ಕರಾವಳಿ

ಕುಂದಾಪುರ ಕೋಡಿ ಸಮುದ್ರ ಕಿನಾರೆಯಲ್ಲಿ ಹಸೆಮಣೆ ಏರಿದ ಮಂಡ್ಯದ ಜೋಡಿ..!

Pinterest LinkedIn Tumblr

ಕುಂದಾಪುರ: ಕುಂದಾಪುರ ತಾಲೂಕು ಕೋಡಿಯ ಸಮುದ್ರ ಕಿನಾರೆಯಲ್ಲಿ ನಡೆದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸುದ್ದಿಯಾಗಿದೆ.

ಅರಬ್ಬೀ ಸಮುದ್ರದ ದಂಡೆಯ ಮರಳಿನ ರಾಶಿಯ ನಡುವೆ ವಧು – ವರರು ಹಸೆಮಣೆ ಏರಿ ಹಿಂದೂ ಧಾರ್ಮಿಕ ಪದ್ಧತಿಯಂತೆಯೇ ಜೋಡಿಯಾದರು. ಭವ್ಯವಾಗಿ ಸಿಂಗರಿಸಿದ ಕಲ್ಯಾಣಮಂಟಪ, ಬ್ಯಾಂಡು ವಾದ್ಯಗಳ ಸದ್ದು, ಆಹ್ವಾನಿತರ ಕಲರವ ಯಾವುದೂ ಇಲ್ಲದ ಈ ವಿವಾಹದಲ್ಲಿ ಪುರೋಹಿತರ ಮಂತ್ರಗಳಿಗೆ ಜೊತೆಯಾದುದು ಭೋರ್ಗರೆವ ಸಮುದ್ರದ ಅಲೆಗಳ ಅಬ್ಬರದ ಸದ್ದು, ಬೀಸುವ ಗಾಳಿಯ ಮೊರೆತ. ಎ. 6ರ ಬುಧವಾರ ಬೆಳಿಗ್ಗೆಯ ಶುಭ ಮುಹೂರ್ತದಲ್ಲಿ ಕುಂದಾಪುರ ಕೋಡಿಯ ಸಮುದ್ರ ದಡದಲ್ಲಿ ಈ ಶುಭ ವಿವಾಹ ನೆರವೇರಿತು. ಮಂಡ್ಯದ ಎಚ್. ಎನ್. ಚೈತ್ರಿಕಾ ಎಂಬ ವಧು ಕೋಲಾರದ ಮಾದೇಶ ಎಂಬ ವರನನ್ನು ವರಿಸಿ, ಸಮುದ್ರ ದಡದಲ್ಲಿ ಸಪ್ತಪದಿ ತುಳಿದು ಸತಿಪತಿಯಾದರು.

ಈ ವಧು-ವರ ಇಬ್ಬರೂ ಬೆಂಗಳೂರಿನಲ್ಲಿ ಕಾರ್ಪೊರೇಟ್ ಕಂಪೆನಿಯ ನೌಕರರು. ಕೋಲಾರ ಜಿಲ್ಲೆ, ಮಾಲೂರು ತಾಲೂಕಿನ ರಾಜಕೃಷ್ಣಪುರದ ಲಕ್ಷ್ಮಮ್ಮ ಮತ್ತು ವೆಂಕಟೇಶ್ ರ ಪುತ್ರ ವಿ. ಮಾದೇಶ ಮತ್ತು ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ಕೆಎಂ ದೊಡ್ಡಿ ನಿವಾಸಿಗಳಾದ ಅಂಬುಜಾಕ್ಷಿ ಮತ್ತು ನಾಗರಾಜು ರವರ ಪುತ್ರಿ ಚೈತ್ರಿಕಾ ಈ ವಿಶಿಷ್ಟ ವಿವಾಹದ ಮದುಮಕ್ಕಳು. ಲಿಂಗಾಯತ ಸಮುದಾಯದ ಇವರು ಎರಡೂ ಕಡೆಯ ಹಿರಿಯರು ನಿಶ್ಚಯಿಸಿದಂತೆಯೇ ವಿವಾಹವಾಗಿದ್ದರೂ, ತಮ್ಮ ವಿವಾಹ ವಿಶಿಷ್ಟವಾಗಿರಬೇಕು ಎಂಬ ಪ್ಲ್ಯಾನ್ ಮಾಡಿದರು. ಬೆಂಗಳೂರಿನ ಒಂದು ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆ ಇವರ ಕನಸನ್ನು ನನಸಾಗಿಸಲು‌ ಒಪ್ಪಿಕೊಂಡಿತು. ಆ ಸಂಸ್ಥೆಯ ಕೋರಿಕೆಯಂತೆ ಕೋಟೇಶ್ವರ ಕಟ್ಕೇರಿಯ ಖ್ಯಾತ ಪುರೋಹಿತ ಶಿವಾನಂದ ಐತಾಳರು ವೈದಿಕ ಸಂಪ್ರದಾಯದಂತೆ ಈ ಕಲ್ಯಾಣೋತ್ಸವವನ್ನು ನಡೆಸಿಕೊಟ್ಟರು. ಬುಧವಾರ ಬೆಳಗಿನ ಶುಭ ಮುಹೂರ್ತದಲ್ಲಿ ಕಡಲ ದಂಡೆಯಲ್ಲಿ ಶಾಸ್ತ್ರೋಕ್ತವಾಗಿ, ಅಗ್ನಿಸಾಕ್ಷಿಯಾಗಿ ಈ ಜೋಡಿ ಸಪ್ತಪದಿ ತುಳಿದು, ಹಾರ ಬದಲಿಸಿಕೊಂಡು ಸತಿಪತಿಯಾದರು.

ಹೋಮ, ಕನ್ಯಾದಾನ ಎಲ್ಲ ವಿಧಿಗಳನ್ನೂ ಸಂಪ್ರದಾಯಬದ್ಧವಾಗಿ ನೆರವೇರಿಸಲಾಗಿತ್ತು. ಆದರೆ, ಈ ವಿವಾಹ ಮಹೋತ್ಸವದಲ್ಲಿ ಸಿಂಗರಿಸಿದ ಮಂಟಪ, ಮಂಗಳ ವಾದ್ಯಗಳ ನಿನಾದ, ಪುಷ್ಕಳ ಭೋಜನಗಳು ಇರಲಿಲ್ಲ. ವಧು – ವರರ ತಂದೆ ತಾಯಂದಿರು, ಎರಡೂ ಕಡೆಯ ಕೆಲವೇ ಮಂದಿ ಸಮೀಪ ಬಂಧುಗಳು ಹಾಜರಿದ್ದರು.

Comments are closed.