(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಪ್ರತಿ ಬಾರಿ ಸಭೆ ನಡೆಸಿದಾಗಲೂ ಒಂದೊಂದು ದಿನಾಂಕ ಪಡೆಯುತ್ತೀರಿ..ಆದರೆ ಪ್ರಗತಿ ಕಾರ್ಯ ಮಾತ್ರ ನಡೆಯುತ್ತಿಲ್ಲ..ಜನರು ತುಂಬಾ ಸಮಸ್ಯೆ ಅನುಭವಿಸುತ್ತಿದ್ದಾರೆ. ಅವರ ಸಮಸ್ಯೆಗೆ ಶೀಘ್ರ ಸ್ಪಂಧಿಸುವ ಕಾರ್ಯ ಮಾಡಬೇಕು. ಎ.10ಕ್ಕೆ ಅಂತಿಮ ಗಡುವು ನೀಡಲಾಗಿದ್ದು ಅಂದು ಪರಿಶೀಲನೆ ನಡೆಸುವೆ. ಒಪ್ಪಿದ ಕಾಮಗಾರಿ ಮಾಡದಿದ್ದರೆ ಕಾನೂನು ಅನುಸಾರ ಕ್ರಮ ಕೈಗೊಳ್ಳುವುದು ನಿಶ್ಚಿತ ಎಂದು ಕುಂದಾಪುರ ಉಪವಿಭಾಗಾಧಿಕಾರಿ ಕೆ. ರಾಜು ಎಚ್ಚರಿಕೆ ನೀಡಿದ್ದಾರೆ.
ಕುಂದಾಪುರದ ಮಿನಿವಿಧಾನಸೌಧದ ಕಚೇರಿಯಲ್ಲಿ ಗುರುವಾರ ರಾಷ್ಟ್ರೀಯ ಹೆದ್ದಾರಿ ಸಂಬಂಧಪಟ್ಟ ಅಧಿಕಾರಿಗಳು, ಹಾಗೂ ಗುತ್ತಿಗೆ ಇಲಾಖೆ, ಪುರಸಭೆ ಹಾಗೂ ಪೊಲೀಸ್ ಇಲಾಖೆ ಹಾಗೂ ಹೆದ್ದಾರಿ ಕಾಮಗಾರಿ ಗುತ್ತಿಗೆ ಪಡೆದ ನವಯುಗ ಸಂಸ್ಥೆ ಜೊತೆಗಿನ ಸಭೆಯಲ್ಲಿ ಸಂಬಂಧಪಟ್ಟವರಿಗೆ ಎಸಿ ತಾಕೀತು ಮಾಡಿದರು.
ಎಸಿ ಕೆ. ರಾಜು ಅವರಿಂದ ಗಡುವು
ಕುಂದಾಪುರ ನಗರ ವ್ಯಾಪ್ತಿಯ ನಡುವೆ ರಾ. ಹೆದ್ದಾರಿ ಕಾಮಗಾರಿ ಅವೈಜ್ಞಾನಿಕ ಕೆಲಸದಿಂದ ಜನರು ಹೈರಾಣಾಗಿದ್ದಾರೆ. ಸಂಬಂಧಪಟ್ಟವರ ಬೇಜವಬ್ದಾರಿತನದಿಂದ ಇಲಾಖಾಧಿಕಾರಿಗಳು ನಾಗರಿಕರ ಠೀಕೆಗೆ ಗುರಿಯಾಗಿದ್ದಾರೆ. ಎ.10ರೊಳಗೆ ಬಹುತೇಕ ಎಲ್ಲಾ ಸಮಸ್ಯೆ ನಿವಾರಣೆ ಮಾಡಬೇಕು. ಸಮಸ್ಯೆ ಬಗೆ ಹರಿಸಿ ಎಂದು ಕೊನೆಯದಾಗಿ ವಿನಂತಿಸುವೆ. ಸಮಸ್ಯೆ ಬಗೆ ಹರಿಸದಿದ್ದರೆ ಮುಂದಿನ ದಿನದಲ್ಲಿ ಸೂಕ್ತ ಕಾನೂನು ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಎಸಿ ಸಭೆಯಲ್ಲಿ ಯಾವೆಲ್ಲಾ ಕಾಮಗಾರಿಗೆ ಗಡುವು..?
ಕುಂದಾಪುರ ನಗರ ಪ್ರವೇಶಕ್ಕೆ ಕುಂದಾಪುರ ಬೊಬ್ಬರ್ಯನ ಕಟ್ಟೆ ಬಳಿ ಎಲ್.ಐ.ಸಿ ರಸ್ತೆ ಸಮೀಪದ ರಾ. ಹೆದ್ದಾರಿಯಿಂದ ಸರ್ವೀಸ್ ರಸ್ತೆ ಮೂಲಕವಾಗಿ ಅನುಕೂಲ ಕಲ್ಪಿಸಲು ಕ್ರಮಕೈಗೊಂಡು ಎ.11 ರಿಂದ ನಗರ ಪ್ರವೇಶಕ್ಕೆ ಪ್ರಾಯೋಗಿಕವಾಗಿ ವ್ಯವಸ್ಥೆ ಮಾಡಬೇಕು. ಒಂದು ತಿಂಗಳ ಮಟ್ಟಿಗೆ ಈ ಪ್ರಾಯೋಗಿಕ ಸಂಚಾರ ವ್ಯವಸ್ಥೆಯಿರಲಿದ್ದು ಯಾವುದೇ ಅವಘಡ ಸಂಭವಿಸಿದಲ್ಲಿ ಈ ಪ್ರದೇಶ ಬ್ಲಾಕ್ ಸ್ಪಾಟ್ ಆಗಿ ಗುರುತಿಸಿಕೊಳ್ಳಲಿದೆ. ಹೆದ್ದಾರಿಯಲ್ಲಿ ದಾರಿದೀಪವಿಲ್ಲದೆ ಈಗಾಗಾಲೇ ಹಲವು ಅವಘಡಗಳಿಗೆ ಕಾರಣವಾಗಿದ್ದು ಎ. 10ರೊಳಗೆ ದಾರಿದೀಪ ಸಮಸ್ಯೆ ಬಗೆಹರಿಸಿ ಅಪಘಾತ ತಪ್ಪಿಸಬೇಕು. ಇನ್ನು ನಗರ ಪ್ರವೇಶಿಸುವ ಸೂಕ್ತ ಸ್ಥಳದಲ್ಲಿ ‘ಕುಂದಾಪುರ’ ಎಂದು ದೊಡ್ಡ ನಾಮಫಲಕ ಅಳವಡಿಸಲು ಸೂಚನೆ. ಶಾಸ್ತ್ರೀ ಸರ್ಕಲ್ ಬಳಿ ಸರ್ವೀಸ್ ರಸ್ತೆಗೆ ಡಾಮರೀಕರಣ ಮಾಡಲು ಸೂಚನೆ. ಎ.5 ರೊಳಗೆ ಶಾಸ್ತ್ರೀ ಸರ್ಕಲ್ ಫ್ಲೈಓವರ್ ಕೆಳಭಾಗದಲ್ಲಿರುವ ಸಂಬಂಧಿತ ಕಾಮಗಾರಿ ನಡೆಸಿದ ಗುಜರಿ ವಸ್ತುಗಳನ್ನು ತೆರವು ಮಾಡಬೇಕು. ಮಳೆಗಾಲ ಆರಂಭವಾಗುತ್ತಿದ್ದು ಹೆದ್ದಾರಿ ಸಮೀಪದ ಚರಂಡಿ ನಿರ್ವಹಣೆ ಹಾಗೂ ಫ್ಲೈಓವರ್ ನಿಂದ ಮಳೆ ನೀರು ರಸ್ತೆಗೆ ಬೀಳದಂತೆ ಕ್ರಮವಹಿಸಲು ಎ.30 ತನಕ ಗಡುವು ನೀಡಲಾಗಿದೆ.
ಎಸಿ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಕುಂದಾಪುರ ತಹಶಿಲ್ದಾರ್ ಕಿರಣ್ ಗೌರಯ್ಯ, ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್ ಹಾಗೂ ಸಂಬಂದಿಸಿದವರು ಹಾಗೂ ನವಯುಗ ಕಂಪೆನಿಯವರು ಉಪಸ್ಥಿತರಿದ್ದರು.
Comments are closed.