ದುಬೈ: ಯಕ್ಷಗಾನ ಅಭ್ಯಾಸ ತರಗತಿ ದುಬಾಯಿ ಇವರು ಪ್ರಸ್ತುತ ಪಡಿಸುವ, ದುಬಾಯಿ ಯಕ್ಷೋತ್ಸವ 2022ರ ಸಲುವಾಗಿ ತರಗತಿಯ ವಿದ್ಯಾರ್ಥಿಗಳು ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಹಮ್ಮಿಕೊಂಡ ಕನ್ನಡ ಪೌರಾಣಿಕ ಯಕ್ಷಗಾನ “ಲಲಿತೋಪಖ್ಯಾನ”ದ ಆಮಂತ್ರಣ ಪತ್ರ ಬಿಡುಗಡೆ ಸಮಾರಂಭ, ಮೇ.1 ಭಾನುವಾರ, ಫಾರ್ಚೂನ್ ಗ್ರೂಪ್ ನ ದುಬೈ ಗ್ರಾಂಡ್ ಹೋಟೇಲ್ ನಲ್ಲಿ ಅರಬ್ ನಾಡಿನ ಪ್ರತಿಷ್ಟಿತ ಉದ್ಯೋಗಪತಿಗಳು ಹಾಗೂ ಗಣ್ಯರ ಉಪಸ್ಥಿತಿಯಲ್ಲಿ, ಅದ್ದೂರಿಯಾಗಿ ನೆರವೇರಿತು.
ವಿದ್ಯಾರ್ಥಿಗಳಿಂದ ತರಗತಿಯ ಪ್ರಾರ್ಥನೆ, ಊರಿನಿಂದ ಬಂದ ಹಿರಿಯ ದಂಪತಿಗಳ ಮತ್ತು ಸೇರಿದ ಗಣ್ಯರಿಂದ ದೀಪ ಪ್ರಜ್ವಲನಾ ವಿಧಿಗಳಿಂದ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಗಣ್ಯರಿಗೆ ಸ್ವಾಗತ ಕೋರಿದ ಅಭ್ಯಾಸ ತರಗತಿಯ ಸಂಚಾಲಕರಾದ, ಕೊಟ್ಟಿಂಜ ದಿನೇಶ ಶೆಟ್ಟಿಯವರು ಪ್ರಾಸ್ತಾವಿಕ ಮಾತುಗಳ ಮೂಲಕ ತರಗತಿಯ ಧ್ಯೇಯೋದ್ದೇಶಗಳ ಜೊತೆಗೆ ಕಾರ್ಯಕ್ರಮದ ಸ್ಥೂಲ ನೋಟವನ್ನು ಅತಿಥಿಗಳ ಮುಂದಿರಿಸಿದರು.
ತರಗತಿಯ ಗುರುಗಳಾದ ಶೇಖರ್ ಡಿ. ಶೆಟ್ಟಿಗಾರ್ ಕಿನ್ನಿಗೋಳಿಯವರು ಕಾರ್ಯಕ್ರಮಕ್ಕೆ ಅತಿಥಿ ಕಲಾವಿದರಾಗಿ ಬರುವ, ಭಾಗವತರಾಗಿ ಯಕ್ಷಧ್ರುವ ಪಟ್ಲ ಸತೀಶ ಶೆಟ್ಟಿ ಮತ್ತು ಶ್ರೀಮತಿ ಅಮೃತ ಕೌಶಿಕ್ ರಾವ್, ಮತ್ತು ಚೆಂಡೆ-ಮದ್ದಳೆಯಲ್ಲಿ ಕಾಣಿಸಿಕೊಳ್ಳಲಿರುವ ಕೌಶಿಕ್ ರಾವ್ ಪುತ್ತಿಗೆ, ಸವಿನಯ ನೆಲ್ಲಿತೀರ್ಥ, ಪ್ರಖ್ಯಾತ ಸ್ತ್ರೀವೇಷಧಾರಿ ದೀಪಕ್ ರಾವ್ ಪೇಜಾವರ, ಪ್ರಸಾಧನ –ವೇಷಭೂಷಣ ಕಲಾವಿದರಾಗಿ ಗಂಗಾಧರ ಡಿ. ಶೆಟ್ಟಿಗಾರ್ ಕಿನ್ನಿಗೋಳಿ ಮತ್ತು ನಿತಿನ್ ಕುಂಪಲರ ವಿವರವನ್ನು ಸಭೆಯಲ್ಲಿ ತಿಳಿಸಿದರು.
ಅಭ್ಯಾಗತರಾಗಿ ಭಾಗವಹಿಸಿದ ಗಣ್ಯರಾದ ಕಾರ್ಯಕ್ರಮದ ಕುರಿತಾಗಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿ, ಸಂಘಟಕರನ್ನು ಅಭಿನಂದಿಸುವ ಜೊತೆಗೆ ಕಾರ್ಯಕ್ರಮಕ್ಕೆ ತಮ್ಮ ಬೆಂಬಲವನ್ನು ಪ್ರಕಟಿಸುವ ಜೊತೆಗೆ, ಅರಬನಾಡಿನಲ್ಲಿರುವ ಎಲ್ಲಾ ಕನ್ನಡದ – ತುಳುವಿನ ಯಕ್ಷಗಾನ ಅಭಿಮಾನಿಗಳು, ಕಲಾಭಿಮಾನಿಗಳು ಈ ಕಾರ್ಯಕ್ರಮಕ್ಕೆ ತಮ್ಮ ಎಲ್ಲಾ ಯಥಾಸಾಧ್ಯ ಬೆಂಬಲವನ್ನು ನೀಡಬೇಕೆಂದು ಕರೆಕೊಡುವ ಜೊತೆಗೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಆಶೀರ್ವಚನ ಮಾಡಿದ ಪುತ್ತಿಗೆ ರಾಘವೇಂದ್ರದ ಮಠದ ಟ್ರಸ್ಟಿ, ವೀನಸ್ ಗ್ರೂಪ್ ಆಫ್ ಹೋಟೇಲ್ಸ್ ನ ಮಾಲಕರಾದ ವಾಸುದೇವ ಭಟ್ ಪುತ್ತಿಗೆ ಕಾರ್ಯಕ್ರಮಕ್ಕೆ ಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದರು. ಅರಬ್ ನಾಡಿನ ಬಹುತೇಕ ಕಾರ್ಯಕ್ರಮಗಳಲ್ಲಿ ತಮ್ಮ ಯೋಗದಾನ ನೀಡುವ ತಮ್ಮ ತಮ್ಮ ಕಮ್ಯೂನಿಟಿಗಳ ಮುಖಂಡರಾಗಿಯೂ ಗುರುತಿಸಿಕೊಂಡ ಗಣ್ಯರು ನಮ್ಮದೇ ನಾಡಿನ ಕಲೆಯನ್ನು ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯ ಎಂಬ ನೆಲೆಯಲ್ಲಿ, ತಮ್ಮ ಕಮ್ಯೂನಿಟಿ ಸದಸ್ಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಕರೆತರುವ ಭರವಸೆಯನ್ನೂ ನೀಡಿದರು.
ಉದ್ಯಮಿ, ಅಬುದಾಭಿ ಕರ್ನಾಟಕ ಸಂಘದ ಅಧ್ಯಕ್ಷರೂ , ಬಂಟ ಸಮುದಾಯದ ನೇತಾರರೂ ಆದ ಸರ್ವೋತ್ತಮ ಶೆಟ್ಟಿಯವರು, ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಎಲ್ಲ ಗಣ್ಯರ ಮತ್ತು ಯಕ್ಷಗಾನಾಭಿಮಾನಿಗಳ ಬೆಂಬಲ ದೊರೆತರೆ ಆರ್ಥಿಕವಾಗಿ ಮತ್ತು ತುಂಬಿದ ಸಭಾಂಗಣದಲ್ಲಿ ಕಾರ್ಯಕ್ರಮ ಯಶಸ್ವಿಯಾಗುವುದು ನಿಸ್ಸಂಶಯ ಎಂಬ ಭರವಸೆ ವ್ಯಕ್ತಪಡಿಸಿ, ಕಾರ್ಯಕ್ರಮಕ್ಕೆ ಶುಭಕೋರಿದರು.
ಲಲಿತೋಪಖ್ಯಾನ –ಯಕ್ಷಗಾನ ಆಖ್ಯಾನದ ಆಮಂತ್ರಣ ಪತ್ರ- ಪ್ರವೇಶ ಪತ್ರ ಅನಾವರಣದ ಜೊತೆ ಯಕ್ಷಗಾನ ಅಭ್ಯಾಸ ತರಗತಿಯ ಕ್ರೀಡಾ ಸಂಸ್ಥೆ ಯಕ್ಷಯೋಧಾಸ್ ನ ಟೀಶರ್ಟ್ ಕೂಡ ಬಿಡುಗಡೆಗೊಳಿಸಲಾಯಿತು.
ವೇದಿಕೆಯಲ್ಲಿ ನೆರೆದಿದ್ದ ಗಣ್ಯರು ಕಾರ್ಯಕ್ರಮಕ್ಕೆ ಶುಭಾಶಯವನ್ನು ಕೋರಿದರು. ಫಾರ್ಚೂನ್ ಗ್ರೂಫ್ ಆಫ್ ಹೋಟೆಲಿನ ಆಡಳಿತ ನಿರ್ದೇಶಕ ಹಾಗೂ ಕೆ.ಎನ್.ಆರ್.ಐ ಫೋರಂ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ದುಬೈ ಆಕ್ಮೆ ಇಂಟರ್ ನ್ಯಾಶನಲ್ ಆಡಳಿತ ನಿರ್ದೇಶಕ ಹಾಗೂ ತುಳು ಮತ್ತು ಕನ್ನಡ ಚಿತ್ರ ನಿರ್ಮಾಪಕರಾದ ಹರೀಶ್ ಶೇರಿಗಾರ್, ಉದ್ಯಮಿ, ಕನ್ನಡ ಚಿತ್ರ ನಿರ್ಮಾಪಕರಾದ ಹರೀಶ್ ಬಂಗೇರ, ಉದ್ಯಮಿ ಗುಣಶೀಲ್ ಶೆಟ್ಟಿ, ಕರ್ನಾಟಕ ಸಂಘ ಹಾಗೂ ಬಿಲ್ಲವಾಸ್ ದುಬೈ ನಿಕಟ ಪೂರ್ವಾಧ್ಯಕ್ಷ ಸತೀಶ್ ಪೂಜಾರಿ, ಕನ್ನಡ ಪಾಠ ಶಾಲೆ ದುಬೈ ಅಧ್ಯಕ್ಷ ಶಶಿಧರ್ ನಾಗರಾಜಪ್ಪ, ಬಿಲ್ಲವ ಬಳಗ ಅಬುಧಾಬಿ ಅಧ್ಯಕ್ಷ, ಸಾಹಿತಿ ಮನೋಹರ್ ತೊನ್ಸೆ, ಕಲಾ ನಿರ್ದೇಶಕರು, ಲೇಖಕರಾದ ಬಿ.ಕೆ ಗಣೇಶ್ ರೈ, ಉದ್ಯಮಿ ಸುಂದರ್ ಶೆಟ್ಟಿ, ಪದ್ಮಶಾಲಿ ಸಮುದಾಯದ ಅಧ್ಯಕ್ಷ ರಘುರಾಮ್ ಶೆಟ್ಟಿಗಾರ್, ಉದ್ಯಮಿ ಗಂತೂತ್ ಬಿಲ್ಡಿಂಗ್ ಮೆಟಿರಿಯಲ್ಸ್ ಇದರ ಸುಜಾತ್ ಶೆಟ್ಟಿ, ಬ್ರಾಹ್ಮಣ ಸಮಾಜ ದುಬೈನ ದಯಾನಂದ್ ಹೆಬ್ಬಾರ್, ಸಂಘಟಕರು,ನಿರ್ಮಾಪಕರು ತುಳು ಚಿತ್ರರಂಗದ ಶೋಧನ್ ಪ್ರಸಾದ್, ಕರ್ನಾಟಕ ಸಂಘ ಶಾರ್ಜಾದ ನಿಕಟಪೂರ್ವ ಅಧ್ಯಕ್ಷ ಆನಂದ್ ಬೈಲೂರು, ತುಳು ಪಾತೆರ್ಗ ತುಳು ಒರಿಪಾಗ ದುಬೈ ಅಧ್ಯಕ್ಷ ಪ್ರೇಮ್ ಜಿತ್ ಇದ್ದರು.
ಗಮ್ಮತ್ ಕಲಾವಿದರ ಅಧ್ಯಕ್ಷರಾದ ರಾಜೇಶ್ ಕುತ್ತಾರ್ ಕಾರ್ಯಕ್ರಮ ನಿರ್ವಹಿಸಿದರೆ, ತರಗತಿಯ ಹಿರಿಯ ಕಲಾವಿದರಾದ ಗಿರೀಶ್ ನಾರಾಯಣ್ ವಂದಿಸಿದರು.
Comments are closed.