(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಗ್ರಾಮೀಣ ಪ್ರದೇಶದ ಮಕ್ಕಳು ಶಿಕ್ಷಣ ವಂಚಿರಾಗಬಾರದೆನ್ನುವ ಉದ್ದೇಶದಿಂದ ಸರಕಾರ ಶೈಕ್ಷಣಿಕ ಅಭಿವೃದ್ದಿಗಾಗಿ ಮತ್ತು ವಸತಿ ಸೌಲಭ್ಯ ವ್ಯವಸ್ಥೆ ನೀಡುವ ಮೂಲಕ ಹಲವು ಮಹತ್ತರ ಯೋಜನೆಗಳನ್ನು ಜಾರಿಗೆ ತಂದಿದೆ. ಪರಿಶಿಷ್ಟ ಪಂಗಡ ಪರಿಶಿಷ್ಟ ಜಾತಿ ಅಭಿವೃದ್ದಿಗೆ ಹಾಗೂ ಅವರ ಮಕ್ಕಳು ಪರಿಪೂರ್ಣ ಶಿಕ್ಷಣ ಪಡೆಯಬೇಕೆನ್ನುವ ಸದ್ದುದ್ದೇಶದಿಂದ ಅತ್ಯಾಧುನಿಕ ಸೌಲಭ್ಯದ ವಸತಿ ಶಾಲೆ ನಿರ್ಮಿಸಿದ್ದು ಈ ಸವಲತ್ತುಗಳ ಸದುಪಯೋಗವಾದಾಗ ಮಾತ್ರ ಸಾರ್ಥಕತೆಯಾಗುತ್ತದೆ ಎಂದು ಮೀನುಗಾರಿಕೆ, ಬಂದರು, ಒಳನಾಡು, ಜಲಸಾರಿಗೆ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಹೇಳಿದರು.
ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಉಡುಪಿ ಮತ್ತು ಸಮಾಜ ಕಲ್ಯಾಣ ಇಲಾಖೆ ಕುಂದಾಪುರ ಇದರ ಸಂಯುಕ್ತ ಆಶ್ರಯದಲ್ಲಿ ಬೈಂದೂರು ವಿ.ಜೆ ನಗರದಲ್ಲಿ 4 ಕೋಟಿ 25 ಲಕ್ಷ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡ ಪರಿಶಿಷ್ಟ ವರ್ಗದ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯದ ಬೈಂದೂರು ಟೌನ್ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಬೈಂದೂರು ಶಾಸಕ ಬಿ.ಎಮ್.ಸುಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮೀಣ ಭಾಗದಲ್ಲೂ ಪ್ರತಿಭಾವಂತ ವಿದ್ಯಾರ್ಥಿಗಳಿದ್ದು ಅವರಿಗೆ ಶೈಕ್ಷಣಿಕವಾಗಿ ಉತ್ತಮ ಸಹಕಾರ ದೊರೆತಾಗ ಇನ್ನೂ ಅತ್ಯುತ್ತಮ ಸಾಧನೆ ಮಾಡಲು ಸಾಧ್ಯ. ಸರಕಾರ ಕೋಟ್ಯಾಂತರ ರೂಪಾಯಿ ಅನುದಾನದ ಮೂಲಕ ಇಂತಹ ಮಹತ್ವಾಕಾಂಕ್ಷೆ ಯೋಜನೆಗೆ ಅನುದಾನ ನೀಡಿದೆ. ವಸತಿ ಶಾಲೆಯ ವಾರ್ಡನ್ ಸಹಿತ ಎಲ್ಲಾ ಅಧಿಕಾರಿ ಸಿಬ್ಬಂದಿಗಳು ಉತ್ತಮ ವಾತಾವರಣ ಕಲ್ಪಿಸಿ ಹೆಚ್ಚಿನ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ನೋಡಿಕೊಳ್ಳಬೇಕು. ಆಹಾರ, ಆರೋಗ್ಯ ಹಾಗೂ ಶುಚಿತ್ವಕ್ಕೆ ಪ್ರಾಧಾನ್ಯತೆ ನೀಡಬೇಕು ಎಂದರು.
ಉಡುಪಿ ಜಿ.ಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಸನ್ನ ಹೆಚ್, ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತ ಕೆ.ರಾಜು , ಕ್ರೈಸ್ ಸಂಸ್ಥೆಯ ರಾಮು, ಬೈಂದೂರು ತಹಶೀಲ್ದಾರ್ ಶೋಭಾಲಕ್ಷ್ಮಿ, ತಾ.ಪಂ ಕಾರ್ಯನಿರ್ವಾಹಣಾಧಿಕಾರಿ ಎಸ್.ಭಾರತಿ, ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಐ.ಟಿ.ಡಿ.ಪಿ ಯೋಜನಾ ಸಮನ್ವಯಾಧಿಕಾರಿ ದೂದಪೀರ್ ಪಿ. ಕೆ.ಜಿ.ಎಸ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಘವೇಂದ್ರ ಆರ್ ವರ್ಣೇಕರ್ ಸ್ವಾಗತಿಸಿದರು. ಶಿಕ್ಷಕ ಸುಧಾಕರ ಪಿ.ಬೈಂದೂರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
Comments are closed.