ಕರಾವಳಿ

ನನಗೆ ಪ್ರಿಯಾಂಕ್ ಖರ್ಗೆ ಮೇಲೆಯೇ ಡೌಟ್ ಆಗ್ತಿದೆ: ಗೃಹಸಚಿವ ಆರಗ ಜ್ಞಾನೇಂದ್ರ (Video)

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಪಿಎಸ್ಐ ನೇಮಕಾತಿ ವಿಚಾರದಲ್ಲಿ ನಮಗೆ ಸಾಕ್ಷ್ಯಾಧಾರಗಳು ದೊರೆತ ಕೂಡಲೇ ಸಿಓಡಿ ತನಿಖೆಗೆ ಆದೇಶಿಸಲಾಗಿದೆ. ಶಾಸಕ ಪ್ರೀಯಾಂಕ ಖರ್ಗೆ ಅವರ ಬಳಿ ಪ್ರಕರಣಕ್ಕೆ ಸಂಬಂಧಿಸಿ ಸಿಡಿ ಹಾಗೂ ಇತರ ಸಾಕ್ಷ್ಯಾಧಾರಗಳು ಇದೆ ಎಂದಾದರೆ ಈವರೆಗೂ ಅದನ್ನು ತನಿಖಾ ತಂಡಕ್ಕೆ ಹಸ್ತಾಂತರಿಸದಿರಲು ಕಾರಣವೇನು ಎಂದು ಗ್ರಹ ಸಚಿವ ಅರಗ ಜ್ಞಾನೇಂದ್ರ ಪ್ರಶ್ನಿಸಿದ್ದಾರೆ.

ಕುಂದಾಪುರ ಗಾಂಧಿ ಮೈದಾನದಲ್ಲಿ ನಡೆಯಲಿರುವ ಕ್ರೀಡಾ ಕೂಟಕ್ಕೆ ಆಗಮಿಸಿದ ವೇಳೆ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ನಿಜವಾದ ಆರೋಪಿಗಳಿಗೆ ಶಿಕ್ಷೆಯಾಗಬೇಕು ಎನ್ನುವ ಯಾವುದೆ ಕಾಳಜಿಯಿಲ್ಲದೆ ಪ್ರಿಯಾಂಕ್ ಖರ್ಗೆ ಅವರು ಕೇವಲ ವ್ಯರ್ಥ ಆರೋಪಗಳನ್ನು ಮಾಡುತ್ತಿದ್ದಾರೆ. ಇದು ರಾಜಕೀಯ ಲಾಭ ಮಾಡುವ ಉದ್ದೇಶವೆಂದು ಕಾಣಿಸುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರ ಆಪ್ತರಿಬ್ಬರನ್ನು ಬಂಧಿಸಿದ ಬಳಿಕ ಇದೀಗ ಏನೇನೋ ಮಾತನಾಡುವುದರಿಂದ ಅವರ ಮೇಲೆಯೇ ಅನುಮಾನ ಕಾಣುತ್ತಿದೆ. ತನಿಖೆಗೆ ಒಳ್ಳೆಯ ತಂಡವನ್ನು ನಿಯೋಜಿಸಲಾಗಿದೆ. ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಎಲ್ಲ ಆಯಾಮಗಳಲ್ಲಿಯೂ ತನಿಖೆ ನಡೆಯುತ್ತಿದೆ. ಈ ವೇಳೆಯಲ್ಲಿ ಸರ್ಕಾರದ ಬೇರೆ ಇಲಾಖೆಯ ಸ್ಪರ್ಧಾತ್ಮಕ ಪರೀಕ್ಷೆಯ ಬಗ್ಗೆ ಯಾವುದಾದರೂ ಆಕ್ರಮಗಳು ಬೆಳಕಿಗೆ ಬಂದರೂ, ಅದರ ವಿರುದ್ಧವೂ ವಿಸ್ತ್ರತ ತನಿಖೆ ನಡೆಸಲಾಗುವುದು. ಪರೀಕ್ಷೆ ಬರೆದು ಉತ್ತೀರ್ಣವಾಗಿರುವ 545 ಅಭ್ಯರ್ಥಿಗಳ ಓಎಂಆರ್ ಉತ್ತರ ಪತ್ರಿಕೆಗಳ ಪರಿಶೀಲನೆ ನಡೆಸಲಾಗುವುದು ಎಂದರು.

ಹುಬ್ಬಳ್ಳಿ ಗಲಭೆಗೆ ಬಾಂಗ್ಲಾ ಸಂಪರ್ಕ ಇದೆ ಎನ್ನುವುದು ಸೇರಿದಂತೆ ಎಲ್ಲ ವಿಚಾರಗಳ ಕುರಿತು ವಿಸ್ತ್ರತ ತನಿಖೆ ನಡೆಸಲಾಗುತ್ತದೆ. ಪೊಲೀಸರು ಈ ಪ್ರಕರಣದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿರುವುದರಿಂದಾಗಿ ಇನ್ನೊಂದು ಕೆ.ಜಿ ಹಳ್ಳಿ ದುರಂತವಾಗುವುದು ತಪ್ಪಿ ಹೋಗಿದೆ. ಗಲಭೆಯಲ್ಲಿ ಪೊಲೀಸ್ ಇಲಾಖೆಯ, ದೇವಸ್ಥಾನದ ಹಾಗೂ ಸಾರ್ವಜನಿಕ ಆಸ್ತಿ-ಪಾಸ್ತಿಗಳು ನಷ್ಟವಾಗಿದೆ. ಗಲಭೆಗೆ ಕಾರಣರಾಗಿರುವವರಿಂದ ನಷ್ಟ ವಸೂಲಾತಿಯ ಬಗ್ಗೆ ಕಾನೂನು ಆಯಾಮಗಳನ್ನು ಅಧ್ಯಯನ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಶಾಂತಿ ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಗಂಗೊಳ್ಳಿಯಲ್ಲಿ ಮುತಾಲಿಕ್ ಕಾರ್ಯಕ್ರಮವನ್ನು ಪೊಲೀಸರು ನಿರ್ಬಂಧಿಸಿದ್ದಾರೆ. ಉಡುಪಿಯಲ್ಲಿ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಕುರಿತು ಪ್ರತಿಕ್ರಿಸಿದ ಅವರು, ವಿವಿಧ ಆಯಾಮಗಳಲ್ಲಿ ಉಡುಪಿ‌ ಪೊಲೀಸರು ತನಿಖೆ ಮಾಡುತ್ತಿದ್ದಾರೆ ಎಂದರು.

ಯಾವುದೇ ಪ್ರಕರಣಗಳು ನಡೆಯಬಾರದು ಎನ್ನುವ ಪ್ರಶ್ನೆಗಿಂತ, ಅದನ್ನು ಸರಕಾರ ಹೇಗೆ ನಿಭಾಯಿಸಿದೆ ಎನ್ನುವುದು ಪ್ರಾಮುಖ್ಯ. ಇದಕ್ಕೆ ಪುನೀತ್ ರಾಜ್‍ಕುಮಾರ ಅವರ ಅಗಲಿಕೆಯ ದಿನಗಳಲ್ಲಿ, ಹುಬ್ಬಳ್ಳಿ, ಬೆಂಗಳೂರು ಹಾಗೂ ಶಿವಮೊಗ್ಗ ಪ್ರಕರಣಗಳಲ್ಲಿ ಕಾನೂನು ಸುವ್ಯವಸ್ಥೆ ಪಾಲನೆಗಾಗಿ ಸರ್ಕಾರದ ತೆಗೆದುಕೊಂಡ ನಿಲುವುಗಳೇ ದೃಷ್ಟಾಂತವಾಗಿದೆ. ಮುಖ್ಯಮಂತ್ರಿಯಾಗಿದ್ದ ದಿನಗಳಲ್ಲಿ ಕೋಮು ಸಂಘಟನೆಗಳ ಮೇಲಿನ ಕೇಸ್‍ಗಳನ್ನು ಹಿಂಪಡೆದಿದ್ದ ಸಿದ್ಧರಾಮಯ್ಯ ಇದೀಗ ಕೋಮು ಸಂಘಟನೆಗಳನ್ನು ನಿಷೇಧ ಮಾಡಲಿ ಎನ್ನುವ ದ್ವಂದ್ವ ಪ್ರದರ್ಶಿಸುತ್ತಿದ್ದಾರೆ. ಅವರ ಆಡಳಿತ ಕಾಲದಲ್ಲಿ ರಾಜ್ಯದಲ್ಲಿ ಗ್ರಹ ಇಲಾಖೆಯೇ ಇರಲಿಲ್ಲ. ನಿವೃತ್ತ ಪೊಲೀಸ್ ಅಧಿಕಾರಿಯನ್ನು ಇಟ್ಟುಕೊಂಡು ಆಡಳಿತ ನಡೆಸುತ್ತಿದ್ದ ಅವರಿಗೆ ನನ್ನ ಮೇಲೆ ಆರೋಪ ಮಾಡುವ ನೈತಿಕತೆ ಇಲ್ಲ. ನಮಗೆ ದೇಶದ ಏಕತೆ ಮುಖ್ಯ, ಆದರೆ ಕಾಂಗ್ರೆಸಿನವರಿಗೆ ಓಟು ಮಾತ್ರವೇ ಮುಖ್ಯ ಎಂದು ಲೇವಡಿ ಮಾಡಿದರು.

Comments are closed.