ಕರಾವಳಿ

ಅಲೆಗಳ ರಭಸಕ್ಕೆ ಸಿಕ್ಕು ಮುಳುಗಡೆಯಾದ ಬೋಟ್: ಐವರು ಮೀನುಗಾರರ ರಕ್ಷಣೆ, ಅಪಾರ ನಷ್ಟ

Pinterest LinkedIn Tumblr

ಕುಂದಾಪುರ: ಆಳಸಮುದ್ರದ ಮೀನುಗಾರಿಕೆಗೆ ತೆರಳಿದ್ದ ಬೋಟೊಂದು ಅಲೆಗಳ ಒತ್ತಡಕ್ಕೆ ಸಿಲುಕಿ ಮುಳುಗಡೆಯಾಗಿದ್ದು, ಬೋಟಿನಲ್ಲಿದ್ದ ಐದು ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ.

ಮುಳುಗಡೆಯಾಗುತ್ತಿದ್ದ ಬೋಟಿನಲ್ಲಿದ್ದ ತಾಂಡೇಲಾ ನಾಗಪ್ಪ ರಾಮ ಅಂಬಿಗ, ಕಲಾಸಿಯವರಾದ ಸಚಿನ್ ಉಲ್ಲಾಸ, ದೀಪಕ್ ಖಾರ್ವಿ, ಸುಭಾಷ್ ಗಾಂಗೇಶ್ವರ, ಸೂರಜ್ ಕುಮಾರ್ ಭಗತ್ ಅವರನ್ನು ಇನ್ನೊಂದು ಬೋಟಿನಲ್ಲಿದ್ದ ಮೀನುಗಾರರು ರಕ್ಷಿಸಿ ಸುರಕ್ಷಿತವಾಗಿ ದಡಕ್ಕೆ ಕರೆತಂದಿದ್ದಾರೆ.

ಘಟನೆ ವಿವರ:
ಉದ್ಯಾವರ ಸಂಪಿಗೆನಗರದ ಮುಹಮ್ಮದ್ ಹನೀಫ್ ಮಾಲೀಕತ್ವದ ಮನಾಲ್ ಹೆಸರಿನ ಬೋಟು ಮಲ್ಪೆಯಿಂದ ಆಳಸಮುದ್ರದ ಮೀನುಗಾರಿಕೆಗೆ ತೆರಳಿತ್ತು. ಮಧ್ಯರಾತ್ರಿ ಗಂಗೊಳ್ಳಿಯಿಂದ ನೇರ ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಗಾಳಿಯ ಅಬ್ಬರಕ್ಕೆ ಸಮುದ್ರದ ಅಲೆಗಳ ಒತ್ತಡಕ್ಕೆ ಇಂಜಿನ್ ಕೆಳಭಾಗದ ಪೈಬಲ್ ಶೀಟ್ ಒಡೆದಿದೆ ಎನ್ನಲಾಗಿದೆ. ಬಳಿಕ ನೀರು ಬೋಟಿನೊಳಗೆ ನುಗ್ಗಲು ಪ್ರಾರಂಭವಾಗಿದ್ದು, ಕೂಡಲೇ ಹತ್ತಿರದಲ್ಲಿದ್ದ ರಾಜರಕ್ಷಾ ಬೋಟಿನವರಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಬಂದ ರಾಜರಕ್ಷಾ ಬೋಟಿನವರು ಐವರು ಮೀನುಗಾರರನ್ನು ರಕ್ಷಿಸುವಲ್ಲಿ‌ ಯಶಸ್ವಿಯಾಗಿದ್ದಾರೆ.

ಘಟನೆ ವೇಳೆ ಬೋಟು ಸಮುದ್ರಪಾಲಾಗಿದ್ದು, ಸುಮಾರು 45ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಈ ಬಗ್ಗೆ ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.