ಬಂಟ್ವಾಳ: ಯುವಕನೋರ್ವನನ್ನು ಕ್ಷುಲ್ಲಕ ಕಾರಣಕ್ಕಾಗಿ ಮತ್ತಿಬ್ಬರು ಯುವಕರು ಚೂರಿಯಿಂದ ಇರಿದು ಕೊಲೆಗೈದ ಘಟನೆ ಜುಲೈ 4 ರಂದು ಮಧ್ಯರಾತ್ರಿ ವೇಳೆ ಬಂಟ್ವಾಳದ ಬಿ.ಸಿ ರೋಡ್ ಎಂಬಲ್ಲಿ ನಡೆದಿದೆ.
ಬಿ.ಸಿ.ರೋಡ್ ಕೈಕಂಬ ಸಮೀಪದ ಶಾಂತಿಅಂಗಡಿ ನಿವಾಸಿ ಅಬ್ದುಲ್ ಖಾದರ್ ಎಂಬವರ ಮಗ ಮುಹಮ್ಮದ್ ಆಸಿಫ್ (32) ಕೊಲೆಯಾದ ಯುವಕ. ತಾಲೂಕಿನ ಮಾರಿಪಳ್ಳ ನಿವಾಸಿಗಳಾದ ನೌಫಲ್ ಮತ್ತು ನೌಶೀರ್ ಕೊಲೆ ಆರೋಪಿಗಳು ಎಂದು ಆರೋಪಿಸಲಾಗಿದೆ.
ಬಸ್ ಡಿಪ್ಪೋದ ಬಳಿ ಇರುವ ಹೊಟೇಲ್ ಒಂದರ ಮುಂಭಾಗ ಆಸಿಫ್ ಬೈಕ್ ನಲ್ಲಿ ಹಾರ್ನ್ ಮಾಡಿದ್ದಕ್ಕೆ ನೌಫಲ್ ಮತ್ತು ನೌಶೀರ್ ಆಕ್ಷೇಪಿಸಿದ್ದು ಈ ವೇಳೆ ಮೂವರ ನಡುವೆ ವಾಗ್ವಾದ ನಡೆದಿದೆ ಎನ್ನಲಾಗಿದೆ. ಬಳಿಕ ಆಸಿಫ್ ತನ್ನ ಸ್ನೇಹಿತರನ್ನು ಸ್ಥಳಕ್ಕೆ ಕರೆದಿದ್ದು ಎರಡು ಕಡೆಯವರ ನಡುವೆ ಮತ್ತೆ ವಾಗ್ವಾದ, ಗಲಾಟೆ ನಡೆದಿದೆ ಎನ್ನಲಾಗಿದ್ದು ಕೊನೆಗೆ ನೌಫಲ್ ಮತ್ತು ನೌಶೀರ್ ಸೇರಿ ಆಸಿಫ್ ಗೆ ಚೂರಿಯಿಂದ ಇರಿದಿದ್ದಾರೆ ಎಂದು ತಿಳಿದುಬಂದಿದೆ.
ಗಂಭೀರ ಗಾಯಗೊಂಡ ಆಸಿಫ್ ನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮೃತ ಆಸಿಫ್ ವಿವಾಹಿತನಾಗಿದ್ದಾನೆ.
ಸ್ಥಳಕ್ಕೆ ಬಂಟ್ವಾಳ ಪೊಲೀಸರು ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Comments are closed.