ಕುಂದಾಪುರ: ಕರಾವಳಿ ತೀರ ಪ್ರದೇಶಗಳಲ್ಲಿ ಮಳೆಗಾಲದ ವೇಳೆಯಲ್ಲಿ ಸಾಕಷ್ಟು ಪ್ರಮಾಣದ ಹಾನಿಯುಂಟಾಗುತ್ತಿದೆ. ತೋಟ ಹಾಗೂ ಬೆಳೆಗಳ ನಷ್ಟದೊಂದಿಗೆ ಜೀವ ಹಾನಿಯಾಗಿರುವ ವರದಿಗಳಿದ್ದು, ಈ ಭಾಗದ ಜನರು ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಬೇಕು ಎನ್ನುವ ಆಗ್ರಹ ಕೇಳಿಬಂದ ಹಿನ್ನೆಲೆಯಲ್ಲಿ ತಜ್ಞರ ಅಭಿಪ್ರಾಯ ಪಡೆದುಕೊಂಡು ಕಡಲ್ಕೊರೆತ ತಡೆಗೆ ಶಾಶ್ವತ ಪರಿಹಾರವನ್ನು ರೂಪಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಶೀಘ್ರದಲ್ಲಿ ನಡೆಯಲಿರುವ ಸಂಸತ್ ಅಧೀವೇಶನದ ವೇಳೆಯಲ್ಲಿ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿಯವರ ನೇತ್ರತ್ವದಲ್ಲಿ ಕೇಂದ್ರದ ಸಚಿವರನ್ನು ಭೇಟಿ ಮಾಡಿ ಕರಾವಳಿ ಪ್ರದೇಶದಲ್ಲಿನ ಕಡಲ್ಕೊರೆತಗಳಿಗೆ ಶಾಶ್ವತ ಪರಿಹಾರರಕ್ಕೆ ಒತ್ತಾಯಿಸಲಾಗುವುದು ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮರವಂತೆಯ ಕರಾವಳಿಯ ತೀರ ಪ್ರದೇಶದಲ್ಲಿ ಉಂಟಾದ ಕಡಲ್ಕೊರೆತ ಪ್ರದೇಶಗಳಿಗೆ ಗುರುವಾರ ಭೇಟಿ ನೀಡಿ ಹಾನಿಯನ್ನು ವೀಕ್ಷಣೆ ಮಾಡಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಬೈಂದೂರು ಹಾಗೂ ಕುಂದಾಪುರ ತಾಲ್ಲೂಕು ವ್ಯಾಪ್ತಿಯಲ್ಲಿ ಅಂದಾಜು ವ್ಯಾಪಕ ಮಳೆಯಾಗಿದೆ. ಇದರಿಂದಾಗಿ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಡಲತೀರ ಸಹಿತ, ನಾಡಾ, ನಾವುಂದ, ಹಡವು, ಅಂಪಾರು ಮುಂತಾದ ಪ್ರದೇಶಗಳಲ್ಲಿ ಸಾಕಷ್ಟು ಹಾನಿಯುಂಟಾಗಿದ್ದು, ಇಲ್ಲಿನ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಬದ್ಧವಾಗಿದೆ.ಕಾಮಗಾರಿಗಳ ನಿರ್ವಹಣೆಯ ವೇಳೆ ಜನರ ದುಡ್ಡನ್ನು ದುರುಪಯೋಗ ಪಡೆಸಿಕೊಳ್ಳುವುದು ಕಂಡು ಬಂದಲ್ಲಿ ಅಂತಹ ಪ್ರಕರಣಗಳ ವಿರುದ್ಧ ನಿರ್ಧಾಕ್ಷೀಣ್ಯ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.
ಮರವಂತೆಯ ಕಿರು ಬಂದರು ಅಭಿವೃದ್ಧಿಗಾಗಿ ಈಗಾಗಲೇ 84 ಕೋಟಿ ರೂ. ಯೋಜನೆ ಮಂಜೂರಾತಿ ದೊರಕಿದ್ದು, ಶೀಘ್ರದಲ್ಲಿ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಕೋವಿಡ್ ಕಾರಣದಿಂದ ಹಿಂದಿನ ಕಾಮಗಾರಿಗಳ ಪಾವತಿ ಬಾಕಿ ಇರುವುದರಿಂದ, ಅನುದಾನ ಇಲ್ಲದೆ ಗುತ್ತಿಗೆದಾರರು ಕಾಮಗಾರಿ ನಿರ್ವಹಿಸಲು ಮುಂದೆ ಬರುತ್ತಿಲ್ಲ. ಬಂದರು ಹಾಗೂ ಮೀನುಗಾರಿಕಾ ಇಲಾಖೆಯಿಂದ ಅಗತ್ಯ ಸ್ಥಳಗಳಲ್ಲಿ ತುರ್ತು ಕಾಮಗಾರಿ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.
ಮೀನುಗಾರರ ಆಕ್ರೋಶ :
ಕಡಲ್ಕೊರೆತದಿಂದ ಕಳೆದ 15 ದಿನ ಆತಂಕದಲ್ಲಿಯೇ ದಿನ ದೂಡಿದ್ದೇವೆ. ನಮ್ಮ ಸಂಕಷ್ಟ ಕೇಳಲು ಯಾವ ಅಧಿಕಾರಿಗಳು ಬಂದಿಲ್ಲ. ತುರ್ತು ಕಾಮಗಾರಿ ಮಾಡಲು ಕೇಳಿದರೆ ದುಡ್ಡಿಲ್ಲ ಎಂದು ಉತ್ತರಿಸುತ್ತಾರೆ. ಸ್ಥಳೀಯರೇ ಒಟ್ಟಾಗಿ ಬಿಂದಿಗೆ ಹಿಡಿದುಕೊಂಡು ಹಣ ಒಟ್ಟು ಮಾಡಿ ಕಡಲ್ಕೊರೆತ ತಡೆಯಲು ತುರ್ತು ಕಾಮಗಾರಿಗಳನ್ನು ನಡೆಸಲು ಶ್ರಮದಾನ ಮಾಡುತ್ತಿದ್ದೇವೆ. ಸಂಜೆಯಾದರೇ ನೀರು ರಸ್ತೆಗೆ ಬರುತ್ತದೆ. ಕೂಡಲೇ ತುರ್ತು ಕಾಮಗಾರಿ ಪ್ರಾರಂಭಿಸುವಂತೆ ಸ್ಥಳೀಯರು ಒತ್ತಾಯಿಸಿದರು.
ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಜಿಲ್ಲಾಧಿಕಾರಿ ಎಂ.ಕೂರ್ಮರಾವ್, ಸಿಇಓ ಪ್ರಸನ್ನ, ಬಂದರು ಇಲಾಖೆಯ ಅಧಿಕಾರಿ ಉದಯ್ಕುಮಾರ, ಡಿವೈಎಸ್ಪಿ ಶ್ರಿಕಾಂತ್ ಕೆ, ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ಕುಮಾರ ಶೆಟ್ಟಿ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಶರತ್ ಕುಮಾರ ಶೆಟ್ಟಿ ಉಪ್ಪುಂದ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಾಬು ಹೆಗ್ಡೆ, ಶಂಕರ ಪೂಜಾರಿ, ಸುರೇಶ್ ಬಟವಾಡಿ, ರೋಹಿತ್ ಕುಮಾರ ಶೆಟ್ಟಿ ಸಿದ್ದಾಪುರ, ಉದ್ಯಮಿ ವೆಂಕಟೇಶ್ ಕಿಣಿ ಬೈಂದೂರು ಮೊದಲಾದವರು ಇದ್ದರು.
Comments are closed.