ಬೆಳ್ತಂಗಡಿ: ಬೆಳಾಲು ಗ್ರಾಮದ ಕೆರೆಕೋಡಿ ಎಂಬಲ್ಲಿ ಹಾಡುಹಗಲೇ ಮನೆಯಲ್ಲಿದ್ದ ವೃದ್ಧೆಯೋರ್ವರನ್ನು ಹತ್ಯೆ ಮಾಡಿ ಚಿನ್ನಾಭರಣ ಸಹಿತ ಮನೆಯಲ್ಲಿದ್ದ ನಗದನ್ನು ದೋಚಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಕಡಿರುದ್ಯಾವರ ಗ್ರಾಮದ ಕಾನರ್ಪ ಕುಮೇರು ಅಶೋಕ ಎಂದು ಗುರುತಿಸಲಾಗಿದೆ.
ಬೆಳಾಲು ಗ್ರಾಮದ ಕೆರೆಕೋಡಿ ನಿವಾಸಿ ಅಕ್ಕು (85) ಎಂಬ ವೃದ್ದೆಯನ್ನು ಸಂಬಂಧಿ ಯುವಕನೇ ಹತ್ಯೆಗೈದು ಹಣ, ಚಿನ್ನಾಭರಣ ಸಹಿತ ಪರಾರಿಯಾಗಿದ್ದ.
ಇನ್ನು ಅಕ್ಕು ಅವರು ತಮ್ಮ ಮಗ, ಸೊಸೆ ಮತ್ತು ಮೊಮ್ಮಗಳ ಜೊತೆ ವಾಸವಿದ್ದು, ಮಗ ಮತ್ತು ಸೊಸೆ ಕೆಲಸಕ್ಕೆ ಹೋಗಿದ್ದರು. ಮೊಮ್ಮಗಳು ಮಧ್ಯಾಹ್ನ ಶಾಲೆ ಬಿಟ್ಟು ಮನೆಗೆ ಬಂದು ಅಜ್ಜಿಯನ್ನು ಕರೆದಾಗ, ಅಜ್ಜಿ ಮನೆಯಲ್ಲಿ ಇರಲಿಲ್ಲ. ನಂತರ ಹೊರಗಡೆ ಬಂದು ನೋಡಿದಾಗ ಅಜ್ಜಿ ಅಕ್ಕು ಅವರು ತಮ್ಮ ಮನೆಯ ಸಮೀಪದ ಹಟ್ಟಿಯ ಹಿಂದೆ ಬಿದ್ದಿರುವುದು ಕಂಡು ಬಂದು ಪೋಷಕರಿಗೆ ವಿಷಯ ತಿಳಿಸಿದ್ದಾಳೆ.
ಅವರು ಬಂದು ನೋಡಿದಾಗ ಅಕ್ಕು ಅವರು ಮೃತಪಟ್ಟಿದ್ದು, ಅವರ ಕಿವಿಯಲ್ಲಿದ್ದ ಚಿನ್ನಾಭರಣ ಕಿತ್ತುಕೊಂಡು ಮನೆಯಲ್ಲಿದ್ದ ನಗದನ್ನು ಯಾರೋ ದರೋಡೆಗೈದಿರುವುದು ಬೆಳಕಿಗೆ ಬಂದಿದ್ದು, ಈ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದರು.
Comments are closed.