ಕರಾವಳಿ

ಉಡುಪಿ‌ ಸುಬ್ರಮಣ್ಯನಗರದ ಒಂಟಿ ವೃದ್ಧೆಯ ಕೊಲೆ ಪ್ರಕರಣ; ಆರೋಪಿ ದಂಪತಿಗೆ ಜೀವಾವಧಿ ಶಿಕ್ಷೆ

Pinterest LinkedIn Tumblr

ಉಡುಪಿ: ನಾಲ್ಕು ವರ್ಷದ ಹಿಂದೆ ಉಡುಪಿ ತಾಲೂಕಿನ ಪುತ್ತೂರು ಸುಬ್ರಹ್ಮಣ್ಯ ನಗರದಲ್ಲಿ ಒಂಟಿ ವೃದ್ಧೆಯನ್ನು ಬರ್ಬರವಾಗಿ ಕೊಲೆ ಮಾಡಿದ ದಂಪತಿಗೆ ಗುರುವಾರ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

ಧಾರವಾಡ ತಾಲೂಕಿನ ನವಲಗುಂದ ನಿವಾಸಿಗಳಾದ ಅಂಬಣ್ಣ ಅಲಿಯಾಸ್‌ ಅಂಬರೀಶ್‌ ಹಾಗೂ ಆತನ ಪತ್ನಿ ರಶೀದಾ ಅಲಿಯಾಸ್‌ ಜ್ಯೋತಿ ಶಿಕ್ಷೆಗೆ ಗುರಿಯಾದವರು. 80 ವರ್ಷ ಪ್ರಾಯದ ರತ್ನಾವತಿ ಶೆಡ್ತಿ ಕೊಲೆಯಾದವರು. ದಂಪತಿಗೆ ಜೀವಾವಧಿ ಶಿಕ್ಷೆಯ ಜತೆಗೆ ತಲಾ 50,000 ರೂ. ದಂಡ ವಿಧಿಸಲಾಗಿದೆ.

ಪ್ರಕರಣದ ಹಿನ್ನೆಲೆ:
ರತ್ನಾವತಿ ಶೆಡ್ತಿ ಅವರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರಿದ್ದು ಸುಬ್ರಹ್ಮಣ್ಯ ನಗರದಲ್ಲಿ ಒಂಟಿಯಾಗಿ ವಾಸವಾಗಿದ್ದರು. ಮೂರು ಕೊಠಡಿಗಳನ್ನು ಬಾಡಿಗೆಗೆ ಕೊಟ್ಟು ಜೀವನ ನಿರ್ವಹಣೆ ಮಾಡುತ್ತಿದ್ದರು. ಮಕ್ಕಳು ಆಗಾಗ ಬಂದು ಯೋಗಕ್ಷೇಮ ವಿಚಾರಿಸಿಕೊಳ್ಳುತ್ತಿದ್ದರು. 2019ರ ಜು. 5ರಂದು ಪುತ್ರಿ ಸುಪ್ರಭಾ ತಾಯಿಗೆ ಕರೆ ಮಾಡಿದಾಗ ಸ್ವೀಕರಿಸಲಿಲ್ಲ. ಕೂಡಲೇ ಸಹೋದರಿಗೆ ಕರೆ ಮಾಡಿ ವಿಚಾರಿಸಿದಾಗಲೂ ತಾಯಿಯ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಅದೇ ದಿನ ಸಂಜೆ ಅಮ್ಮನ ಮನೆಗೆ ಬಂದಾಗ ಬೆಡ್‌ರೂಮ್‌ನಲ್ಲಿ ತಾಯಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಜು. 10ರಂದು ಆರೋಪಿ ದಂಪತಿಯನ್ನು ಬಂಧಿಸಿದ್ದರು. ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಜು. 2ರಂದು ಮಧ್ಯಾಹ್ನ ರತ್ನಾವತಿ ಶೆಡ್ತಿ ಮನೆಗೆ ನುಗ್ಗಿ ಆಭರಣಕ್ಕೆ ಬೇಡಿಕೆ ಇಟ್ಟಿದ್ದರು. ಕೊಡಲು ನಿರಾಕರಿಸಿದಾಗ ಕತ್ತಿಯಿಂದ ಕೊಲೆ ಮಾಡಿ ಮೈಮೇಲಿದ್ದ ಆಭರಣ, ಮನೆಯಲ್ಲಿದ್ದ ಚಿನ್ನಾಭರಣ, ಮೊಬೈಲ್‌ ಹಾಗೂ 5,000 ರೂ. ನಗದು ದೋಚಿ ಪರಾರಿಯಾಗಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದರು.

ಅಂದಿನ ಉಡುಪಿ ಇನ್‌ಸ್ಪೆಕ್ಟರ್‌ ಮಂಜುನಾಥ್‌ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದಲ್ಲಿ ಪ್ರಕರಣ ಸಂಬಂಧ 21 ಸಾಕ್ಷಿಗಳ ವಿಚಾರಣೆ ನಡೆದಿತ್ತು. ಪ್ಯಾಸಿಕ್ಯೂಷನ್‌ ಪರವಾಗಿ 53 ದಾಖಲಾತಿ ಹಾಗೂ 6 ಇತರ ವಸ್ತುಗಳನ್ನು ಗುರುತಿಸಲಾಗಿತ್ತು. ಸಾಕ್ಷಿದಾರರ ವಿಚಾರಣೆಯನ್ನು ಪ್ರಧಾನ ಜಿಲ್ಲಾ ಸೆಷನ್ಸ್‌ ನ್ಯಾಯಾಲಯದ ಸರಕಾರಿ ಅಭಿಯೋಜಕರಾದ ಶಾಂತಿಬಾಯಿ ನಡೆಸಿದ್ದರು.

ಪ್ರಕರಣ 2022ರ ಫೆಬ್ರವರಿಯಲ್ಲಿ 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾವಣೆಯಾಯಿತು. ನ್ಯಾಯಾಧೀಶ ದಿನೇಶ್‌ ಹೆಗಡೆ ವಾದ-ಪ್ರತಿವಾದಗಳನ್ನು ಆಲಿಸಿ ಆರೋಪಿಗಳ ವಿರುದ್ಧದ ಆರೋಪಗಳು ರುಜುವಾತಾಗಿದೆ ಎಂದು ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಸರಕಾರದ ಪರ ಸರಕಾರಿ ಅಭಿಯೋಜಕ ಜಯರಾಮ ಶೆಟ್ಟಿ ವಾದ ಮಂಡಿಸಿದರು.

 

Comments are closed.