ಕರಾವಳಿ

ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ರಾಜ್ಯದಲ್ಲೇ ನಂಬರ್ ಒನ್: ಉಪ್ಪುಂದದಲ್ಲಿ ಸಹಕಾರಿ ಸಚಿವ ಎಸ್.ಟಿ. ಸೋಮಶೇಖರ್

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ರಾಜ್ಯದಲ್ಲೇ ನಂಬರ್ ಒನ್ ಆಗಿದ್ದು ಅದರ ಕಾರ್ಯವೈಖರಿ ಇತರ ಬ್ಯಾಂಕ್ ಗಳಿಗೆ ಮಾದರಿಯಾಗಿದೆ ಎಂದು ರಾಜ್ಯ ಸಹಕಾರಿ ಸಚಿವ ಎಸ್. ಟಿ. ಸೋಮಶೇಖರ್ ಅಭಿಪ್ರಾಯಪಟ್ಟರು.

ಅವರು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಇದರ 110ನೇ ಉಪ್ಪುಂದ ಶಾಖೆಯ ಉದ್ಘಾಟನಾ ಸಮಾರಂಭ ಮತ್ತು ನವೋದಯ ಸ್ವಸಹಾಯ ಸಂಘಗಳ ಸಾಧನಾ ಸಮಾವೇಶವನ್ನು ಉದ್ಘಾಟಿಸಿ ಮಾತಾಡಿದರು.

ಕೋವಿಡ್ ಸಂದರ್ಭದಲ್ಲಿ ಸಹಕಾರಿ ಬ್ಯಾಂಕ್ ಗಳಿಂದ ಸಾಲ ಪಡೆದಿದ್ದ ಸದಸ್ಯರು ಮರಣ ಹೊಂದಿದ್ದಾರೆ. ಈ ಬಗ್ಗೆ ಅಪೆಕ್ಸ್ ಬ್ಯಾಂಕ್ ನಲ್ಲಿ ಸಭೆ ನಡೆಸಿ ಮೃತರ ಕುಟುಂಬಗಳಿಗೆ ನೆರವಾಗುವ ನಿರ್ಧಾರಕ್ಕೆ ಬರಲಾಯಿತು. ಈ ವೇಳೆ ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ. ಎನ್. ರಾಜೇಂದ್ರ ಕುಮಾರ್ ಅವರು ತಲಾ 1 ಲಕ್ಷ ರೂ. ನೆರವು ಘೋಷಣೆ ಮಾಡಿದ್ದು ಅದರಂತೆ ಇಂದು ಮೃತರ ಕುಟುಂಬಕ್ಕೆ ಚೆಕ್ ಹಸ್ತಾಂತರಿಸಲಾಗಿದೆ. ಎಲ್ಲ ಸಹಕಾರ ಸಂಘಗಳನ್ನು ಒಂದೇ ತಂತ್ರಾಂಶದಡಿಯಲ್ಲಿ ತರಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದ್ದು ಅವರು ಒಂದು ವರ್ಷದೊಳಗೆ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವ ಭರವಸೆ ನೀಡಿದ್ದಾರೆ. ಕರ್ನಾಟಕದಲ್ಲಿ 15 ಹಾಲಿನ ಯೂನಿಯನ್ ಇದ್ದು 26 ಲಕ್ಷ ರೈತರು ಹಾಲು ಪೂರೈಕೆ ಮಾಡುತ್ತಿದ್ದಾರೆ. ಅದರಲ್ಲಿ 9 ಲಕ್ಷ ಮಹಿಳೆಯರು ಸದಸ್ಯರಾಗಿರುವುದು ಖುಷಿಯ ವಿಚಾರ. ಹೈನುಗಾರಿಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರಕಾರ ಎಲ್ಲರಿಗೂ ಕಾರ್ಡ್ ವಿತರಿಸಲು ಸರಕಾರ ಮುಂದಾಗಿದೆ.” ಎಂದರು.

ಬಳಿಕ ಮಾತಾಡಿದ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು, “ಉತ್ತರ ಕರ್ನಾಟಕ ಭಾಗದ ಹಲವಾರು ಕಾರ್ಖಾನೆಗಳಿಗೆ ಎಸ್ ಸಿಡಿಸಿಸಿ ಬ್ಯಾಂಕ್ ಸಾಲ ಸೌಲಭ್ಯ ನೀಡುತ್ತಾ ಬಂದಿದೆ. ನನ್ನ ನಿರಾಣಿ ಗ್ರೂಪ್ ಗೆ 25 ವರ್ಷಗಳ ಹಿಂದೆ 12 ಕೋಟಿ ರೂ. ಸಾಲವನ್ನು ರಾಜೇಂದ್ರ ಕುಮಾರ್ ಅವರು ನೀಡಿದ್ದು ಅದರಿಂದ ನನ್ನ ಉದ್ದಿಮೆ ಇಂದು ಯಶಸ್ವಿಯಾಗಿ ಬೆಳೆದು ನಿಂತ ಪರಿಣಾಮ 75,000 ಮಂದಿ ದುಡಿಯಲು ಅವಕಾಶ ಸಿಕ್ಕಿದೆ. ನನ್ನ ಸಂಸ್ಥೆ ಸಕ್ಕರೆ ಉತ್ಪಾದನೆಯಲ್ಲಿ ದೇಶದಲ್ಲೇ ಎರಡನೇ ಸ್ಥಾನ ಪಡೆಯಲು ರಾಜೇಂದ್ರ ಕುಮಾರ್ ಅವರ ಪ್ರೋತ್ಸಾಹವೇ ಕಾರಣ” ಎಂದರು.

ಇದೇ ವೇಳೆ ಬಿಜೂರಿನ ನೂತನ ಸ್ವಸಹಾಯ ಗುಂಪಿನ ಉದ್ಘಾಟನೆಯನ್ನು ಕೃಷಿ ಸಚಿವ ಬಿ. ಸಿ. ಪಾಟೀಲ್ ನೆರವೇರಿಸಿದರು.ಬಳಿಕ ಮಾತಾಡಿದ ಅವರು, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ. ಹೆಣ್ಣುಮಕ್ಕಳು ಸ್ವಾವಲಂಬಿಯಾದರೆ ಆಕೆಯ ಇಡೀ ಕುಟುಂಬದ ಅಭಿವೃದ್ಧಿಯಾಗುತ್ತದೆ. ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅವರು ನವೋದಯ ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರಿಗೆ ಸಾಲ ನೀಡಿ ಅವರನ್ನು ಸ್ವಾವಲಂಬಿ ಬದುಕಿಗೆ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಕಾರ್ಯ. ಸರಕಾರಗಳು ಮಾಡಬೇಕಿರುವ ಕೆಲಸವನ್ನು ಇಂದು ರಾಜೇಂದ್ರ ಕುಮಾರ್ ಮಾಡುತ್ತಾ ಬಂದಿದ್ದಾರೆ. ಇದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ. ಅವರ ಸಾಮಾಜಿಕ ಕಳಕಳಿ ಇದೇ ರೀತಿ ಮುಂದುವರಿದು ನಾಡಿನೆಲ್ಲೆಡೆಯ ಜನರು ಪ್ರಯೋಜನ ಪಡೆಯುವಂತಾಗಲಿ ಎಂದರು.

ಸಮಾವೇಶವನ್ನು ಉದ್ದೇಶಿಸಿ ಮಾತಾಡಿದ
ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು, ಉಪ್ಪುಂದ ಶಾಖೆಯು ಉದ್ಘಾಟನೆಗೊಂಡ ದಿನವೇ 4000 ಖಾತೆಗಳು ತೆರೆಯಲ್ಪಟ್ಟಿದ್ದು ಜನರ ಹೃದಯ ವೈಶಾಲ್ಯತೆ ತೋರಿಸುತ್ತದೆ‌‌‌. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರ್ಥಿಕ ಸಂಕಷ್ಟದಿಂದ ಸಕಾಲದಲ್ಲಿ ಸಾಲ ಸಿಗದ ಕಾರಣಕ್ಕೆ ಯಾರೂ ಆತ್ಮಹತ್ಯೆ ಮಾಡಿಕೊಂಡಿಲ್ಲ. ಅದೇ ರೀತಿ ಶೇ.100ರಷ್ಟು ಸಾಲ ಮರುಪಾವತಿಯಾಗುತ್ತಿದೆ. ಇದು ನಾವೆಲ್ಲರೂ ಹೆಮ್ಮೆ ಪಡಬೇಕಾದ ಸಂಗತಿಯಾಗಿದೆ. ಬ್ಯಾಂಕ್ ಇಷ್ಟು ದೊಡ್ಡಮಟ್ಟದಲ್ಲಿ ಬೆಳೆಯಲು ಕಾರಣ ನಾನೊಬ್ಬನೇ ಅಲ್ಲ, ನೀವು. ಯಾಕೆಂದರೆ ನೀವು ಪಡೆದುಕೊಂಡ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿದ ಕಾರಣ ಇದು ಸಾಧ್ಯವಾಯಿತು. ಬರೀ ಭಾಷಣದಲ್ಲಿ ಮಾತೆಯರೇ ತಾಯಂದಿರೇ ಎಂದರೆ ಸಾಲದು. ನಾನು ನಿಮ್ಮನ್ನು ಸ್ವವಲಂಬಿಯನ್ನಾಗಿ ಮಾಡಲು ನಿಮ್ಮನ್ನು ನಂಬಿ ಸಾಲ ನೀಡುತ್ತಿದ್ದೇನೆ. ಇದಕ್ಕಾಗಿ ಮನೆ ಅಡಮಾನ ಇಡಬೇಕಿಲ್ಲ. ನಿಮ್ಮದೇ ಗುಂಪು ರಚಿಸಿದ್ದೀರಿ, ನಿಮ್ಮೆಲ್ಲರ ಮೇಲೆ ವಿಶ್ವಾಸವಿರಿಸಿ ಸಾಲ ನೀಡಿದ್ದೇನೆ. ನೀವು ಮರುಪಾವತಿ ಮಾಡಿದ್ದೀರಿ. ನೀವು ನನಗೇನೂ ಕೊಡುವುದು ಬೇಡ, ಸಾಲ ಪಡೆದು ಅನ್ಯ ಖರ್ಚು ಮಾಡದೇ ನಿಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ ಅವರನ್ನು ಮುಂದೆ ಅವರ ಕಾಲ ಮೇಲೆ ನಿಲ್ಲಿಸಿ. ಅವರು ನಿಮ್ಮ ಇಡೀ ಕುಟುಂಬಕ್ಕೆ ಬೆಳಕಾಗುತ್ತಾರೆ. ಇದು ನನ್ನೊಬ್ಬನ ಸಾಧನೆಯಲ್ಲ ನಮ್ಮೆಲ್ಲರ ಟೀಮ್ ವರ್ಕ್ ನಿಂದ ಇದು ಸಾಧ್ಯವಾಗಿದೆ ಎಂದರು.

ಇದೇ ವೇಳೆ ಕೋವಿಡ್ ನಿಂದ ಮೃತಪಟ್ಟ ನವೋದಯ ಸ್ವಸಹಾಯ ಸಂಘದ ಸದಸ್ಯರ ಕುಟುಂಬಕ್ಕೆ ಆರ್ಥಿಕ ನೆರವಿನ ಚೆಕ್ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಮಹಿಳಾ ಸ್ವಸಹಾಯ ಗುಂಪುಗಳಿಗೆ ಸಾಲ ಸೌಲಭ್ಯ ವಿತರಿಸಲಾಯಿತು. ಮೃತ ಸದಸ್ಯರ ಚೈತನ್ಯ ವಿಮಾ ಚೆಕ್ ಅನ್ನು ಕುಟುಂಬ ಸದಸ್ಯರಿಗೆ ವಿತರಿಸಲಾಯಿತು.
ಉಪ್ಪುಂದ ನೂತನ ಶಾಖೆಯಿಂದ ವಾಹನದ ಸಾಲ ಪತ್ರ ವಿತರಣೆ ಮಾಡಲಾಯಿತು.

ರಾಜ್ಯ ಹಿಂದುಳಿದ ವರ್ಗಗಳ ಯೋಜನಾ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ ಹೆಗ್ಡೆ ಗಣಕೀರಣ ಉದ್ಘಾಟಿಸಿದರು. ಬೈಂದೂರು ಶಾಸಕ ಬಿ.ಎಮ್.ಸುಕುಮಾರ ಶೆಟ್ಟಿ ಭದ್ರತಾಕೋಶ ಉದ್ಘಾಟಿಸಿದರು. ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ವಾಹನ ಸಾಲ ಪತ್ರ ವಿತರಿಸಿದರು. ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಲಾಕರ್ ಕೀ ಹಸ್ತಾಂತರಿಸಿದರು.

ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಜಯಕರ ಶೆಟ್ಟಿ ಇಂದ್ರಾಳಿ, ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶಪಾಲ್ ಎ.ಸುವರ್ಣ, ಉಪ್ಪುಂದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿ ಖಾರ್ವಿ, ಕಟ್ಟಡದ ಮಾಲಕ ಹಿರಿಯಣ್ಣ ಶೆಟ್ಟಿ, ಎಸ್.ಸಿ.ಡಿ.ಸಿ.ಸಿ ಬ್ಯಾಂಕಿನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಬಿ. ಸಹಕಾರ ಇಲಾಖೆಯ ಉಪ ನಿಬಂಧಕ ಪ್ರವೀಣ್ ಬಿ. ನಾಯಕ್, ಎಂ.ವಾದಿರಾಜ ಶೆಟ್ಟಿ, ಶಶಿಕುಮಾರ್ ರೈ. ಐಕಳಬಾವ ದೇವಿಪ್ರಸಾದ ಶೆಟ್ಟಿ ಬೆಳಪು, ಕೆ.ಹರಿಶ್ಚಂದ್ರ, ಬಿ.ಅಶೋಕ ಕುಮಾರ್ ಶೆಟ್ಟಿ, ರಾಜೇಶ್ ರಾವ್, ಸದಾಶಿವ ಉಳ್ಳಾಲ್, ಸಹಕಾರಿ ಇಲಾಖೆಯ ಅಧಿಕಾರಿಗಳು, ಕುಂದಾಪುರ ಹಾಗೂ ಬೈಂದೂರು ತಾಲೂಕಿನ ವಿವಿಧ ಸಹಕಾರ ಸಂಸ್ಥೆಗಳ ಅಧ್ಯಕ್ಷರು ಇದ್ದರು.

ಎಸ್ಸಿಡಿಸಿಸಿ ಬ್ಯಾಂಕಿನ ನಿರ್ದೇಶಕರಾದ ಎಸ್.ರಾಜು ಪೂಜಾರಿ ಸ್ವಾಗತಿಸಿದರು, ಮೊಳವಳ್ಳಿ ಮಹೇಶ್ ಹೆಗ್ಡೆ ವಂದಿಸಿದರು, ಪತ್ರಕರ್ತ ಕೆ.ಸಿ ರಾಜೇಶ್ ನಿರೂಪಿಸಿದರು.

Comments are closed.