ಕರಾವಳಿ

ಅಂತರ್ ಜಿಲ್ಲಾ ಬೈಕ್ ಕಳ್ಳರಿಬ್ಬರನ್ನು ಬಂಧಿಸಿದ ಕೋಟ ಪೊಲೀಸರು: 9 ಬೈಕುಗಳ ವಶ

Pinterest LinkedIn Tumblr

ಕುಂದಾಪುರ: ಉಡುಪಿ ಜಿಲ್ಲೆ ಸೇರಿದಂತೆ ಅಂತರ್ ಜಿಲ್ಲೆಗಳ ಹನ್ನೆರಡು ಬೈಕ್‌ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಬೈಕ್‌ ಕಳ್ಳರಿಬ್ಬರನ್ನು ಕೋಟ‌ಠಾಣೆ ಜಿಲ್ಲಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಒಂಬತ್ತು ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ಉಡುಪಿ ಜಿಲ್ಲೆಯ ವಿವಿಧ ಕಡೆಗಳಲ್ಲಿನ ದ್ವಿಚಕ್ರ ವಾಹನ ಕಳ್ಳತನ ತಡೆಗಟ್ಟುವುದು ಹಾಗೂ ಪತ್ತೆ ಮಾಡುವ ಉದ್ದೇಶದಿಂದ ಜಿಲ್ಲಾ ಪೊಲೀಸ್‌ ಅಧೀಕ್ಷಕರ ನಿರ್ದೇಶನದಂತೆ ವಿಶೇಷ ತಂಡವು ಕೋಟ ಸರಹದ್ದಿನ ವಿವಿಧ ಭಾಗದಲ್ಲಿ ವಾಹನ ತಪಾಸಣೆ ಮತ್ತು ದಾಖಲೆ ಪರಿಶೀಲಿಸುತ್ತಿದ್ದ ಸಂದರ್ಭ ಜೂ. 9ರಂದು ವಡ್ಡರ್ಸೆ ಗ್ರಾಮದ ರೈಲ್ವೇ ಬ್ರಿಡ್ಜ್ ಬಳಿ ನಂಬರ್‌ ಪ್ಲೇಟ್‌ ಇಲ್ಲದ ವಾಹನವನ್ನು ಸಂಶಯಾಸ್ಪದವಾಗಿ ನಿಲ್ಲಿಸಿದ್ದು, ವಾಹನದ ಬಳಿ ಇದ್ದ ಇಬ್ಬರನ್ನು ದಾಖಲಾತಿಗಳ ಬಗ್ಗೆ ವಿಚಾರಿಸಿದಾಗ ಯಾವುದೇ ದಾಖಲಾತಿಗಳನ್ನು ಹಾಜರುಪಡಿಸದಿರುವುದರಿಂದ ತನಿಖೆ ನಡೆಸಿದ್ದು, ಆಗ ಅದು ಕಳ್ಳತನ ಮಾಡಿದ ಬೈಕ್‌ ಎನ್ನುವುದು ತಿಳಿದುಬಂದಿದೆ.

ಪ್ರಕರಣದ ಆರೋಪಿಗಳಾದ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕು ಅತ್ತಿಗುಡ್ಡೆ ನಿವಾಸಿ ಸೋಮಶೇಖರ (21) ಹಾಗೂ ಬಾಗಲಕೋಟೆ ಜಿಲ್ಲೆ ಹುನಗುಂಡ ತಾಲೂಕು ಹೊಸಮನೆ ನಿವಾಸಿ ಶಂಕರ ಗೌಡ (23) ಅವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ.

ಆರೋಪಿಗಳನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಿದಾಗ ಅವರು ಕಳೆದ ಮೂರು ವರ್ಷಗಳಿಂದ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದು, ತಿಳಿದುಬಂದಿದೆ. ಕಾರ್ಮಿಕರಾಗಿ ದುಡಿಯಲು ಬಂದವರು ಉಡುಪಿ ನಗರ ಠಾಣೆಯಲ್ಲಿ ಏಳು, ಬ್ರಹ್ಮಾವರ ಠಾಣೆಯ ಒಂದು, ಶಂಕರಾನಾರಾಯಣ ಠಾಣೆಯ ಒಂದು, ಶೃಂಗೇರಿ ಠಾಣೆಯ ಒಂದು, ವಿಜಯನಗರದ ಜಿಲ್ಲೆಯ ಇಟಗಿ ಠಾಣೆಯ ಒಂದು ಮತ್ತು ದಾವಣಗೆರೆ ಠಾಣೆಯ ಒಂದು ಪ್ರಕರಣ ಸೇರಿದಂತೆ ಒಟ್ಟು 12 ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿದ್ದು, ತನಿಖೆಯಿಂದ ತಿಳಿದುಬಂದಿದೆ. ಇವುಗಳಲ್ಲಿ ಮೂರು ಪಲ್ಸರ್‌ ಬೈಕ್‌, ಐದು ಸ್ಪೆಂಡರ್‌ ಬೈಕ್‌ ಮತ್ತು ಒಂದು ಹೀರೋ ಡಿಲಕ್ಸ್‌ ಬೈಕ್‌ ವಶಪಡಿಸಿಕೊಳ್ಳಲಾಗಿದ್ದು, ಸ್ವಾಧೀನಪಡಿಸಿದ ಸೊತ್ತುಗಳ ಮೌಲ್ಯ ಅಂದಾಜು ನಾಲ್ಕೂವರೆ ಲಕ್ಷ ರೂ. ಆಗಿದೆ.

ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ ಸಿದ್ದಲಿಂಗಪ್ಪ ಅವರ ಮಾರ್ಗದರ್ಶನದಂತೆ, ಉಡುಪಿ‌ ಡಿವೈಎಸ್ಪಿ ಸುಧಾಕರ ಎಸ್ ನಾಯ್ಕ ನಿರ್ದೇಶನದಂತೆ ಈ ಕಾರ್ಯಾಚರಣೆಯಲ್ಲಿ ಬ್ರಹ್ಮಾವರ ಸರ್ಕಲ್ ಇನ್ಸ್‌ಪೆಕ್ಟರ್ ಅನಂತ ಪದ್ಮನಾಭ, ಕೋಟ ಠಾಣೆಯ ಪಿಎಸ್ಐ ಮಧು ಬಿ.ಇ, ಕೋಟ ಠಾಣೆಯ ತನಿಖಾ ವಿಭಾಗದ ಪಿಎಸ್ಐ ಪುಷ್ಪಾ, ಪ್ರೊಬೇಶನರಿ ಪಿಎಸ್ಐಯವರಾದ ಮಹಾಂತೇಶ್‌‌‌‌‌‌, ಪುನೀತ್‌‌‌, ಹಿರಿಯಡ್ಕ ಠಾಣೆಯ ಪ್ರೊಬೆಷನರಿ ಪಿಎಸ್ಐ ಮಂಜುನಾಥ ಮರಬದ, ಕೋಟ ಠಾಣಾ ಎ.ಎಸ್‌‌‌‌.ಐ. ರವಿ ಕುಮಾರ್‌‌‌, ಸಿಬ್ಬಂದಿಯವರಾದ ರಾಘವೇಂದ್ರ, ಪ್ರಸನ್ನ, ರಾಜೇಶ್‌, ಕೃಷ್ಣ ಹಾಗೂ ಬ್ರಹ್ಮಾವರ ವೃತ್ತ ಕಛೇರಿಯ ಪ್ರದೀಪ್ ನಾಯಕ, ಹಾಗೂ ಉಡುಪಿ ನಗರ ಠಾಣಾ ಸಿಬ್ಬಂದಿಗಳಾದ ಸತೀಶ , ಸಂತೋಷ ರಾಥೋಡ್, ಕಿರಣ, ಹನುಮಂತ, ಜಿಲ್ಲಾಪೊಲೀಸ್ ಕಛೇರಿಯ ತಾಂತ್ರಿಕ ವಿಭಾಗದ ಸಿಬ್ಬಂದಿ ದಿನೇಶ ರವರುಗಳು ಪ್ರಕರಣವನ್ನು ಭೇಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

Comments are closed.