ಬೈಂದೂರು: ವಿದ್ಯುತ್ ತಗುಲಿದ ಪರಿಣಾಮ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಬೈಂದೂರು ತಾಲೂಕಿನ ಕೆರ್ಗಾಲ್ ಗ್ರಾ. ಪಂ ವ್ಯಾಪ್ತಿಯ ನಾಯ್ಕನಕಟ್ಟೆ ಎಂಬಲ್ಲಿ ಸಂಭವಿಸಿದೆ. ಬಿಜೂರು ಗ್ರಾಮದ ನೆಲ್ಲಿಹಕ್ಲು ನಿವಾಸಿ ವಸಂತ ಶೆಟ್ಟಿ ಎಂಬವರ ಪುತ್ರ ಚೇತನ್ ಶೆಟ್ಟಿ ಎಂದು ಗುರುತಿಸಲಾಗಿದೆ.
ಉಪ್ಪುಂದದಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಚೇತನ್ ಶೆಟ್ಟಿ ಕಾಲೇಜು ರಜೆಯ ಹಿನ್ನೆಲೆಯಲ್ಲಿ ಹೊಸ್ಕೋಟೆಯಲ್ಲಿ ಶಾಮಿಯಾನ ಕೆಲಸಕ್ಕೆ ಸೇರಿಕೊಂಡಿದ್ದರು. ನಾಯ್ಕನಕಟ್ಟೆಯ ಮನೆಯೊಂದರಲ್ಲಿ ಉಪನಯನ ಕಾರ್ಯಕ್ರಮ ಇದ್ದುದರಿಂದ ಕಬ್ಬಿಣದ ಏಣಿಯ ಮೇಲೆ ಹತ್ತಿ ಶಾಮಿಯಾನ ಹಾಕುತ್ತಿದ್ದರು. ಈ ವೇಳೆ ಶಾಮಿಯಾನದ ಸುತ್ತ ಅಳವಡಿಸಿರುವ ಲೈಟಿಂಗ್ ವಯರ್ ನಲ್ಲಿ ಇದ್ದ ಗುಂಡು ಪಿನ್ ಆಕಸ್ಮಿಕವಾಗಿ ತಾಗಿ ಕೆಳಕ್ಕೆ ಬಿದ್ದಿದ್ದಾರೆ.
ತಕ್ಷಣ ಅವರನ್ನು ಕುಂದಾಪುರ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪರೀಕ್ಷಿಸಿದ ವೈದ್ಯರು ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಕುರಿತು ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.