(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಕೊರಗ ಸಮುದಾಯ ಬಹಳಷ್ಟು ವರ್ಷದಿಂದ ತುಳಿತಕ್ಕೊಳಗಾಗಿದ್ದರೂ ಅವರು ನಂಬಿಕೆಗೆ ಅರ್ಹರಾಗಿದ್ದಾರೆ. ಈ ಸಮುದಾಯವನ್ನು ಮುಖ್ಯವಾಹಿನಿಗೆ ಕರೆತರಬೇಕಾದರೆ ಸ್ಥಳೀಯಾಡಳಿತ ಪ್ರತಿನಿಧಿಗಳು ಮುತುವರ್ಜಿ ವಹಿಸಬೇಕಿದೆ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿ ಹೇಳಿದ್ದಾರೆ.
ಶುಕ್ರವಾರ ಬೈಂದೂರು ತಾಲೂಕಿನ ಕೆಳ ಹೇರೂರು ಸಮುದಾಯ ಭವನದ ಬಳಿ ಜಿಲ್ಲಾ ಪಂಚಾಯತ್ ಉಡುಪಿ, ವನ್ ಧನ್ ವಿಕಾಸ್ ಕೇಂದ್ರ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್.ಆರ್.ಎಲ್.ಎಂ) , ಬೈಂದೂರು ತಾಲೂಕು ಪಂಚಾಯತ್, ಹೇರೂರು ಗ್ರಾಮಪಂಚಾಯತ್, ಸ್ನೇಹ ಸಾಗರ ಸಂಜೀವಿನಿ ಗ್ರಾ.ಪಂ ಮಟ್ಟದ ಒಕ್ಕೂಟ, ಪಂಚಮಿ ಸಂಜೀವಿನಿ ಸಂಘದ ‘ಪಂಚಮಿ ಸಂಜೀವಿನಿ ಅಡಿಕೆ ಹಾಳೆ ತಯಾರಿಕಾ ಘಟಕ’ ಉದ್ಘಾಟಿಸಿ ಅವರು ಮಾತನಾಡಿದರು.
ಕೊರಗ ಸಮುದಾಯದವರು ತಾವು ಹಿಂದಿರುವ ಜಾಗದಿಂದ ಕದಲುವುದಿಲ್ಲ. ಅಂತವರನ್ನು ಗುರುತಿಸಿ ಅವರಿಗೆ ಜಾಗ, ಬಾವಿ ಸಹಿತ ಮೂಲ ಸೌಕರ್ಯ ನೀಡಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪರಿಶಿಷ್ಟ ಪಂಗಡದ ಮಂದಿ ಬಹಳಷ್ಟು ಸಂಖ್ಯೆಯಲ್ಲಿದ್ದು ಅವರನ್ನು ಮುಖ್ಯವಾಹಿನಿಗೆ ತರಲು ಅಗತ್ಯಕ್ರಮ ಕೈಗೊಳ್ಳಲಾಗುತ್ತಿದೆ. ಸಮುದಾಯದ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿದಾಗ ಎಲ್ಲರಂತೆಯೇ ನಾವು ಎಂಬ ಸಮಾನತೆ ಬರುತ್ತದೆ ಎಂದರು.
ಘಟಕ ಉದ್ಘಾಟಿಸಿದ ಬಳಿಕ ಯಂತ್ರದ ಮೂಲಕ ಹಾಳೆ ತಟ್ಟೆ ತಯಾರಿಸುವ ಮೂಲಕ ಪ್ರಾತ್ಯಕ್ಷಿಕೆ ಕಂಡ ಶಾಸಕ ಸುಕುಮಾರ್ ಶೆಟ್ಟಿ ಸಮಾರಂಭಗಳಿರುವ ವೇಳೆ ಅಡಿಕೆ ಹಾಳೆ ತಟ್ಟೆಗೆ ಉತ್ತಮ ಬೇಡಿಕೆಯಿದ್ದು ಪ್ಲಾಸ್ಟಿಕ್, ಕಾಗದ ತಟ್ಟೆಗಳಿಗೆ ಈ ಪರಿಸರ ಸ್ನೇಹಿ ತಟ್ಟೆಗಳು ಸೆಡ್ಡು ಹೊಡೆದು ಮಾರುಕಟ್ಟೆ ವಿಸ್ತರಿಸಲಿ ಎಂದು ಶುಭಹಾರೈಸಿದರು.
ಹೇರೂರು ಗ್ರಾಮಪಂಚಾಯತ್ ಅಧ್ಯಕ್ಷ ಸುರೇಶ್ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ನಾಗರತ್ನ ಶೆಟ್ಟಿ, ಕೊರಗ ಶ್ರೇಯೋಭಿವೃದ್ಧಿ ಸಂಘಟನೆಯ ಗಣೇಶ್ ಕೊರಗ ಕುಂದಾಪುರ, ಉಡುಪಿ ಜಿ.ಪಂ ಯೋಜನಾ ನಿರ್ದೇಶಕ ಬಾಬು ಎಂ., ಸಹಾಯಕ ಯೋಜನಾಧಿಕಾರಿ ಜೇಮ್ಸ್ ಡಿಸಿಲ್ವಾ, ಉಡುಪಿ ಐಟಿಡಿಪಿ ಯೋಜನಾ ಸಮನ್ವಯಾಧಿಕಾರಿ ದೂದ್ ಫಿರ್, ಬೈಂದೂರು ತಾ.ಪಂ ಕಾರ್ಯನಿರ್ವಹಣಾಧಿಕಾರಿ ಭಾರತಿ, ಸ್ನೇಹಸಾಗರ ಸಂಜೀವಿನಿ ಗ್ರಾ.ಪಂ ಮಟ್ಟ ಒಕ್ಕೂಟದ ಅಧ್ಯಕ್ಷೆ ಮಲ್ಲಿಕಾ ಇದ್ದರು.
ಹೇರೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಸ್ವಾಗತಿಸಿದರು. ಜಿಲ್ಲಾ ಪಂಚಾಯತ್ ಎನ್.ಆರ್.ಎಲ್.ಎಂ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಪ್ರಭಾಕರ ಆಚಾರ್ ಕಾರ್ಯಕ್ರಮ ನಿರ್ವಹಿಸಿ, ಜಿಲ್ಲಾ ವ್ಯವಸ್ಥಾಪಕ ಅವಿನಾಶ್ ವಂದಿಸಿದರು.
Comments are closed.