ಕರಾವಳಿ

ಮಾನಹಾನಿಕರ ಪೋಸ್ಟರ್ ತಯಾರಿಸಿ ಪ್ರಾಧ್ಯಾಪಕಿಗೆ ಕಿರುಕುಳ; ಮೂವರ ಬಂಧನ

Pinterest LinkedIn Tumblr

ಮಂಗಳೂರು: ಕಾಲೇಜಿನ ಪ್ರಾಧ್ಯಾಪಕಿಯೊಬ್ಬರ ಬಗ್ಗೆ ಮಾನಹಾನಿಕರ ಪತ್ರವನ್ನು ಬರೆದು ಸಾರ್ವಜನಿಕ ಸ್ಥಳದಲ್ಲಿ ಪೋಸ್ಟರ್ ಅಂಟಿಸಿ ಕಿರುಕುಳ ನೀಡುತ್ತಿದ್ದ ಕಾಲೇಜಿನ ಸಂಚಾಲಕ ಹಾಗೂ ಇಬ್ಬರು ಪ್ರಾಧ್ಯಾಪಕರನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಬೆಳ್ತಂಗಡಿನ ತಾಲ್ಲೂಕಿನ ಪ್ರಕಾಶ್ ಶೆಣೈ, ಬಂಟ್ವಾಳದ ಪ್ರದೀಪ್ ಪೂಜಾರಿ, ಉಡುಪಿ ಜಿಲ್ಲೆ ಹೆಬ್ರಿ ತಾಲ್ಲೂಕಿನ ತಾರಾನಾಥ ಶೆಟ್ಟಿ ಎಂದು ಗುರುತಿಸಲಾಗಿದೆ.

ಬಂಟ್ವಾಳದ ಕಾಲೇಜೊಂದರ ಆಡಳಿತ ಮಂಡಳಿ ಹಾಗೂ ಶಿಕ್ಷಕರ ನಡುವಿನ ಪ್ರಾಧ್ಯಾಪಕರ ನೇಮಕಾತಿ ಹಾಗೂ ಆಡಳಿತ ವಿಚಾರದ ಗಲಾಟೆಯಲ್ಲಿ ಕಾಲೇಜಿನ ಪ್ರಾಧ್ಯಾಪಕಿ ವಿರುದ್ಧ ಮಾನಹಾನಿಕರವಾದ ಪತ್ರ ಹಂಚಲಾಗಿತ್ತು ಎನ್ನಲಾಗಿದೆ.

ಇನ್ನು ಮೊದಲಿಗೆ ಪ್ರಾಧ್ಯಾಪಕಿಯ ವಿರುದ್ಧ ಮಾನಹಾನಿಕರವಾದ ಬರಹವನ್ನು ಪೋಸ್ಟ್ ಕಾರ್ಡ್, ಇನ್ ಲ್ಯಾಂಡ್ ಲೆಟರ್ ಮೂಲಕ ಪ್ರಾಧ್ಯಾಪಕಿಯ ಭಾವಚಿತ್ರದೊಂದಿಗೆ ಸಹೋದ್ಯೋಗಿ ಪ್ರಾಧ್ಯಾಪಕರಿಗೆ, ಕಾಲೇಜಿನ ಮುಖ್ಯಸ್ಥರಿಗೆ, ಶಿಕ್ಷಣ ಇಲಾಖೆಯ ಉನ್ನತ ದರ್ಜೆಯ ಅಧಿಕಾರಿಗಳಿಗೆ ಕಳುಹಿಸಿಕೊಡುತ್ತಿದ್ದು, ಇದಾದ ನಂತರ ಪ್ರಾಧ್ಯಾಪಕಿಯ ಮೊಬೈಲ್ ನಂಬರ್ ಹಾಗೂ ಇ-ಮೇಲ್ ಐಡಿಯನ್ನು ನಮೂದಿಸಿ ಅಶ್ಲೀಲವಾಗಿ ಬರೆದು ಪೋಸ್ಟರ್ ಗಳನ್ನು ತಯಾರಿಸಿ ಸುಳ್ಯ, ಸುಬ್ರಹ್ಮಣ್ಯ, ಸಂಪಾಜೆ, ಮಡಿಕೇರಿ, ಮೈಸೂರು, ಚಿಕ್ಕಮಗಳೂರು, ಮೂಡಿಗೆರೆ, ಬಾಳೆಹೊನ್ನೂರು, ಎನ್ ಆರ್ ಪುರ, ಶಿವಮೊಗ್ಗ ಮುಂತಾದ ಬಸ್ ನಿಲ್ದಾಣಗಳ ಸಾರ್ವಜನಿಕ ಶೌಚಾಲಯಗಳಲ್ಲಿ ಅಂಟಿಸಿದ್ದು, ಇದನ್ನು ನೋಡಿದ ಸಾರ್ವಜನಿಕರು ಪ್ರಾಧ್ಯಾಪಕಿಗೆ ಕರೆ ಮಾಡಿ ಅಶ್ಲೀಲವಾಗಿ ಮಾತನಾಡಿ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಪ್ರಾಧ್ಯಾಪಕಿ ನೀಡಿದ ದೂರಿನ ಹಿನ್ನೆಲೆ ಮೂವರನ್ನು ಬಂಧಿಸಿದ್ದಾರೆ.

Comments are closed.