(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಉಡುಪಿ ಜಿಲ್ಲೆಯಲ್ಲಿ ಹಳ್ಳಿಗಳ ಮನೆ-ಮನೆಗಳಲ್ಲಿ, ಅಂಗಡಿಗಳಲ್ಲಿ ಹೆಂಡ (ಸಾರಾಯಿ) ಮಾರಾಲಾಗುತ್ತಿದೆ. ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ಮಹಿಳೆಯರು ಮದ್ಯಪಾನ ಮಾಡುತ್ತಿದ್ದಾರೆ. ಕೆಲವು ಮನೆಮನೆಯಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದ್ದು ಇದಕ್ಕೆಲ್ಲಾ ಅಬಕಾರಿ ಅಧಿಕಾರಿಗಳ ಹಣದಾಹ ಕಾರಣ ಎಂದು ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಅಬಕಾರಿ ಇಲಾಖೆ ಅಧಿಕಾರಿಗಳ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.
ಕುಂದಾಪುರದ ತಾಲೂಕು ಪಂಚಾಯತ್ ಸಭಾಭವನದಲ್ಲಿ ಗುರುವಾರ ನಡೆದ ಕುಂದಾಪುರ ಹಾಗೂ ಬೈಂದೂರು ತಾಲೂಕು ಪಂಚಾಯತ್ ವ್ಯಾಪ್ತಿಯ ಅನುಷ್ಠಾನಾಧಿಕಾರಿಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಭೆಗೆ ಬಾರದ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ನೋಟಿಸ್ ಮಾಡುವಂತೆ ಸೂಚಿಸಿ ಅವರು ಅಬಕಾರಿ ಇಲಾಖಾ ವರ್ತನೆ ಬಗ್ಗೆ ಆಕ್ರೋಷ ವ್ಯಕ್ತಪಡಿಸಿದರು.
ಅಬಕಾರಿ ಇಲಾಖೆ ಅಧಿಕಾರಿಗಳು ಲಕ್ಷಗಟ್ಟಲೆ ಹಣಕ್ಕಾಗಿ ಪರವಾನಿಗೆ ನೀಡುತ್ತಿದ್ದಾರೆ. ಉಡುಪಿ ಅಬಕಾರಿ ಡಿಸಿ ಬಗ್ಗೆ ಈಗಾಗಾಲೇ ಸಚಿವರ ಗಮನಕ್ಕೆ ತಂದಿದ್ದೇನೆ. ಜಿಲ್ಲೆಯ ಸಭ್ಯ ನಾಗರಿಕರ ಸಂಸ್ಕಾರ ಹಾಳು ಮಾಡುತ್ತಿದ್ದಾರೆ ಎಂಬ ಬಗ್ಗೆ ಸಂಬಂಧಪಟ್ಟ ಸಚಿವರ ಗಮನಕ್ಕೆ ತಂದು ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದೇನೆ. ಮೊದಲು ಗಂಡ ಕುಡಿದು ಹೆಂಡತಿಗೆ ಹೊಡಿಯುವ ಕಾಲ…ಆದರೆ ಇಂದು ಹೆಂಡತಿ ಕುಡಿದು ಗಂಡನಿಗೆ ಹೊಡೆಯುವ ಕಾಲ ಬಂದಿದ್ದು ವ್ಯವಸ್ಥೆಗೆ ಮಾರಕ ಎಂದವರು ಅಬಕಾರಿ ಇಲಾಖಾಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
Comments are closed.