(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಇಲ್ಲಿನ ಕಾಳಾವರ ಜಂಕ್ಷನ್ ಬಳಿ ಈ ಹಿಂದಿದ್ದ ಬಸ್ ನಿಲ್ದಾಣ ತೆರವುಗೊಳಿಸಿದ್ದು ಮಳೆಗಾಲದ ಹಿನ್ನೆಲೆ ಸಾರ್ವಜನಿಕರು ತಾತ್ಕಾಲಿಕ ಪ್ರಯಾಣಿಕರ ತಂಗುದಾಣ ನಿರ್ಮಿಸಿ ಕೊಂಡಿದ್ದು ಇದನ್ನು ತೆರವು ಮಾಡುವ ವಿಚಾರದಲ್ಲಿ ಇತ್ತೀಚೆಗೆ ಪ್ರತಿಭಟನೆ ನಡೆದು ಕಾಳಾವರ ಗ್ರಾ.ಪಂ ಎದುರು ಸಾರ್ವಜನಿಕರು ಧರಣಿ ನಡೆಸಿದ ಹಿನ್ನೆಲೆ ಶುಕ್ರವಾರ ಗ್ರಾ.ಪಂ ವತಿಯಿಂದ ಸಾಮಾನ್ಯ ಸ್ಥಾಯಿ ಸಮಿತಿ ಸಭೆ ಕರೆಯಲಾಗಿತ್ತು.
ತಾಲೂಕಿನ ಕೋಟೇಶ್ವರ- ಸೋಮೇಶ್ವರ ಸಂಪರ್ಕ ರಾಜ್ಯ ಹೆದ್ದಾರಿ ನಡುವಿನ ಕಾಳಾವಾರ ಸರ್ಕಲ್ ಬಳಿ ಈ ಹಿಂದಿದ್ದ ಬಸ್ ನಿಲ್ದಾಣವನ್ನು ಕಾಮಗಾರಿ ವೇಳೆ ತೆರವು ಮಾಡಿದ್ದು ಜನರು ಮೊದಲಿದ್ದ ಜಾಗದಲ್ಲಿ ತಾತ್ಕಾಲಿಕವಾಗಿ ತಂಗುದಾಣ ನಿರ್ಮಿಸಿಕೊಂಡಿದ್ದರು. ಆದರೆ ಇದಕ್ಕೂ ಕೂಡ ಪರ- ವಿರೋಧ ವ್ಯಕ್ತವಾಗಿದ್ದು ಸೌಹಾರ್ಧಯುತವಾಗಿ ಪರಿಹಾರವಾಗಿರಲಿಲ್ಲ. ಈ ಹಿನ್ನೆಲೆ ಸಾಮಾನ್ಯ ಸ್ಥಾಯಿ ಸಮಿತಿ ಸಭೆ ನಡೆಸಿದ್ದು ಅಲ್ಲಿಯೂ ಕೂಡ ತಾರ್ಕಿಕ ನಿರ್ಧಾರಕ್ಕೆ ಬರಲಾಗದೇ ಕೇವಲ ಚರ್ಚೆ, ಗೊಂದಲ- ಗೋಜಲುಗಳ ನಡುವೆ ಸಭೆ ಅಂತ್ಯವಾಯಿತು.
ಈ ವೇಳೆ ಮಾತನಾಡಿದ ಗ್ರಾಮಸ್ಥ ಮೋಹನಚಂದ್ರ ಕಾಳಾವರ್, ರಸ್ತೆ ನಿರ್ಮಾಣದ ವೇಳೆ ನಿಯಮಾನುಸಾರ ಮಾಡಿದ್ದರೆ ಇದೆಲ್ಲಾ ಸಮಸ್ಯೆ ಉದ್ಭವಿಸುತ್ತಿರಲಿಲ್ಲ. ಬಸ್ ನಿಲ್ದಾಣದ ವಿಚಾರದಲ್ಲಿ ಊರಿನ ಶಾಂತಿ ಸುವ್ಯವಸ್ಥೆ ಹಾಳಾಗಿದ್ದಕ್ಕೆ ಹೊಣೆಗಾರರು ಯಾರು? ಈಗಿರುವ ತಾತ್ಕಾಲಿಕ ನಿಲ್ದಾಣ ಜಾಗ ವಿಚಾರದಲ್ಲಿ ಆಕ್ಷೇಪಣೆ ಅರ್ಜಿಯು ಸಲ್ಲಿಸಲಾಗಿದೆ ಎಂದರು.
ಪಿಡಬ್ಲ್ಯೂಡಿ ಇಲಾಖೆ ಇಂಜಿನಿಯರ್ ಹರ್ಷವರ್ಧನ್ ಸಭೆಯಲ್ಲಿ ಮಾತನಾಡಿ, ಬಸ್ ನಿಲ್ದಾಣ ವಿಚಾರ ಹಳೆ ಜಾಗದಲ್ಲಿ ಮಾಡಲು ಬೇಡಿಕೆಯಿದ್ದು ಇಂಜಕ್ಷನ್ ಆರ್ಡರ್ ಇರುವುದರಿಂದ ಕಾನೂನು ಸಲಹೆ ಪಡೆದು ಮುಂದುವರೆಯದೇ ಇದ್ದರೆ ನ್ಯಾಯಾಂಗ ನಿಂದನೆಯಾಗುತ್ತದೆ. ಎಲ್ಲಿ ನಿಲ್ದಾಣವಾಗಬೇಕೆಂದು ಗ್ರಾ.ಪಂಹಾಗೂ ಸಾರ್ವಜನಿಕರು ಒಮ್ಮತದ ನಿರ್ಧಾರ ಮಾಡಬೇಕು ಎಂದರು.
ಸುಸಜ್ಜಿತ ಬಸ್ ನಿಲ್ದಾಣ ಮಾಡಿಕೊಡಬೇಕು ಹಾಗೂ ಅಲ್ಲಿಯವರೆಗೆ ತಾತ್ಕಾಲಿಕ ಬಸ್ ನಿಲ್ದಾಣ ತೆರವು ಮಾಡಬಾರದೆಂದು ಸ್ಥಳೀಯರ ಪರವಾಗಿ ಸತೀಶ್ ಕಾಳಾವರ, ಸುಧೀರ್ ಜಿ. ಕಾಳಾವರ, ಶ್ರೀನಿವಾಸ್, ರಘುರಾಮ್ ಮಾತನಾಡಿದರು. ಇದೇ ವೇಳೆ ವ್ಯಕ್ತಿಯೊಬ್ಬರು ಈಗಿನ ಬಸ್ ನಿಲ್ದಾಣದ ಬಗ್ಗೆ ಮಾತನಾಡಿದಾಗ ಇದಕ್ಕೆ ಸಭೆಯಲ್ಲಿದ್ದ ಬಹುತೇಕ ಮಂದಿ ಆಕ್ರೋಷ ವ್ಯಕ್ತಪಡಿಸಿದರು. ಈ ವೇಳೆ ಗೊಂದಲದ ಪರಿಸ್ಥಿತಿ ಉಂಟಾಗಿದ್ದು ಪೊಲೀಸರು ಹಾಗೂ ಸ್ಥಳೀಯ ಮುಖಂಡರು ಪರಿಸ್ಥಿತಿ ತಿಳಿಗೊಳಿಸಿದರು.
ಕಾಳಾವರ ಗ್ರಾ.ಪಂ ಅಧ್ಯಕ್ಷೆ ಆಶಲತಾ ಶೆಟ್ಟಿ, ಉಪಾಧ್ಯಕ್ಷ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ರಾಮಚಂದ್ರ ನಾವಡ, ಪಿಡಿಓ ಪಾಡುರಂಗ ಶೇಟ್, ಸದಸ್ಯರಾದ ರವಿರಾಜ್ ಶೆಟ್ಟಿ, ಚಂದ್ರ ಪೂಜಾರಿ ಕಾಳಾವಾರ, ರಮೇಶ್ ಶೆಟ್ಟಿ ವಕ್ವಾಡಿ, ಸುಪ್ರೀತಾ ಇದ್ದರು. ತಾ.ಪಂ ಮಾಜಿ ಸದಸ್ಯ ದೀಪಕ್ ಕುಮಾರ್ ಶೆಟ್ಟಿ ಕಾಳಾವರ, ಶಶಿಕಲಾ, ಕಾಳಾವರ ಗ್ರಾ.ಪಂ ಮಾಜಿ ಸದಸ್ಯರಾದ ಸುರೇಶ್, ಜಯಲಕ್ಷ್ಮಿ ಉಪಸ್ಥಿತರಿದ್ದರು.
ತಾತ್ಕಾಲಿಕ ಬಸ್ ಪ್ರಯಾಣಿಕರ ತಂಗುದಾಣ ನಿರ್ಮಿಸಿದ ಸ್ಥಳದ ವಿಚಾರದಲ್ಲಿ ಇಂಜಕ್ಷನ್ ಇದೆ. ಅದಕ್ಕಾಗಿ ಸಾರ್ವಜನಿಕರ ಬೇಡಿಕೆ ಗಮನದಲ್ಲಿರಿಸಿಕೊಂಡು ಕಾನೂನು ಸಲಹೆ ಪಡೆದು ಶನಿವಾರ ನಡೆಯುವ ಸಾಮಾನ್ಯ ಸಭೆಯಲ್ಲಿ ವಿಚಾರ ಚರ್ಚಿಸಿ ಮುಂದಿನ ದಿನದಲ್ಲಿ ಮತ್ತೆ ಸಾರ್ವಜನಿಕರ ಸಭೆ ಕರೆದು ವಿಚಾರ ಮಂಡಿಸುತ್ತೇವೆ.
– ರಾಮಚಂದ್ರ ನಾವಡ, (ಕಾಳಾವರ ಗ್ರಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ)
ಮಳೆಗಾಲದ ಹಿನ್ನೆಲೆ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ತಪ್ಪಿಸಲು ತಾತ್ಕಾಲಿಕ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿತ್ತು. ಇದರಿಂದ ಕಾಳಾವಾರ,ಅಸೋಡು,ವಕ್ವಾಡಿ ಗ್ರಾಮದವರಿಗೂ ಅನುಕೂಲವಾಗುತ್ತಿತ್ತು. ಈ ತಂಗುದಾಣವನ್ನು ತೆರವು ಮಾಡುವ ಬಗ್ಗೆ ವಿರೋಧವಿದೆ. ಸಭೆಯಲ್ಲಿ ಚರ್ಚೆಯಾದಂತೆ ಅಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಜನರ ಕಷ್ಟಕ್ಕೆ ಸೂಕ್ತ ಸ್ಪಂದನೆ ನೀಡಿ. ನಮಗೆ ಗ್ರಾ.ಪಂ ಬಸ್ ನಿಲ್ದಾಣ ಮಾಡಿಕೊಡುವ ಬದಲು ಅನುಮತಿ ನೀಡಿದರೆ ಸಾರ್ವಜನಿಕರೇ ಮಾಡಿಕೊಳ್ಳುತ್ತೇವೆ. ಅಲ್ಲಿಯವರೆಗೂ ತಾತ್ಕಾಲಿಕ ಬಸ್ ನಿಲ್ದಾಣ ತೆರವು ಮಾಡಲು ಬಂದಲ್ಲಿ ಉಘ್ರ ಹೋರಾಟ ಮಾಡುತ್ತೇವೆ.
– ಸುಧೀರ್ ಹಾಗೂ ಸತೀಶ್ ಕಾಳಾವರ(ಸಾಮಾಜಿಕ ಹೋರಾಟಗಾರರು)
Comments are closed.