ಬೆಂಗಳೂರು: ಬೆಂಗಳೂರು ಸುಂಕದಕಟ್ಟೆಯಲ್ಲಿ ಯುವತಿ ಮೇಲೆ ಆ್ಯಸಿಡ್ ಎರಚಿದ ಪ್ರಕರಣ ಸಂಬಂಧ ಆರೋಪಿ ನಾಗೇಶ್ ಪತ್ತೆಗಾಗಿ ಪೊಲೀಸರು ಲುಕ್‍ಔಟ್ ನೋಟಿಸ್ ಜಾರಿಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.
ಸದ್ಯ ಎಲ್ಲ ರಾಜ್ಯಗಳಿಗೆ ಹಾಗೂ ಎಲ್ಲ ಭಾಷೆಗಳಲ್ಲೂ ಲುಕ್ ಔಟ್ ನೊಟೀಸ್ ಜಾರಿ ಮಾಡಿರುವ ಪೊಲೀಸರು, ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣಗಳಿಗೂ ರವಾನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಆರೋಪಿ ನಾಗೇಶ್ ಕೃತ್ಯ ಪೂರ್ವ ಯೋಜಿತವಾಗಿತ್ತು ಎಂಬ ಶಂಕೆ ವ್ಯಕ್ತವಾಗುತ್ತಿದೆ. ಈ ಕೃತ್ಯ ನಡೆಸಿದ ನಂತರ ಆರೋಪಿ ವಕೀಲರನ್ನು ಸಂಪರ್ಕಿಸಿ ತನ್ನ ಮೊಬೈಲ್ ಸಂಪರ್ಕ ಕಡಿತಗೊಳಿಸಿ ಪರಾರಿಯಾಗಿದ್ದಾನೆ. ಈವರೆಗೂ ಮನೆಯವರನ್ನು ಸಹಿತ ಯಾರನ್ನೂ ಆತ ಸಂಪರ್ಕಿಸಿಲ್ಲ ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
ಈತ ಗಾರ್ಮೆಂಟ್ಸ್ ನಡೆಸುತ್ತಿದ್ದು, ಅಲ್ಲಿನ ಯಂತ್ರೋಪಕರಣಗಳನ್ನು ಹಾಗೂ ವಸ್ತುಗಳನ್ನು ಮಾರಾಟ ಮಾಡಿ ತನ್ನ ಎಲ್ಲ ಸಾಲವನ್ನು ತೀರಿಸಿ ಉಳಿದ ಲಕ್ಷಾಂತರ ಹಣವನ್ನು ಜೊತೆಯಲ್ಲೇ ತೆಗೆದುಕೊಂಡಿರುವ ಹೋಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಆರೋಪಿ ನಾಗೇಶ್ ಬಂಧನಕ್ಕಾಗಿ ರಚಿಸಿರುವ 7 ತಂಡಗಳು ರಾಜ್ಯ ಮತ್ತು ಹೊರರಾಜ್ಯಗಳಲ್ಲಿ ನಿರಂತರ ಶೋಧ ನಡೆಸುತ್ತಿದ್ದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಆರೋಪಿಯ ತಂದೆ-ತಾಯಿ, ಸಹೋದರ, ಸ್ನೇಹಿತರು ಸೇರಿದಂತೆ ಸಂಬಂಧಿಕರನ್ನು ಕರೆತಂದು ವಿಚಾರಣೆ ನಡೆಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಸೆಂಟ್‍ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತ ಯುವತಿ ಚೇತರಿಸಿಕೊಳ್ಳುತ್ತಿದ್ದು, ಆಕೆಯಿಂದ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಹೇಳಿಕೆ ಪಡೆಯಲಾಗಿದೆ. ಚರ್ಮ ಕಸಿ ಸಮಹಿತ ಗುಣಮಟ್ಟದ ಚಿಕಿತ್ಸೆ ನೀಡಲು ತಯಾರಿ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
Comments are closed.