ಬಂಟ್ವಾಳ: ಕನ್ಯಾನ ಕಣಿಯೂರಿನಲ್ಲಿ ಬುಧವಾರ ಬಾಲಕಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆಗೆ ದುಷ್ಪ್ರೇರಣೆ ನೀಡಿರುವ ಕುರಿತು ಆಕೆಯ ತಂದೆ ನೀಡಿದ ದೂರಿನ ಆಧಾರದಲ್ಲಿ ಆರೋಪಿ ಸಾಹುಲ್ ಹಮೀದ್ ಯಾನೆ ಕುಟ್ಟ ಎಂಬಾತನನ್ನು ವಿಟ್ಲ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಬಂಟ್ವಾಳ ತಾಲೂಕು ಕನ್ಯಾನ ಗ್ರಾಮದ ಕಣಿಯೂರು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವ ಸಂಜೀವ ಎಂಬವರು ತನ್ನ ಅಪ್ರಾಪ್ತ ವಯಸ್ಸಿನ ಮಗಳು ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಘಟನೆಗೆ ಸಾಹುಲ್ ಹಮೀದ್ ಎಂಬಾತನು ಆತ್ಮಹತ್ಯೆಗೆ ದುಷ್ಪ್ರೇರಣೆ ನೀಡಿರುವುದಾಗಿ ಆರೋಪಿಸಿ ದೂರು ನೀಡಿದ್ದರು. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ತಲೆಮರೆಸಿಕೊಂಡಿರುವ ಆರೋಪಿ ಕಣಿಯೂರು ತಲೆಕ್ಕಿ ನಿವಾಸಿ ಸಾಹುಲ್ ಹಮೀದ್ ಎಂಬಾತನ ಪತ್ತೆಗೆ ಬಂಟ್ವಾಳ ಉಪವಿಭಾಗದ ಸಹಾಯಕ ಪೊಲೀಸ್ ಉಪಾಧೀಕ್ಷಕ ಶಿವಾಂಶು ರಜಪೂತ್ ನೇತೃತ್ವದಲ್ಲಿ ಎರಡು ತಂಡಗಳನ್ನು ರಚಿಸಲಾಗಿತ್ತು. ಬೆಳ್ತಂಗಡಿ ತಾಲೂಕು ಮಡಂತ್ಯಾರು ಕುಕ್ಕಳ ಗ್ರಾಮದ ಅಳೆಕ್ಕಿ ಎಂಬಲ್ಲಿಂದ ಗುರುವಾರ ರಾತ್ರಿ ಆರೋಪಿಯನ್ನು ವಶಕ್ಕೆ ಪಡೆದು ದಸ್ತಗಿರಿ ಮಾಡಲಾಗಿದೆ. ಎಸ್ಪಿ ಋಷಿಕೇಶ್ ಭಗವಾನ್ ಸೋನಾವಣೆ ಮತ್ತು ಅಡಿಷನಲ್ ಎಸ್ಪಿ ಕುಮಾರ ಚಂದ್ರ ಮಾರ್ಗದರ್ಶನದಲ್ಲಿ, ಬಂಟ್ವಾಳ ಉಪವಿಭಾಗದ ಎಎಸ್‌ಪಿ ಶಿವಾಂಶು ರಜಪೂತ ನೇತೃತ್ವ, ವಿಟ್ಲ ಠಾಣೆ ಪೊಲೀಸ್ ನಿರೀಕ್ಷಕ ನಾಗರಾಜ್ ಎಚ್. ಸಾರಥ್ಯದಲ್ಲಿ ಪಿಎಸ್ಸೆ ಸಂದೀಪ ಕುಮಾರ್ ಶೆಟ್ಟಿ, ಪಿಎಸ್ಐ ಮಂಜುನಾಥ ಟಿ. ಸಿಬ್ಬಂದಿಗಳಾದ ಡ್ಯಾನಿ ಪ್ರಾನ್ಸಿಸ್ ತಾಮ್ರ ,ಪ್ರಸನ್ನ,ಸೀತಾರಾಮ, ಹೇಮರಾಜ, ಅಶೋಕ್, ಶ್ರೀಧರ, ಕುಮಾರ ಹಾಗೂ ಜಿಲ್ಲಾ ಗಣಕಯಂತ್ರ ವಿಭಾಗದ ಸಂಪತ್‌ಕುಮಾರ್, ದಿವಾಕರ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು ಎಂದು ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ ತಿಳಿಸಿದ್ದಾರೆ.
Comments are closed.