ಆರೋಗ್ಯ

ಫವರ್ ಸ್ಟಾರ್ ಪುನೀತ್ ಸ್ಮರಣಾರ್ಥ ‘ಅಪ್ಪು ಎಕ್ಸ್‌ಪ್ರೆಸ್‌’; ಅಂಬುಲೆನ್ಸ್ ಕೊಡುಗೆ ನೀಡಿದ ಪ್ರಕಾಶ್ ರೈ

Pinterest LinkedIn Tumblr

ಮೈಸೂರು: ಸ್ಯಾಂಡಲ್ ವುಡ್ ನಟ ಪವರ್ ಸ್ಟಾರ್, ಅಭಿಮಾನಿಗಳ ನೆಚ್ಚಿನ ಅಪ್ಪು, ದಿ. ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ನಟ ಪ್ರಕಾಶ್ ರೈ (ಪ್ರಕಾಶ್ ರಾಜ್) ಅವರು ಸಾಮಾಜಿಕ ಸೇವಾ ಕಾರ್ಯ ಆರಂಭಿಸಿದ್ದು ಮೈಸೂರಿನ ಮಿಷನ್ ಆಸ್ಪತ್ರೆಗೆ ಪುನೀತ್ ಹೆಸರಿನಲ್ಲಿ ಸುಸಜ್ಜಿತ ಅಂಬುಲೆನ್ಸ್ ಕೊಡುಗೆಯಾಗಿ ನೀಡಿದ್ದಾರೆ.

ಮೈಸೂರಿನ ಮಿಷನ್ ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರಕಾಶ್ ರೈ ಅವರು, ಅಪ್ಪು ನಮ್ಮನ್ನು ಅಗಲಿದ್ದಾಗ ಇಡೀ ರಾಜ್ಯಕ್ಕೆ ಅನಾಥ ಪ್ರಜ್ಞೆ ಕಾಡಿತು. ಮಾತು ಹೊರಡದ ಮೌನ ನನ್ನನ್ನು ಕೂಡ ಆವರಿಸಿತ್ತು. ಹೀಗಾಗಿ ಇದುವರೆಗೂ ಅಪ್ಪು ಬಗ್ಗೆ ನಾನು ಎಲ್ಲಿಯೂ ಮಾತಾಡಿರಲಿಲ್ಲ ಎಂದರು.

ಮತ್ತೊಬ್ಬ ಅಪ್ಪು ಹುಟ್ಟಿ ಬರುತ್ತಾನೋ ಗೊತ್ತಿಲ್ಲ. ಅಪ್ಪುಗೆ ಇದ್ದ ಸಾಮಾಜಿಕ ಬದ್ಧತೆ ಬಹಳ ಅಭೂತಪೂರ್ವವಾದದ್ದು. ಹೊಸ ಪ್ರತಿಭೆಗೆ ಅವಕಾಶ ಕೊಡಲು ಸಣ್ಣಸಣ್ಣ ಸಿನಿಮಾ ಮಾಡಬೇಕು ಎಂದು ಸಲಹೆ ಕೊಟ್ಟಿದ್ದೆ. ಆ ಸಲಹೆಯನ್ನು ಅಪ್ಪು ಅವರು ಗಂಭೀರವಾಗಿ ಪರಿಗಣಿಸಿ ಸಣ್ಣ ಸಣ್ಣ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದರು.

ಕೋವಿಡ್ ಸಂದರ್ಭದಲ್ಲಿ ಪ್ರಕಾಶ್ ರಾಜ್ ಫೌಂಡೇಶನ್’ಗೆ ರಾಜ್ ಫೌಂಡೇಶನ್ ನಿಂದ ಅಪ್ಪು ಅವರು 2 ಲಕ್ಷ ಕೊಟ್ಟಿದ್ದರು. ಅಪ್ಪು ಇದನ್ನು ಎಲ್ಲೂ ಹೇಳಿಕೊಂಡಿರಲಿಲ್ಲ. ಘಟನೆ ನಡೆದ ದಿನ 10 ನಿಮಿಷ ಮುಂಚೆ ಅಪ್ಪು ಅವರಿಗೆ ಅಂಬುಲೆನ್ಸ್ ಸಿಕ್ಕಿದ್ದರೆ ಅವರು ಬದುಕುತ್ತಿದ್ದರೇನೋ ಅಂತಾ ನನಗೆ ಅನ್ನಿಸಿತ್ತು. ಈ ಕಾರಣ ಅಂಬುಲೆನ್ಸ್ ವ್ಯವಸ್ಥೆ ಎಲ್ಲಾ ಕಡೆ ಮಾಡಲು ಮುಂದಾಗಿದ್ದೇನೆ. ‘ಅಪ್ಪು ಎಕ್ಸ್‌ಪ್ರೆಸ್‌’ ಎಂದು ಅಂಬುಲೆನ್ಸ್ ಗೆ ಹೆಸರು ಇಟ್ಟಿದ್ದೇವೆ. ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಅಂಬುಲೆನ್ಸ್ ಕೊಡುತ್ತೇವೆ. ಇನ್ನೊಂದು ವರ್ಷದಲ್ಲಿ ಈ ಕೆಲಸ ಆಗುತ್ತದೆ. ಜನರು, ಆತ್ಮೀಯರ ಬಳಿ ಇದಕ್ಕಾಗಿ ಹಣ ಕೇಳುತ್ತೇನೆ. ಅಷ್ಟು ಹಣ ಸಂಗ್ರಹವಾಗದೆ ಇದ್ದರೂ ನಾನೇ ದುಡಿದ ಈ ಕೆಲಸ ಸಂಪೂರ್ಣ ಮಾಡುತ್ತೇನೆ ಎಂದು ಪ್ರಕಾಶ್ ರೈ ಮಾತು ನೀಡಿದರು.

ಇದೇ ವೇಳೆ ಮೈಸೂರಿನ ಮಿಷನ್ ಆಸ್ಪತ್ರೆಯಲ್ಲಿ ನಿರ್ದೇಶಕ ಆನಂದರಾಮ್ ಮಾತನಾಡಿ, ಅಂಬುಲೆನ್ಸ್ ಗೆ ರಾಜಕುಮಾರ್ ಚಿತ್ರದ ಪುನೀತ್ ಅವರ ಚಿತ್ರವನ್ನು ಬಳಸಿಕೊಳ್ಳಲಾಗಿದೆ. ಇಡೀ ರಾಜ್ಯಾದ್ಯಂತ ಇಂತಹ ಅಂಬುಲೆನ್ಸ್ ಗಳನ್ನು ನೀಡಲಾಗುತ್ತದೆ. ಪ್ರಕಾಶ್ ರಾಜ್ ಫೌಂಡೇಶನ್ ನಿಂದ ಅಪ್ಪು ಅವರ ಸ್ಮರಣೆ ಆಗುತ್ತಿದೆ ಎಂದರು.

Comments are closed.