ಕರಾವಳಿ

ಭಾರಿ ಮಳೆಗೆ ಬೈಂದೂರಿನ ಹಲವೆಡೆ ನೆರೆ; ನಾವುಂದ, ಸಾಲ್ಬುಡ, ಬಡಾಕೆರೆ ಭಾಗದ ಜನರಿಗೆ ಜಲ ದಿಗ್ಭಂಧನ..!

Pinterest LinkedIn Tumblr

(ಚಿತ್ರ, ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಪ್ರತಿ ವರ್ಷ ಮಳೆಗಾಲ ಬಂದರೆ ನಮಗೆ ಸಮಸ್ಯೆ ತಪ್ಪಿದ್ದಲ್ಲ. ಮಳೆಗಾಲದಲ್ಲಿನ ಇಲ್ಲಿನ ನೂರಕ್ಕೂ ಅಧಿಕ‌ ಮನೆಯವರಿಗೆ ತಲೆನೋವು ಕಟ್ಟಿಟ್ಟಬುತ್ತಿ. ಹೆಚ್ಚುಕಮ್ಮಿ ನಾಲ್ಕೈದು ದಿನವಾದರೂ ಮನೆ ಬಿಟ್ಟು ಹೊರಬಾರಲಾಗದ ದುಸ್ಥಿತಿ. ಹಿಡಿ ಉಪ್ಪು, ದಿನಸಿ, ತರಕಾರಿ ತರಬೇಕಾದರೂ ಕೂಡ ದೋಣಿ ಬೇಕು…
ಓಟು ಕೇಳಲು ಬರುವ ಜನಪ್ರತಿನಿಧಿಗಳು ಮಳೆಗಾಲದ ನೆರೆ ಸಮಯ ಬಂದು ವೀಕ್ಷಿಸಿ ಹೋದವರು ಮತ್ತೆ ಈ ಕಡೆ ತಲೆಯನ್ನು ಹಾಕೋದಿಲ್ಲ. ಸರ್ಕಾರಿ ಅಧಿಕಾರಿಗಳು ಮಳೆಗಾಲದ ಮೊದಲು ಪ್ರವಾಹದ ಬಗ್ಗೆ ಅಣಕು ಕಾರ್ಯಾಚರಣೆ ನಡೆಸಿ ಹೋಗುತ್ತಾರಷ್ಟೆ… ಈ ನೋವಿನ ಮಾತುಗಳು ಕೇಳಿಬಂದಿದ್ದು ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನೆರೆ ಪೀಡಿತ ಪ್ರದೇಶದಲ್ಲಿ.

ಇಲ್ಲಿನ ನಾವುಂದ ಗ್ರಾಮದ ಬಡಾಕೆರೆ, ಸಾಲ್ಬುಡ, ಬಾಂಗಿನಮನೆ, ಕಂಡಿಕೇರಿ ಮೊದಲಾದೆಡೆ ಪ್ರತಿವರ್ಷ ಮಳೆಗಾಲದಲ್ಲಿ ಜನಸಾಮಾನ್ಯರು ಅನುಭವಿಸುವ ನೋವಿನ ಮಾತುಗಳಿದು‌.

ಈ‌ ಭಾಗದ ಮನೆ, ದೇವಸ್ಥಾನ, ಜಾನುವಾರು ಕೊಟ್ಟಿಗೆ, ರಸ್ತೆ ಎಲ್ಲವೂ ನೀರಿನಿಂದ ಮುಳುಗಿ ಹೋಗಿದೆ. ಹೊಳೆ, ಗದ್ದೆ, ತೋಟ ಯಾವುದು ಎಂಬುದನ್ನು ತಿಳಿಯಲಾಗದಂತೆ‌ ನೆರೆ ಏರಿದೆ. ನೆರೆ ನೀರಿನಲ್ಲಿ ರಸ್ತೆ ಮುಳುಗಿದ್ದು ಒಂದು ಪ್ಯಾಕೇಟ್ ಉಪ್ಪು ಬೇಕಾದರೂ ದೋಣಿ ಏರಿ ಬರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಮೂರ್ನಾಲ್ಕು ದಿನ ಬಿಡದೇ ಮಳೆ ಸುರಿದರೆ ಇಲ್ಲಿ‌ ನೆರೆ ಸೃಷ್ಟಿಯಾಗುತ್ತದೆ. ನೆರೆ ನೀರು ಏರಿದ ತಕ್ಷಣ ನದಿ ಪಾತ್ರದ ಜನರು ಜಾನುವಾರು, ಮೂಕ‌ಪ್ರಾಣಿಗಳನ್ನು ದೋಣಿ ಮೂಲಕ ಸುರಕ್ಷಿತ ಸ್ಥಳಕ್ಕೆ ಸೇರಿಸಿ ತಾವು ಮುಳುಗಿದ ಮನೆಯಲ್ಲಿಯೇ ತಲೆಮೇಲೆ ಕೈಹೊತ್ತು ಕುಳಿತು ಬಿಡುತ್ತಾರೆ. ತಾವೂ ಮನೆ ಬಿಟ್ಟು ಹೋಗಲಾಗುವುದಿಲ್ಲ. ಈ ಸಂಕಷ್ಟ ಒಂದೆರಡು ದಿನಕ್ಕೆ ಸರಿಹೋಗುತ್ತದೆನ್ನಲಾಗುವುದಿಲ್ಲ. ಮಳೆ ನಿರಂತರವಾಗಿ ಸುರಿದಲ್ಲಿ ವಾರಗಳ ಕಾಲವು ಇಲ್ಲಿನ ಜನಕ್ಕೆ ಜಲದಿಗ್ಬಂಧನ ಕಟ್ಟಿಟ್ಟಬುತ್ತಿಯಾಗಿದೆ.

ಯುವಕರ ಶ್ರಮದಾನ…
ನಾವುಂದ, ಬಡಾಕೆರೆ, ಸಾಲ್ಬುಡ, ಅರೆಹೊಳೆ, ಕೋಣ್ಕಿ, ಕುದ್ರು, ಚಿಕ್ಕಳ್ಳಿ, ಪಡುಕೋಣೆ ಭಾಗದಲ್ಲಿ ನೆರೆ ಸಮಸ್ಯೆ ಈ ವರ್ಷವೇನೂ ಹೊಸತಲ್ಲ. ಹಲವು ದಶಕಗಳಿಂದ ಇಲ್ಲಿನ ಜನಕ್ಕೆ ಮಳೆಗಾಲ ಶಾಪವೆಂದರೂ ತಪ್ಪಾಗದು. ಮಳೆಗಾದಲ್ಲಿ ಇಲ್ಲಿಗಾಗಿ ಮೂರ್ನಾಲ್ಕು ದೋಣಿ ಇಲ್ಲಿಗೆ ಮೀಸಲಿಡಬೇಕು. ಅಮಾರೋಗ್ಯ ಪೀಡಿತರು ಸಹಿತ ಆಹಾರ ಸಾಮಾಗ್ರಿ, ದಿನಸಿ ತರಬೇಕಾದರೆ ದೋಣಿ ಏರಿ ಪೇಟೆಗೆ ಬರಬೇಕು. ಒಂದು ದಡದಿಂದ ಮತ್ತೊಂದು ದಡಕ್ಕೆ ಸುಮಾರು ಮೂರು ಕಿಲೋಮೀಟರ್ ದೂರ ದೋಣಿ ಚಲಾಯಿಸುವುದು ನಿಜಕ್ಕೂ ಸಾಹಸವಾಗಿದೆ. ಪ್ರತಿವರ್ಷ ಮಳೆಗಾಲದಲ್ಲಿ ಈ ಭಾಗದ ಯುವಕರ ಸಹಿತ ದೋಣಿ ಚಲಾಯಿಸಲು ತಿಳಿದವರು ಹಲವು ಮಂದಿ ದೋಣಿ ಯಾನದ ಮೂಲಕ ಸಾರ್ವಜನಿಕರಿಗೆ ನೆರವಾಗುವ ಸಾಹಸಿಗಳಾಗಿ ಶ್ರಮದಾನ ಮಾಡುತ್ತಾರೆ.

ಕೃಷಿಗೂ ಹಾನಿ: ನದಿ ಪಾತ್ರದಲ್ಲಿ ನೆರೆ ಏರಿದಾಕ್ಷಣ ಇಲ್ಲಿನ ನೂರಾರು ಎಕ್ರೆ ಕೃಷಿಭೂಮಿಯಲ್ಲಿ ಮಳೆ ನೀರು ನಿಂತು ಬೆಳೆಯೆಲ್ಲಾ ಹಾನಿಯಾಗುತ್ತದೆ. ಸರಕಾರ, ಇಲಾಖೆ ಹಾನಿಯಾದ ಬೆಳೆಗೆ ಹೆಕ್ಟೇರ್ ಲೆಕ್ಕದಲ್ಲಿ‌ ಕಿಂಚಿತ್ ಪರಿಹಾರ ಕೊಟ್ಟು ಕೈತೊಳೆದುಕೊಳ್ಳುತ್ತಿದ್ದು ಆ ಬಿಡಿಗಾಸು ರೈತರಿಗೆ ಯಾವ ಲೆಕ್ಕದಲ್ಲೂ ನಷ್ಟ ಭರ್ತಿಯಾಗೋದಿಲ್ಲ. ಸರ್ಕಾರ ನಷ್ಟ ಪರಿಹಾರದ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯ ಕೃಷಿಕ ವಿಠಲ್ ಹೇಳಿದ್ದಾರೆ.

ಜನಪ್ರತಿನಿಧಿಗಳ ವಿರುದ್ಧ ಆಕ್ರೋಷ..
ಚುನಾವಣೆಯ ಸಂದರ್ಭ ಮತ ಕೇಳಲು ಬರುವ ಜನಪ್ರತಿನಿಧಿಗಳು ಮಳೆಗಾಲದ ನೆರೆ ಸಮಯ‌ ಅವರಿಗೆ ಸಮಯವಾದಾಗ ಭೇಟಿ ನೀಡಿ ವೀಕ್ಷಿಸಿ ಹೋಗುತ್ತಾರೆ. ಮತ್ತೆ ಈ ಕಡೆ ತಲೆಯನ್ನು ಹಾಕೋದಿಲ್ಲ‌ ಎಂದು‌‌ ಸ್ಥಳೀಯರು ಆಕ್ರೋಷ ವ್ಯಕ್ತಪಡಿಸಿದ್ದಾರೆ.

ಪ್ರಾತ್ಯಕ್ಷಿಕೆಯಂತಹ ನೆಪದ ಕಾರ್ಯಕ್ರಮ ಬೇಡ..
ಅಧಿಕಾರಿಗಳು ಮಳೆಗಾಲದ ಮೊದಲು ಮಳೆ ಹಾನಿ, ಪ್ರವಾಹದ ಅಣಕು ಕಾರ್ಯಾಚರಣೆ ನಡೆಸಿ ಹೋದವರು ಹತ್ತಾರು ಕರೆಗಳನ್ನು ಮಾಡಿದರೂ ಕೂಡ ಕೆಲವೊಮ್ಮೆ ಜನರ ಕಷ್ಟಕ್ಕೆ ಸ್ಪಂದಿಸಲ್ಲ. ಪ್ರಾತ್ಯಕ್ಷಿಕೆಯಂತಹ ನೆಪದ ಕಾರ್ಯಕ್ರಮದ ಬದಲು ಜನರಿಗೆ ಅನುಕೂಲವಾಗುವ ಶಾಶ್ವತ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕು. ಇಲ್ಲಿ ತೆಂಗಿನ ತೋಟಗಳು ಜಾಸ್ಥಿಯಾಗಿದ್ದು ದೊಡ್ಡ ದೋಣಿ ಸಂಚಾರ ಮಾಡಲು ಅಸಾಧ್ಯವಗಿದ್ದು ಸಣ್ಣ ದೋಣಿಗಳು ಅಗತ್ಯವಿದೆ. ದೋಣಿಗಳಿಗೆ‌ ಮೆಷಿನ್ ನೀಡುವುದು, ಸ್ವಯಂಸೇವಕರಿಗೆ ಲೈಫ್ ಜಾಕೇಟ್ ನೀಡುವ ಭರವಸೆ ಹುಸಿಯಾಗಿದೆ. ಎಷ್ಟೋ ವರ್ಷಗಳಿಂದ ನೆರೆ ವೇಳೆ ದೋಣಿ ಚಲಾಯಿಸುವವರು‌ ಕಂದಾಯ ಇಲಾಖೆಗೆ ಸೂಕ್ತ ದಾಖಲೆ ನೀಡಿದರೂ ಕೂಡ ಅವರಿಗೆ ಸೂಕ್ತ ಗೌರವಧನ ನೀಡದಿದ್ದು ಈ ಬಗ್ಗೆ ಕ್ರಮವಹಿಸಬೇಕು. ಈ ನೇರೆಯಲ್ಲಿ ಮುಳುಗಡೆಯಾದ ಮನೆಯವರ ಆಸ್ತಿಪಾಸ್ತಿ, ಕೃಷಿ ಹಾನಿಗೆ ಸೂಕ್ತ ಪರಿಹಾರ ನೀಡಬೇಕು.
– ರಾಜೇಶ್ (ಸಾಮಾಜಿಕ ಕಾರ್ಯಕರ್ತ)

ನಾವು ಬರೋದಿಲ್ಲ…!
ಮುಂಜಾಗೃತಾ ಕ್ರಮವಾಗಿ ಬೈಂದೂರು ಹಾಗೂ ಕುಂದಾಪುರದ ತಲಾ ಒಂದೊಂದು ಅಗ್ನಿಶಾಮಕ‌ ವಾಹನ ನಿಯೋಜಿಸಲಾಗಿದ್ದು ಸಿಬ್ಬಂದಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಅಗ್ನಿಶಾಮಕ ದಳದ ಕುಂದಾಪುರ ಠಾಣಾಧಿಕಾರಿ ಬಾಬು ಶೆಟ್ಟಿ ಸಹಿತ ಸಿಬ್ಬಂದಿಗಳು ಸ್ಪೀಡ್ ಬೋಟಿನಲ್ಲಿ ನೆರೆ ಪೀಡಿತ ಪ್ರದೇಶಕ್ಕೆ ಭೇಟಿ‌ನೀಡಿದಾಗ ಜನರು ತಾವು ಬರುವುದಿಲ್ಲ. ಇದನ್ನೆಲ್ಲಾ ಕಂಡುಕಂಡು ರೋಸಿ ಹೋಗಿದ್ದೇವೆ. ವರ್ಷವರ್ಷ ಸಮಸ್ಯೆ ಪರಿಹಾರದ ಭರವಸೆ ಕೇಳಿ ಸಾಕಾಗಿದೆ. ಏನೇ ಆದರೂ ಮನೆ ಬಿಟ್ಟು ಬರುವುದಿಲ್ಲ ಎಂದಿದ್ದಾರೆ.

ಸಂಸದ, ಶಾಸಕರ ಬಗ್ಗೆ ಗರಂ..!
ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ ಹಾಗೂ ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಹಾಗೂ ಅಧಿಕಾರಿಗಳು ಮರವಂತೆ, ಕಿರಿಮಂಜೇಶ್ವರದಲ್ಲಿ ಕಡಲ್ಕೊರೆತ ಪ್ರದೇಶಕ್ಕೆ ಭೇಟಿ ಮಾಡಿದ್ದರು. ಬಳಿಕ ಬಿ.ವೈ.ಆರ್ ಹಾಗೂ ಶಾಸಕರು ಒಂದೆರಡು ಕಡೆ ಬಿಜೆಪಿ ಪಕ್ಷದ ಸಭೆಯನ್ನು ನಡೆಸಿದೆ. ಆದರೆ ತಾವು ಬರುವ ಅನತಿ ದೂರದಲ್ಲಿ ನೆರೆ ಸಮಸ್ಯೆಯಿಂದ ಜನ ರೋಸಿಹೋಗಿದ್ದರೂ ಬರುವ ಕಿಂಚಿತ್ ಮಾನವೀಯತೆ ಪ್ರದರ್ಶಿಸದಿರುವುದು ಸ್ಥಳೀಯರಲ್ಲಿ ಅಸಮಾಧಾನ ಉಂಟುಮಾಡಿದೆ.

Comments are closed.