸ್ತೆಯಲ್ಲಿ ಅವೈಜ್ಞಾನಿಕ ಹಂಪ್ ಅಳವಡಿಸಿದ್ದನ್ನು ತೆರವು ಮಾಡಿದ್ದರೂ ಕೂಡ ಅವ್ಯಸವಸ್ಥೆ ಸರಿಪಡಿಸಿಲ್ಲ ಎಂದು ಆರೋಪಿಸಲಾಯಿತು. ಮಾರ್ಚ್ ತಿಂಗಳಲ್ಲಿ ಆರ್ಥಿಕ ವರ್ಷದ ಅಂತ್ಯವಾದ್ದರಿಂದ ಈಗ ಗ್ರಾಮಸಭೆ ಇಟ್ಟರೆ ಅಧಿಕಾರಿಗಳು ಬರೋದಿಲ್ಲ. ಕೋರಂ ಕೂಡ ಕೊರತೆ ಕಂಡುಬರುತ್ತಿದೆ ಎಂದು ಕರಣ್ ಕುಮಾರ್ ಪೂಜಾರಿ ಹೇಳಿದರು.

ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕಿ ಸುಮಲತಾ ನೋಡಲ್ ಅಧಿಕಾರಿಯಾಗಿ ಭಾಗವಹಿಸಿ‌ ಮಾತನಾಡಿ, ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ಸಕ್ರೀಯ ಪಾಲ್ಘೊಳ್ಳುವಿಕೆ ಅಗತ್ಯ. ಮಾರ್ಚ್ ತಿಂಗಳಲ್ಲಿ ಗ್ರಾಮಸಭೆ ಇಟ್ಟುಕೊಂಡಾಗ ಅಧಿಕಾರಿಗಳು ಆಗಮಿಸಲು ಕೊಂಚ ಸಮಸ್ಯೆಯಾಗುತ್ತದೆ. ಹಾಗಾಗಿ ಮಾರ್ಚಿನಲ್ಲಿ ಗ್ರಾಮಸಭೆ ನಡೆಸದಿರುವುದು ಸೂಕ್ತ ಎಂಬ ಸಲಹೆ ನೀಡಿದರು.

ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಉದಯ್ ಕುಮಾರ್ ತಲ್ಲೂರು ಮಾತನಾಡಿ, ಎಲ್ಲಾ ಅಧಿಕಾರಿಗಳು ಅವರವರ ಕಾರ್ಯ ವ್ಯಾಪ್ತಿಯಲ್ಲಿ ಸಕ್ರೀಯವಾಗಿ ಕೆಲಸ ಮಾಡಿದಾಗ ಗ್ರಾಮದ ಅಭಿವೃದ್ಧಿ ಸಾಧ್ಯವಿದೆ. ಸಾಮಾಜಿಕ ನ್ಯಾಯ ಸಮಿತಿ ಮೂಲಕ ಹಲವು ಸಮಸ್ಯೆಗಳನ್ನು ಬಗೆಹರಿಸುವ ಕಾರ್ಯವಾಗಿದೆ. ಎಸ್ಸಿ ಎಸ್ಟಿ ಪ್ರಕರಣದಲ್ಲಿ ಬಹುಮತ ವಜಾ ಆದಾಗ ಬಹುಮತಕ್ಕೆ ಸಹಿ ಹಾಕಿದ ಸದಸ್ಯರ ಮೇಲೆ ದಲಿತ ದೌರ್ಜನ್ಯ ಪ್ರಕರಣದಡಿ ದೂರು ದಾಖಲಿಸಬಹುದಾಗಿದೆ. ಈ ಬಾರಿ ಗ್ರಾಮಪಂಚಾಯತ್ ವತಿಯಿಂದ ಪರಿಶಿಷ್ಟ ಜಾತಿ,ಪಂಗಡಕ್ಕೆ ಅಗತ್ಯ ಸವಲತ್ತು ವಿತರಣೆ ನೀಡುವ ಕೆಲಸ ಆಗಲಿದೆ ಎಂದರು.

ಸಭೆ ಆರಂಭದಲ್ಲಿ ಶಿಕ್ಷಣ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಹೊರತುಪಡಿಸಿ ಸಭೆಗೆ ಬೇರೆ ಇಲಾಖೆ ಅಧಿಕಾರಿಗಳು ಬಾರದ ಬಗ್ಗೆ ವೆಂಕಟ ಅಸಮಾಧಾನ ವ್ಯಕ್ತಪಡಿಸಿದರು. ಬಳಿಕ ಬಹುತೇಕ ಎಲ್ಲಾ ಇಲಾಖಾಧಿಕಾರಿಗಳು ಆಗಮಿಸಿ ತಮ್ಮ ಇಲಾಖಾ ವ್ಯಾಪ್ತಿಯ ವಿಚಾರಗಳನ್ನು ಸಭೆ ಗಮನಕ್ಕೆ ತಂದರು.

ತಲ್ಲೂರು ಗ್ರಾ.ಪಂ ಅಧ್ಯಕ್ಷೆ ಭೀಮವ್ವ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಗಿರೀಶ್ ಎಸ್. ನಾಯಕ್, ಸದಸ್ಯರುಗಳು ಉಪಸ್ಥಿತರಿದ್ದರು. ಗ್ರಾ.ಪಂ ಅಭಿವೃದ್ಧಿ‌ ಅಧಿಕಾರಿ ನಾಗರತ್ನಾ ಸ್ವಾಗತಿಸಿದರು, ಕಾರ್ಯದರ್ಶಿ ರತ್ನಾ‌ ಕೆ. ವಂದಿಸಿದರು.

Comments are closed.