(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ವಿಳಾಸ ಕೇಳುವ ನೆಪದಲ್ಲಿ ಬೈಕಿನಲ್ಲಿ ಬಂದ ಅಪರಿಚಿತನೋರ್ವ ವೃದ್ದೆಯೊಬ್ಬರ ಚಿನ್ನದ ಸರ ಎಗರಿಸಿ ಪರಾರಿಯಾದ ಘಟನೆ ಏ.29 ಮಧ್ಯಾಹ್ನ ಕಾಳಾವರ ನಡುಬೆಟ್ಟು ಎಂಬಲ್ಲಿ ನಡೆದಿದ್ದು ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೋರ್ವನನ್ನು ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪದ್ದಮ್ಮ ಶೆಟ್ಟಿ(72) ಎನ್ನುವರು ನಡೆದು ಹೋಗುತ್ತಿದ್ದಾಗ ದಾರಿಯಲ್ಲಿ ಬಂದ ಬೈಕ್ ಸವಾರ ಕುತ್ತಿಗೆಯಲ್ಲಿದ್ದ 75 ಸಾವಿರ ಮೌಲ್ಯದ 2 ಪವನ್ ತೂಕದ ಚಿನ್ನದ ಚೈನ್ ಕದ್ದು ಪರಾರಿಯಾಗಿದ್ದು ಮಹಿಳೆ ಪುತ್ರ ನೀಡಿದ ದೂರಿನಂತೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಬಲೆ ಬೀಸಲಾಗಿತ್ತು.
ತಿಲಕ್ ಕುಮಾರ್ ಎಂಬಾತ ಬಂಧಿತ ಆರೋಪಿ. ಬಂಧಿತನಿಂದ ಕದ್ದ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ ಬೈಕ್ ವಶಕ್ಕೆ ಪಡೆಯಲಾಗಿದೆ.
(ಸಾಂದರ್ಭಿಕ ಚಿತ್ರ)
ಕುಂದಾಪುರ ಗ್ರಾಮಾಂತರ ಠಾಣೆ ಕಾನೂನು ಸುವ್ಯವಸ್ಥೆ ವಿಭಾಗದ ಪಿಎಸ್ಐ ನಿರಂಜನ್ ಗೌಡ, ತನಿಖಾ ಪಿಎಸ್ಐ ಸುಹಾಸ್ ಹಾಗೂ ಸಿಬ್ಬಂದಿಗಳ ತಂಡ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಹಣ ಕಾಸಿನ ಸಮಸ್ಯೆಯಿಂದ ಕಳ್ಳತನ ಕೃತ್ಯ ಮಾಡಿದ್ದಾಗಿ ತನಿಖೆ ವೇಳೆ ತಿಳಿದುಬಂದಿದೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್ ಅವರ ನಿರ್ದೇಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿದ್ದಲಿಂಗಪ್ಪ ಮಾರ್ಗದರ್ಶನದಲ್ಲಿ, ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ., ವೃತ್ತ ನಿರೀಕ್ಷಕ ಕೆ.ಗೋಪಿಕೃಷ್ಣ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ಕಾನೂನು ಸುವ್ಯವಸ್ಥೆ ವಿಭಾಗದ ಪೊಲೀಸ್ ಉಪ ನಿರೀಕ್ಷಕ ನಿರಂಜನ್ ಗೌಡ ಬಿಎಸ್, ತನಿಖಾ ವಿಭಾಗದ ಪಿಎಸ್ಐ ಸುಹಾಸ್ ಆರ್ ಗ್ರಾಮಾಂತರ ಠಾಣಾ ಸಿಬ್ಬಂದಿಯವರನ್ನೊಳಗೊಂಡ ವಿಶೇಷ ತಂಡದಲ್ಲಿ ಕುಂದಾಪುರ ಗ್ರಾಮಾಂತರ ಠಾಣಾ ಅಪರಾಧ ವಿಭಾಗದ ಸಿಬ್ಬಂದಿಗಳಾದ ರಾಜು ಬಿ., ನಾಗೇಶ್, ಅನಿಲ್ ಕುಮಾರ್ ಬಿ.ಎಸ್, ಚಿದಾನಂದ ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿಗಳಾದ ದಿನೇಶ್ ಮತ್ತು ಶಿವಾನಂದ ತನಿಖೆಯಲ್ಲಿ ಸಹಕರಿಸಿದ್ದರು.
ಹಣಕಾಸಿನ ತೊಂದರೆಯಿಂದ ಆರೋಪಿ ತಿಲಕ್ ಕುಮಾರ್ ಎಮ್ ಈ ಕೃತ್ಯವೆಸಗಿದ್ದಾಗಿ ತನಿಖೆ ವೇಳೆ ತಿಳಿದುಬಂದಿದೆ.
Comments are closed.