ಕುಂದಾಪುರ: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಬೆಂಗಳೂರು, ಜಿಲ್ಲಾ ಪಂಚಾಯತ್ ಉಡುಪಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಿದ್ಧಾಪುರದ ಜನ್ಸಾಲೆ ಎಂಬಲ್ಲಿ 4.12 ಎಕ್ರೆ ನಿವೇಶನ ವಿಸ್ತೀರ್ಣದಲ್ಲಿ 25 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಗೆ ಶಂಕುಸ್ಥಾಪನೆ ಬುಧವಾರ ನೆರವೇರಿತು.
ಬೈಂದೂರು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಚಾಲನೆ ನೀಡಿ ಮಾತನಾಡಿ, ರಸ್ತೆ, ನಿವೇಶನ, ಕಟ್ಟಡ ನಿರ್ಮಾಣಕ್ಕೆ 25 ಕೋಟಿ ಅನುದಾನ 2 ವರ್ಷದ ಹಿಂದೆ ಈ ವಸತಿ ಶಾಲೆ ಮಂಜೂರಾಗಿತ್ತು. ನವೋದಯ ಮಾದರಿಯಲ್ಲಿ ಶಿಕ್ಷಣ ಪಡೆಯಲು ವ್ಯವಸ್ಥೆ ಕಲ್ಪಿಸಲಾಗುತ್ತದೆ. ಈಗಾಗಲೇ ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಕುಡಿಯುವ ನೀರು, ವ್ಯವಸಾಯಕ್ಕೆ ನೀರು, ರಸ್ತೆ ಮೊದಲಾದ ಕಾಮಗಾರಿಗಳಿಗೆ ಸೇರಿ 2000 ಕೋಟಿ ಅನುದಾನ ಮಂಜೂರಾಗಿದೆ. 94 ಸಿ ಹಾಗೂ ಅಕ್ರಮ ಸಕ್ರಮ ಹಕ್ಕು ಪತ್ರಕ್ಕೆ ವಿತರಿಸುವ ಕಾರ್ಯ, ಬೆಳಕು ಯೋಜನೆಯಡಿ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಉಡುಪಿ ಜಿಲ್ಲೆಯಲ್ಲಿಯೇ ಸಿಂಹಪಾಲು ಕಾಮಗಾರಿಗಳು ಲಭಿಸಿದೆ ಎಂದರು
ಇದೇ ಸಂದರ್ಭ 29 ಮಂದಿಗೆ ಹಕ್ಕುಪತ್ರ ನೀಡಲಾಯಿತು. ಉಡುಪಿ ಜಿಲ್ಲಾಪಂಚಾಯತ್ ಮಾಜಿ ಸದಸ್ಯ ರೋಹಿತ್ ಕುಮಾರ್ ಶೆಟ್ಟಿ, ಸಿದ್ಧಾಪುರ ಗ್ರಾ.ಪಂ ಅಧ್ಯಕ್ಷ ಶೇಖರ್ ಕುಲಾಲ್, ಉಪಾಧ್ಯಕ್ಷೆ ಶೋಭಾ, ಉಳ್ಳೂರು ಗ್ರಾ.ಪಂ ಅಧ್ಯಕ್ಷ ರಾಜೇಶ್ ಹೆಬ್ಬಾರ್, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಎಇಇ ರಾಮು, ಕುಂದಾಪುರ ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ಆರ್. ವರ್ಣೇಕರ್, ಐಟಿಡಿಪಿ ಯೋಜನಾ ಸಮನ್ವಯಾಧಿಕಾರಿ ದೂದ್ ಫಿರ್ ಪಿ., ಐಟಿಡಿಪಿ ಮ್ಯಾನೇಜರ್ ರಮೇಶ್ ಕುಲಾಲ್ ಮೊದಲಾದವರಿದ್ದರು.
ಸಿದ್ದಾಪುರ ಗ್ರಾ.ಪಂ ಪಿಡಿಒ ಮಹಾದೇವ್ ಸ್ವಾಗತಿಸಿ, ವಂದಿಸಿದರು.
Comments are closed.