ಕರ್ನಾಟಕ

ಸರಕಾರಿ ಹುದ್ದೆಗಳು ಕೋಟಿಕೋಟಿಗೆ ಹರಾಜಾಗ್ತಿದೆ: ಎಎಪಿ ಸೇರಿದ ಭಾಸ್ಕರ್ ರಾವ್ ಮಾಡಿದ್ರು ಗಂಭೀರ ಆರೋಪ..!

Pinterest LinkedIn Tumblr

ಬೆಂಗಳೂರು: ಬೆಂಗಳೂರಿನ ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಪೊಲೀಸ್ ವೃತ್ತಿಗೆ ರಾಜೀನಾಮೆ ನೀಡಿ ಅಮ್ ಆದ್ಮಿ ಪಕ್ಷ ಸೇರ್ಪಡೆಯಾಗಿದ್ದಾರೆ.

ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಬುಧವಾರ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಭಾಸ್ಕರ್ ರಾವ್, ತಾವು ಪೊಲೀಸ್ ವೃತ್ತಿಗೆ ಯಾಕೆ ರಾಜೀನಾಮೆ ನೀಡಿದ್ದು ಮತ್ತು ಅಮ್ ಆದ್ಮಿ ಪಕ್ಷಕ್ಕೆ ಯಾಕೆ ಸೇರ್ಪಡೆಯಾಗಿದ್ದು ಎಂಬುದದರ ಬಗ್ಗೆ ವಿಸ್ತೃತವಾಗಿ ಮಾತನಾಡಿದ್ದಾರೆ.

ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗದ ಬಗ್ಗೆ ಮಾತನಾಡಿದ ಅವರು ರಾಜ್ಯದಲ್ಲಿ ಭ್ರಷ್ಟಾಚಾರ ಗಗನಕ್ಕೆ ಏರಿದೆ. ಇದರ ವಿರುದ್ಧ ಆಪ್ ಪೊರಕೆ ಹಿಡಿದುಕೊಂಡು ಹೋರಾಟ ಮಾಡುತ್ತೆ ಎಂದರು. ನಾನು ಅಧಿಕಾರಿಯಾಗಿದ್ದಾಗ ಸಂದರ್ಭದಲ್ಲಿ ಎಲ್ಲ ಪಕ್ಷಗಳನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ರಾಜ್ಯದಲ್ಲಿ ಆಡಳಿತ ಸಂಪೂರ್ಣವಾಗಿ ಕುಸಿದು ಹೋಗಿದೆ. ರಾಜ್ಯದಲ್ಲಿ ಸಂಪನ್ಮೂಲಗಳ ಕೊರತೆ ಇಲ್ಲ, ಆದರೆ ನಾಯಕತ್ವದ ಕೊರತೆ ಇದೆ ಎಂಬ ಅಭಿಪ್ರಾಯಪಟ್ಟರು.

ಎರಡು ಪಕ್ಷಗಳು ಭ್ರಷ್ಟಾಚಾರದಲ್ಲಿ ಭಾಗಿಯಾಗಿದೆ. ಯಾವುದೇ ಪಕ್ಷಕ್ಕೆ ಮತ್ತೊಬ್ಬರ ಮೇಲೆ ಆರೋಪ ಮಾಡುವ ನೈತಿಕತೆ ಇಲ್ಲ. ಎಲ್ಲಾ ಕಡೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆರೋಪಿಸಿದರು. ಭ್ರಷ್ಟಾಚಾರಕ್ಕೆ ಅಧಿಕಾರಗಳನ್ನ ಬ್ಲೇಮ್ ಮಾಡಿದ್ರೆ ಆಗೋದಿಲ್ಲ. ಒಂದೊಂದು ಪೊಸ್ಟಿಂಗ್ ಗೆ ಕೋಟ್ಯಾಂತರ ರೂಪಾಯಿ ಕೇಳ್ತಾರೆ, ನಾನು ಕಣ್ಣಾರೆ ನೋಡಿದ್ದೇನೆ. ನಾನು ಪೊಲೀಸ್ ಕಮಿಷನರ್ ಆದ್ರೂ ಒಂದೇ ಒಂದು ಇನ್ಸೆಪೆಕ್ಟರ್ ಪೊಸ್ಟ್ ಹಾಕಿಸಿಕೊಳ್ಳಲು ಆಗಲಿಲ್ಲ. ಜನರ ಪರವಾಗಿ ನಾವು ಮಾತನಾಡಿದರೆ ರಾಜಕೀಯ ನಾಯಕರಿಗೆ ಕೋಪ ಬರುತ್ತದೆ ಎಂದು ಕಿಡಿಕಾರಿದರು.

ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದಾರೆ.‌ ಪ್ರಧಾನ ಮಂತ್ರಿಗಳ ತನಕ ಪತ್ರ ಬರೆದಿದ್ದಾರೆ. ಎಲ್ಲಾ ನಮ್ಮ ದುಡ್ಡಿನಿಂದ ಲ್ಯಾಂಡ್ ರೋವರ್, ರೇಂಜ್ ರೋವರ್ ಅಂತಹ ಐಶಾರಾಮಿ ಕಾರು ಖರೀದಿ‌ ಮಾಡಿದ್ದಾರೆ. ಮುಗ್ದ ಜನರಿಗೆ ದುಡ್ಡು ಕೊಟ್ಟು ಓಟ್ ಪಡೆದುಕೊಳ್ಳುತ್ತಿದ್ದಾರೆ. ಸ್ವಚ್ಛ ಆಡಳಿತ ಎರಡು ರಾಷ್ಟ್ರೀಯ ಪಕ್ಷಗಳಿಂದ ಕೊಡಲು ಆಗಿಲ್ಲ. ಸರ್ಕಾರದಲ್ಲಿ ಹಣದ ಕೊರತೆ‌ ಇಲ್ಲ. ಪ್ರಾಮಾಣಿಕತೆ ಕೊರತೆ ಇದೆ. ಹಣ ಕೊಟ್ಟು ರಾಜಕೀಯ ಪಕ್ಷಗಳು ಓಟು ಪಡೆದುಕೊಳ್ಳುತ್ತಿವೆ. ಬೆಂಗಳೂರು ನಗರದಲ್ಲಿ ಅಪರಾಧಿಗಳ ಜೊತೆ ರಾಜಕಾರಣಿಗಳು ಶಾಮೀಲಾಗುತ್ತಿದ್ದಾರೆ ಎಂದು ಐಎಂಎ ಹಗರಣ, ರಾಘವೇಂದ್ರ ಬ್ಯಾಂಕ್ ಹಗರಣಗಳ ಉದಾಹರಣೆ ನೀಡಿದರು.

ಮುಂದಿನ ದಿನಗಳಲ್ಲಿ ನನ್ನ ಮೇಲೆ ಕೇಸ್, ರೇಡ್ ಗಳು ನಡೆದರೂ ಅದನ್ನು ಎದುರಿಸಲು ಸಿದ್ಧವಾಗಿದ್ದೇನೆ. ಕನ್ನಡಿಗರ ಪರವಾಗಿ ಹೋರಾಟ ಮಾಡಲು, ಭ್ರಷ್ಟಾಚಾರ ನಿರ್ಮೂಲನೆ ಮಾಡಿ, ಬಡವರ ಪರವಾಗಿ ಕೆಲಸ ಮಾಡಲು ಬಂದಿದ್ದೇನೆ. ರಾಜಕೀಯ ಹುದ್ದೆ ಆಕಾಂಕ್ಷೆಯಿಂದ ಬೇರೆ ಪಕ್ಷಕ್ಕೆ ಹೋಗಿಲ್ಲ.‌ ನನಗೆ ಎಂಎಲ್ ಎ, ಸಂಸದ ಮಾಡಿ ಅಂತ ದೊಡ್ಡ ಪಕ್ಷಕ್ಕೆ ಹೋಗಲಿಲ್ಲ. ಬದಲಾಗಿ ಅಣ್ಣಾ ಹಜಾರೆ ಹೋರಾಟ, ಕೇಜ್ರೀವಾಲ್ ಆಡಳಿತ ನೋಡಿ ನಾನು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ ಎಂದು ಹೇಳಿದರು.

Comments are closed.