ಬೆಂಗಳೂರು: ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್ ನೀಡಲಾಗಿದೆ ಎಂದು ತಿಳಿದುಬಂದಿದೆ. ಉಡುಪಿ ನಗರ ಪೊಲೀಸರಿಂದ ಬಿ ರಿಪೋರ್ಟ್ ಸಲ್ಲಿಕೆಯಾಗಿದ್ದು ಈಶ್ವರಪ್ಪ ಮೇಲಿನ ಆರೋಪಕ್ಕೆ ಸಾಕ್ಷ್ಯಾಧಾರಗಳ ಕೊರತೆ ಇದೆ ಎಂದು ಹೇಳಲಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ ಅವರು, ನಾನು ಮುಕ್ತವಾಗಿ ಹೊರಗೆ ಬಂದಿದ್ದೇನೆ, ಆರೋಪದಿಂದ ಮುಕ್ತವಾಗಿ ಬರುತ್ತೇನೆ ಎಂದು ವಿಶ್ವಾಸವಿತ್ತು. ಮನೆ ದೇವತೆ ಚೌಡೇಶ್ವರಿ ಆಶೀರ್ವಾದದಿಂದ , ಇಡೀ ದೇಶದ ಸಾಧು ಸಂತರ ಆಶೀರ್ವಾದ ನೀಡಿದ್ದರು. ನಮ್ಮ ಪಕ್ಷದ ನಾಯಕರು, ಕಾರ್ಯಕರತರು ಮುಜುಗರದಲ್ಲಿದ್ದರು, ಅವರೆಲ್ಲರೂ ಮುಜುಗರದಿಂದ ಹೊರ ಬಂದಿದ್ದಾರೆ ಎಂದರು.
ನಿರಾಧಾರ ಆರೋಪ ಬಂದಿದ್ದಕ್ಕೆ ನನಗೆ ನೋವು ಇತ್ತು. ರಾಜಕಾರಣದಲ್ಲಿ ಆರೋಪಗಳು ಸಹಜ, ಆರೋಪದಿಂದ ಮುಕ್ತನಾದ ತೃಪ್ತಿ ಇದೆ ಎಂದರು.
ಗುತ್ತಿಗೆದಾರ ಸಂತೋಷ್ ಪಾಟೀಲ್ ತಾವು ಮಾಡಿರುವ ಕೆಲಸಕ್ಕೆ ಹಣ ಬಿಡುಗಡೆ ಮಾಡಲು 40 ಪರ್ಸೆಂಟ್ ಲಂಚ ಕೇಳುತ್ತಿದ್ದಾರೆ’ ಎಂದು ಆರೋಪಿಸಿದ್ದರು. ಅಲ್ಲದೆ ತಮ್ಮ ಸಾವಿಗೆ ಈಶ್ವರಪ್ಪ ಕಾರಣ ಎಂದು ವಾಟ್ಸ್ ಆ್ಯಪ್ ಮೆಸೇಜ್ ಮಾಡಿ ಏ.12 ರಂದು ಉಡುಪಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಂತೋಷ್ ಆತ್ಮಹತ್ಯೆ ಹಿನ್ನೆಲೆಯಲ್ಲಿ ಅವರ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿತ್ತು. ಬಳಿಕ ಕೆ.ಎಸ್.ಈಶ್ವರಪ್ಪ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸಿದ್ದರು.
Comments are closed.