ಮಂಗಳುರು : ತುಳುನಾಡಿನ ಇತಿಹಾಸದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರುವ ಜೈನ ಮನೆತನದ ವಾರಸುದಾರ, ಮೂಡುಬಿದಿರೆಯ ಬಲ್ಲಾಳ್ ಕುಟುಂಬದ ರಾಹುಲ್ ಬಲ್ಲಾಳ್ (51) ಅವರು ಇಂದು ನಿಧನರಾಗಿದ್ದಾರೆ.
ತುಳುನಾಡಿನ ಭವ್ಯ ಪರಂಪರೆ, ಪರೋಪಕಾರಿಗಳು ಆಗಿರುವಂತಹ ಶ್ರೀಮಂತ ಜೈನ ಮನೆತನದ ವಾರಸುದಾರರಾದ ಕೃಷಿಕರೂ, ಉದ್ಯಮಿ ಜಯವರ್ಮರಾಜ್ ಬಲ್ಲಾಳ್ ಅವರ ಸುಪುತ್ರರಾಗಿದ್ದ ರಾಹುಲ್ ಬಲ್ಲಾಳ್ ಕಾನೂನು ಪಧವೀಧರರು. ತನ್ನ ಕುಟುಂಬದ ಕೃಷಿ ಹಾಗೂ ಹೋಟೇಲ್ ಉದ್ಯಮವನ್ನು ಮುನ್ನಡೆಸಲು ರಾಹುಲ್ ಅವರು ಕುಟುಂಬದ ಹಿರಿಮೆ ಗರಿಮೆಗೆ ಅನುಸಾರವಾಗಿ ವಹಿವಾಟು ನಡೆಸುತ್ತಾ ಬಂದರು.
ಚೆನ್ನೈ, ಬೆಂಗಳೂರು, ಮಂಗಳೂರು , ಮೂಡುಬಿದಿರೆಗಳಲ್ಲಿರುವ ಬೃಹತ್ ಹೋಟೇಲ್ಗಳು, ವಿವಿಧ ರೀತಿಯ ಕೃಷಿ, ವಿದೇಶಿ ಹಸುಗಳ ಹೈನುಗಾರಿಕೆ ( ರಾಜ್ಯದ ಪ್ರಪ್ರಥಮ ಹವಾನಿಯಂತ್ರಿತ ದನದ ಕೊಟ್ಟಿಗೆ ) , ಸಾರಿಗೆ ವ್ಯವಸ್ಥೆ, ಆಸ್ಪತ್ರೆಗಳು ವಾಹನಗಳ ಅಧಿಕೃತ ಮಾರಾಟಗಾರರು , ಮುಂತಾದ ಕ್ಷೇತ್ರಗಳಲ್ಲಿ ಅಪಾರವಾದ ವ್ಯವಹಾರವನ್ನು ಮಾಡಿದ ಬಲ್ಲಾಳ್ ಕುಟುಂಬದ ಕುಡಿಯಾಗಿ ರಾಹುಲ್ ಬಲ್ಲಾಳ್ ಸರಳ ಸಜ್ಜನ , ಸ್ನೇಹಶೀಲ ವ್ಯಕ್ತಿತ್ವದವರಾಗಿದ್ದರು.
ಬಸದಿಗಳು , ಹಿಂದೂ ದೇವಸ್ಥಾನಗಳು, ಪೂಜಾ ಮಂದಿರಗಳ ಸ್ಥಾಪಕರಾಗಿ , ಭೂತಾಲಯಗಳ ಅನುವಂಶೀಯ ಆಡಳಿತ ಮೊಕ್ತೇಸರರಾಗಿ ನಾಡಿನ ಧಾರ್ಮಿಕ ಪರಂಪರೆಗೆ ತನ್ನದೇ ಆದ ಅನುಪಮ ಕಾಣಿಕೆ ಸಲ್ಲಿಸಿದ ಬಲ್ಲಾಳ್ ಕುಟುಂಬದ ಆಶಾಕಿರಣವಾಗಿ ಹೊರಹೊಮ್ಮಿದವರು ರಾಹುಲ್ ಬಲ್ಲಾಳ್.
ಪರೋಪಕಾರದಲ್ಲಿ ರಾಹುಲ್ ಮುಂಚೂಣಿಯಲ್ಲಿದ್ದರು. ಇವರ ಹೋಟೇಲ್ ಮುಂತಾದ ಉದ್ಯಮಗಳಲ್ಲಿ ಅದೆಷ್ಟೋ ಜೈನರು ಬದುಕನ್ನು ಕಟ್ಟಿಕೊಂಡಿದ್ದಾರೆ. ಇವರ ಆಸ್ಪತ್ರೆಗಳಲ್ಲಿ ಅದೆಷ್ಟೋ ಬಡವರು ರಿಯಾಯಿತಿ ದರದಲ್ಲಿ ಚಿಕಿತ್ಸೆ ಪಡೆದವರಿದ್ದಾರೆ.
ಬಲ್ಲಾಳ್ ಮನೆತನದ ಸೇವಾಕೈಂಕರ್ಯಗಳನ್ನು ದಾನ ಧರ್ಮಾಧಿಗಳನ್ನು ರಾಹುಲ್ ಬಲ್ಲಾಳ್ ಮುಂದುವರೆಸಿಕೊAಡು ಬಂದಿದ್ದರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೈಭವದ ಪಂಚಕಲ್ಯಾಣಕ್ಕೆ, ಮಹಾಮಸ್ತಕಾಭಿಷೇಕಗಳಿಗೆ ವೈಭವತೆಯನ್ನು ತಂದುಕೊಟ್ಟವರು ಬಲ್ಲಾಳ್ ಮನೆತನದವರಾಗಿದ್ದಾರೆ. ಬಸದಿಗಳನ್ನು , ಹಿಂದೂ ದೇವಾಲಯಗಳನ್ನು ಅಭಿವೃದ್ಧಿ ಪಡಿಸಿ ಧಾರ್ಮಿಕ ಪರಂಪರೆಗೆ ಭವ್ಯತೆಯನ್ನು ತಂದವರು ಬಲ್ಲಾಲ್ ಮನೆತನದವರು.
ಮೃತರು ಅರೆವಳಿಕೆ ತಜ್ಞೆ ಪತ್ನಿ ಡಾ.ಪ್ರೀತಿ ಬಲ್ಲಾಳ್, ಮಗ ಆದಿತ್ಯ ಬಲ್ಲಾಳ್, ತಂದೆ ಜಯ ವರ್ಮರಾಜ್ ಬಲ್ಲಾಳ್, ತಾಯಿ ಕೆ. ವಿನಯ ಜೆ. ಬಲ್ಲಾಳ್ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
Comments are closed.