ಕರಾವಳಿ

ಉಡುಪಿ ಜಿಲ್ಲೆಗೆ ಬರಲು ಪ್ರಮೋದ್ ಮುತಾಲಿಕರಿಗೆ ನಿರ್ಬಂಧ: ಸಚಿವರು, ಶಾಸಕರ ವಿರುದ್ಧ ಹಿಂದೂ ಸಂಘಟನೆ ಕಾರ್ಯಕರ್ತರ ಆಕ್ರೋಷ..!

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಉಡುಪಿ: ಗಂಗೊಳ್ಳಿಯ ವೀರೇಶ್ವರ ದೇವಸ್ಥಾನದಲ್ಲಿ ನಾಳೆ (ಏ.15 ಶುಕ್ರವಾರ) ನಡೆಯಲಿರುವ ಸಾಮೂಹಿಕ ಸತ್ಯನಾರಾಯಣ ಪೂಜೆ ಹಿನ್ನೆಲೆ ಸಂಜೆ ನಡೆಯುವ ಧಾರ್ಮಿಕ ಸಭೆಯಲ್ಲಿ ಪ್ರಮೋದ್ ಮುತಾಲಿಕ್ ಅವರು ಭಾಗಿಯಾಗದಂತೆ ಉಡುಪಿ ಜಿಲ್ಲಾಡಳಿತ ನಿರ್ಬಂಧ ಹೇರಿದ್ದು ಮುತಾಲಿಕ್ ಉಡುಪಿ ಜಿಲ್ಲೆಗೆ ಆಗಮಿಸಲು ನಿರ್ಬಂಧ ವಿಧಿಸಿ ಡಿಸಿ ಕೂರ್ಮಾ ರಾವ್ ಎಂ ಆದೇಶಿಸಿರುವುದು ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಆಕ್ರೋಷಕ್ಕೆ‌ ಕಾರಣವಾಗಿದೆ.

ಶ್ರೀರಾಮಸೇ‌ನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗಂಗೊಳ್ಳಿಗೆ ಆಗಮಿಸಿ ಪ್ರಚೋದನಾಕಾರಿ ಭಾಷಣ ಮಾಡಿದಲ್ಲಿ ಕಾನೂನು‌ ಸುವ್ಯವಸ್ಥೆ ಸಮಸ್ಯೆಯಾಗುವ ಸಾಧ್ಯತೆ ಇದೆ ಎಂದು ಡಿಸಿ ಈ ನಿರ್ಬಂಧ ಆದೇಶ ಮಾಡಿದ್ದು ಆದೇಶ ಹೊರಬೀಳುತ್ತಲೇ ಹಿಂದೂ ಸಂಘಟನೆ ಕಾರ್ಯಕರ್ತರು ಈ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

(ವಾಟ್ಸಾಪ್ ವೈರಲ್ ಪೋಸ್ಟ್)

ಇನ್ನು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ‌ ಸರಕಾರದ ವಿರುದ್ಧ ಆಕ್ರೊಷ ವ್ಯಕ್ತಪಡಿಸುತ್ತಿರುವುದು ಒಂದೆಡೆಯಾದರೆ ಉಡುಪಿ ಜಿಲ್ಲೆಯಲ್ಲಿ ಐವರು ಶಾಸಕರು ಹಾಗೂ ಇಬ್ಬರು ಸಚಿವರಿದ್ದರೂ ಕೂಡ ಈ ಆದೇಶ ಯಾಕೆ ಬಂತು? ಇದರ ಹಿಂದೆ ಯಾರಿದ್ದಾರೆ? ಜಿಲ್ಲಾಧಿಕಾರಿಗಳಿಗೆ ಆದೇಶ ಮಾಡಲಾಗದ ಸಚಿವರು ಶಾಸಕರು ಇರುವುದು ನಮ್ಮ ದೌರ್ಭಾಗ್ಯ ಎಂದು ತರಾಟಗೆತ್ತಿಕೊಂಡು ಬರೆದಿರುವ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.

ಈತನ್ಮಧ್ಯೆ ಕೆಲವು ವಾಟ್ಸಾಪ್ ಹಾಗೂ ಫೇಸ್ಬುಕ್ ಪೋಸ್ಟ್‌ಗಳಲ್ಲಿ ಮುತಾಲಿಕ್ ಗಂಗೊಳ್ಳಿಗೆ ಬಂದೇ ಬರುತ್ತಾರೆ. ಯಾವುದೇ ಗೊಂದಲ ಬೇಡ ಎಂಬ ಮಾತುಗಳು ಕೇಳಿಬರ್ತಿದೆ.

ನಾಳೆಯ ಬೆಳಿಗ್ಗೆ ಹಾಗೂ ಸಂಜೆಗಿನ ನಿಗಧಿತ ಕಾರ್ಯಕ್ರಮ ನಡೆದೇ ನಡೆಯುತ್ತದೆ‌. ಮುತಾಲಿಕ್ ಅವರಿಗೆ ನಿರ್ಬಂಧ ಹೇರಿರುವುದನ್ನು ಜಿಲ್ಲಾಡಳಿತ‌ ಹಿಂಪಡೆಯಬೇಕು ಎಂದು ಹಿಂದೂ ಜಾಗರಣ ವೇದಿಕೆ ಗಂಗೊಳ್ಳಿ ಘಟಕದ ಪ್ರಧಾನ ಕಾರ್ಯದರ್ಶಿ ಯಶವಂತ್ ಗಂಗೊಳ್ಳಿ ಹೇಳಿದ್ದಾರೆ.

ಒಟ್ಟಿನಲ್ಲಿ ನಾಳೆಯ ಗಂಗೊಳ್ಳಿಯ ಕಾರ್ಯಕ್ರಮ ಯಾವ ರೀತಿ ನಡೆಯುತ್ತೆ, ನಿರ್ಬಂಧದ ನಡುವೆ ಮುತಾಲಿಕ್ ಬರೋದು ಹೌದಾ? ಎಂಬ ಸೋಶಿಯಲ್ ಮೀಡಿಯಾ‌ ಚರ್ಚೆಗಳಿಗೆ ನಾಳೆಯೇ ಉತ್ತರ ಸಿಗಬೇಕಿದೆ.

 

Comments are closed.