ಕರಾವಳಿ

ಹಕ್ಲಾಡಿ ಕೆಳಾಕಳಿ ಶ್ರೀ ಮಾರಿಕಾಂಬಾ ದೇವಸ್ಥಾನದ ಜಾತ್ರೆ‌‌; ‌ಮನೆಗಳಿಗೆ ಮೆರವಣಿಗೆಯಲ್ಲಿ ಬರುವ ‘ಕೋಣ’ಕ್ಕೆ ರಾಜಮರ್ಯಾದೆ..! (Video)

Pinterest LinkedIn Tumblr

(ವಿಶೇಷ ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಈ ಊರಿನಲ್ಲೀಗ ಸಂಭ್ರಮದ ವಾತಾವರಣ. ಅಲ್ಲಲ್ಲಿ ತಳಿರು ತೋರಣಗಳಿಂದ ಮಂಟಪದ ಸಿಂಗಾರ. ಇಲ್ಲಿನ ಪ್ರತಿ ಮನೆಗೂ ಬರ್ತಾನೆ ವಿಶೇಷ ಅತಿಥಿ. ಆತನ ಸ್ವಾಗತ ಮಾಡಿ ಸತ್ಕರಿಸುವ ಮುತ್ತೈದೆಯರು. ಅಷ್ಟಕ್ಕೂ ಆ ಸಂಭ್ರಮವೇನು? ಆ ಅತಿಥಿ ಯಾರು ಎನ್ನೋದಕ್ಕೆ ಈ ಸ್ಟೋರಿ ಓದಿ..

ಕರಾವಳಿಯಲ್ಲಿ ಅನಾದಿ ಕಾಲದಿಂದಲೂ ಕೂಡ ಪ್ರತಿಯೊಂದು ಆರಾಧನೆಗಳು ಸಂಪ್ರದಾಯ ಬದ್ಧವಾಗಿ ನಡೆಯುತ್ತೆ. ಅಂತೆಯೇ ಕುಂದಾಪುರ ತಾಲೂಕಿನ ಹಕ್ಲಾಡಿ ಗ್ರಾಮಪಂಚಾಯತಿ ವ್ಯಾಪ್ತಿಯ ಕೆಳಾಕಳಿ-ಬಂಟ್ವಾಡಿಯಲ್ಲಿರುವ ಶ್ರೀ ಮಾರಿಕಾಂಬಾ ದೇವಿ ದೇವಸ್ಥಾನದಲ್ಲಿ ಸಂಪ್ರದಾಯದಂತೆ ಎರಡು ವರ್ಷಕ್ಕೊಂದು ಬಾರಿ ನಡೆಯುವ ಜಾತ್ರಾ ಮಹೋತ್ಸವ ನಿಜಕ್ಕೂ ವಿಶೇಷ ಆಚರಣೆ‌ ಹಾಗೂ ಸಂಭ್ರಮವನ್ನು ಸೃಷ್ಟಿಸುತ್ತೆ. ಶಿರಸಿ ಮಾರಿಕಾಂಬೆ ರೀತಿಯೇ ಇಲ್ಲಿ ನೆಲೆಸಿದ ದೇವಿಯ ಪ್ರತೀತಿ ಆಗಾದವಾದದ್ದು. ಜಾತ್ರೆಯ ಪೂರ್ವಭಾವಿಯಾಗಿ ತಿಂಗಳ ಮೊದಲು ಪ್ರಸಾದ ನೋಡಲಾಗುತ್ತೆ, 21 ದಿನ ಮೊದಲು ಮರಕ್ಕೆ ಮಚ್ಚು ಹಾಕಲಾಗುತ್ತೆ. ಅದಾಗಿ ಒಂದು ವಾರದ ಬಳಿಕ ಕೋಣಕ್ಕೆ ದಾರೆ ಎರೆಯುವ ಪದ್ಧತಿಯಿದೆ. ಮಾರನೇ ದಿನದಿಂದ ಗ್ರಾಮದ ಪ್ರತಿಯೊಂದು ಮನೆಗೂ ಮೆರವಣಿಗೆ ಮೂಲಕ ಹೋಗುತ್ತೆ. ಉತ್ತರ ಕನ್ನಡದ ಸಿರಸಿ ಬಿಟ್ಟರೆ ಅವಿಭಜಿತ ದಕ್ಷಿಣ ಕನ್ನಡದಲ್ಲಿ ಕೋಣದ ಮೆರವಣಿಗೆ ಇಲ್ಲಿ ಮಾತ್ರ. ಅಷ್ಟೇ ಅಲ್ಲ ಐದು ವರ್ಗದ ಸಮುದಾಯದವರು ಪೂಜೆ ಸಲ್ಲಿಸುವ ದೇವಿ ಆಲಯವೂ ಇದು ಎಂಬುದು ಮತ್ತೊಂದು ವೈಶಿಷ್ಟ್ಯ. ವರ್ಷಪೂರ್ತಿ ಇಲ್ಲಿ ಪೂಜಾಕೈಂಕರ್ಯಗಳು ನಡೆದರೂ ಕೂಡ ಎರಡು ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗೆ ಜಿಲ್ಲೆ ಸೇರಿದಂತೆ ಮಲೆನಾಡು ನಾಗೂ ಉತ್ತರಕನ್ನಡದ ಭಕ್ತರು ಬರ್ತಾರೆ. ಕೆಳಾಕಳಿ ಗುಡ್ಡಮ್ಮಾಡಿಯ ದೊಡ್ಮನೆಯ ಕುಟುಂಬದವರಾದ ಜಯರಾಜ್ ಎಸ್. ಹೆಗ್ಡೆ ಅನುವಂಶಿಕ ಆಡಳಿತ ಮೊಕ್ತೇಸರರಾಗಿದ್ದಾರೆ.

ಹರಕೆ ಸಂಪ್ರದಾಯ…
ಸಿಡುಬು, ದಡಾರಾ ಮೊದಲಾದ ರೋಗಗಳು ಬಂದಾಗ, ಮಕ್ಕಳು, ಮನೆಯ ದನಕರುಗಳಿಗೆ ಸಮಸ್ಯೆಯಾದಾಗ ಶ್ರೀ ದೇವಿಗೆ ಹರಕೆ ಹೊತ್ತ ಭಕ್ತರು ಇಲ್ಲಿಗೆ ಬಂದು ಸೇವೆ ನೀಡ್ತಾರೆ. ತಾವು ನಂಬಿದ ತಾಯಿ ನಮ್ಮನ್ನು ಸಲುಹಿ ಕಾಪಾಡ್ತಾಳೆ ಎಂಬ ಆಗಾಧ ನಂಬಿಕೆ ಭಕ್ತರದ್ದು. ಬೇವು ಉಡಿಸುವ ಸಂಪ್ರದಾಯದಂತೆ ಹರಕೆ ಹೊತ್ತ ಮಂದಿ ಹಬ್ಬದಂದು ಮಡಿಯಲ್ಲಿ ಹೊಸಬಟ್ಟೆ ಉಟ್ಟು ಬಂದು ಅದರ ಮೇಲೆ ಬೇವು ಉಟ್ಟು ಹರಕೆ ಸಲ್ಲಿಸುತ್ತಾರೆ.

ಕೋಣಕ್ಕೆ ರಾಜ ಮರ್‍ಯಾದೆ!
ಮನೆ ಮನೆಗೂ ಕೋಣ ಮೆರವಣಿಗೆ ಮಾಡುವ ಸಂಪ್ರದಾಯವೂ ನಿಜಕ್ಕೂ ಅಚ್ಚರಿ ಮೂಡಿಸುತ್ತೆ. ಕೋಣವು ಊರಿನ ಅನಿಷ್ಟಗಳನ್ನು ಹೊಗಲಾಡಿಸಿ ಬಳಿಕ ಮಾರಿಯ ಮೂಲಕ ಅದನ್ನು ಪರಿಹರಿಸಲಾಗುತ್ತೆ. ಮನೆಮನೆಗೆ ಬರುವ ಕೋಣಕ್ಕೆ ಅಲ್ಲಲ್ಲಿ ರಾಜಮರ್ಯಾದೆ ನೀಡಲಾಗುತ್ತೆ. ಮನೆಮಂದಿ ರಂಗೋಲಿ ಹಾಕಿ, ತಳಿರು ತೋರಣಗಳನ್ನು ಸಿದ್ಧಪಡಿಸಿ ಸಿಂಗಾರ ಮಾಡಿರ್ತಾರೆ.

ಹಿಂದಿನ ಸಂಪ್ರದಾಯದಂತೆ ಪುರುಷರು ಡೋಲು, ಕೊಳಲು ವಾದನದ ಮೂಲಕ ಮುಂದೆ ಸಾಗಿದರೆ ಹಿಂದೊಬ್ಬ ಮಹಿಳೆ, ಹೂ-ಕಾಯಿಯಿರುವ ಬುಟ್ಟಿ ಹೊತ್ತು ಸಾಗುತ್ತಾರೆ. ಮನೆಗೆ ಕೋಣ ಬರುತ್ತದೆಂದಾಗ ಆ ಭಾಗದ ಜನರಲ್ಲಿ ಒಂದು ಉತ್ಸಾಹ. ಸಾಕ್ಷಾತ್ ದೇವಿಯೇ ಮನೆಗೆ ಬರುತ್ತಿದ್ದಾಳೆಂಬ ಭಯ-ಭಕ್ತಿ. ಮನೆಯಂಗಳಕ್ಕೆ ಬರುವ ಕೋಣನ ಕಾಲಿಗೆ ನೀರು ಹೊಯ್ದು, ಕುತ್ತಿಗೆಗೆ ಹೂ ಹಾರ ಹಾಕಿ, ತಲೆಗೆ ಎಣ್ಣೆ ಹಾಕಿ, ಕಣ್ಣಿನ ಕೆಳ, ಮೇಲ್ಭಾಗಕ್ಕೆ ಕಾಡಿಗೆ ಹಚ್ಚಿ, ಹಣೆಗೆ ತಿಲಕವಿಟ್ಟು ಬರಮಾಡಿಕೊಳ್ಳುವುದಲ್ಲದೇ ಅಕ್ಕಿ ,ಬಾಳೆಹಣ್ಣನ್ನು ಕೋಣಕ್ಕೆ ನೀಡಲಾಗುತ್ತೆ.

ಕೋಣ‌ ಸಾಕುವ ದೇವಿ ಆಲಯ..
ಇನ್ನು ಶಿರಸಿಯಂತೆಯೇ ಕೆಳಾಕಳಿ ದೇವಿ ಆಲಯದಲ್ಲಿ ಮೂರು ವರ್ಷದಿಂದ ಕೋಣ ಸಾಕಲಾಗುತ್ತಿದ್ದು ಅದಕ್ಕೆ ಪ್ರತ್ಯೇಕ ಕೊಟ್ಟಿಗೆ, ಫ್ಯಾನ್ ಸೌಕರ್ಯ, ಸಿಸಿಟಿವಿ ಅಳವಡಿಸಲಾಗಿದೆ. ಊರಿನ ಪ್ರೀತಿಯ ಕೋಣನಿಗೆ ಈ ಬಾರೀ ಮೊದಲ ಜಾತ್ರೆಯ ಸಂಭ್ರಮ.

ಒಟ್ಟಿನಲ್ಲಿ ಕಳೆದೆರಡು ವರ್ಷದಿಂದ ಕೊರೋನಾ ಹಿನ್ನೆಲೆ ಹಬ್ಬ ನಡೆಯದಿದ್ದು ಶಿರಸಿ ಮಾರಿಕಾಂಬೆ ತಂಗಿಯೆಂದೇ ಕರೆಸಿಕೊಳ್ಳುವ ಕೆಳಾಕಳಿಯಲ್ಲಿ ಈ ಬಾರೀ ಸಂಭ್ರಮ‌ ಮನೆ‌ ಮಾಡಿದೆ.

 

Comments are closed.