ಮಂಗಳೂರು: ಅರ್ಕುಳ ಕೋಟೆಯಲ್ಲಿ ಅಕ್ರಮವಾಗಿ ಗೋ ಮಾಂಸ ಮಾಡಿ ಮಾರಾಟ ಮಾಡುತ್ತಿದ್ದ ಆರೋಪಿ ಬಾತೀಶ್ನ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತರು (ಎಸಿ) ನೋಟಿಸ್ ನೀಡಿದ್ದಾರೆ.
ಆರೋಪಿ ಬಾತೀಶ್ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ಜುಲೈ 3 ರಂದು ಗ್ರಾಮಾಂತರ ಪೊಲೀಸರು ದಾಳಿ ನಡೆಸಿ 95 ಕೆಜಿ ದನದ ಮಾಂಸ, ತೂಕದ ತಕ್ಕಡಿ, ಕತ್ತಿಗಳು, ಮರದ ದಿಮ್ಮಿ ಇತ್ಯಾದಿಗಳನ್ನು ಜಪ್ತಿ ಮಾಡಿದ್ದರು. ಆರೋಪಿ ಎ ಕೆ ಖಾಲಿದ್ ಎಂಬುವರ ಮನೆಯ ಪಕ್ಕದ ಶೆಡ್ನಲ್ಲಿ ಈ ಅಕ್ರಮ ನಡೆಸುತ್ತಿದ್ದು, ಪೊಲೀಸರು ದಾಳಿ ನಡೆಸಿದಾಗ ಆತ ಸ್ಥಳದಿಂದ ಪರಾರಿಯಾಗಿದ್ದಾನೆ.
ಇನ್ನು ಆರೋಪಿಯು ಯಾವುದೇ ಅನುಮತಿಯಿಲ್ಲದೆ ಜಾನುವಾರುಗಳನ್ನು ಕೊಂದಿರುವ ಕಾರಣ, ಕೃತ್ಯ ಎಸಗಿದ ಸ್ಥಳವನ್ನು ಜಪ್ತಿ ಮಾಡುವ ಬಗ್ಗೆ ವಿಚಾರಣೆಯನ್ನು ಜುಲೈ 12 ರಂದು ಮಧ್ಯಾಹ್ನ 3 ಗಂಟೆಗೆ ಎಸಿ ನ್ಯಾಯಾಲಯದ ಸಭಾಂಗಣದಲ್ಲಿ ನಡೆಸಲಾಗುವುದು ಎಂದು ಎಸಿಯವರ ನೋಟಿಸ್ನಲ್ಲಿ ತಿಳಿಸಲಾಗಿದೆ.
ಆರೋಪಿಯು ತನ್ನ ಅಧಿಕೃತ ಪ್ರತಿನಿಧಿ ಅಥವಾ ವಕೀಲರ ಮೂಲಕ ಆ ದಿನದಂದು ತನ್ನ ವಾದ- ಪ್ರತಿವಾದಗಳನ್ನು ಮಂಡಿಸಲು ಅನುಮತಿಸಲಾಗಿದ್ದು, ಇದನ್ನು ಅನುಸರಿಸದಿದ್ದಲ್ಲಿ, ಕಾನೂನು ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
Comments are closed.