ಕರ್ನಾಟಕ

ರಾಜ್ಯದಲ್ಲಿ ಮುಂಬರುವ ಚುನಾವಣೆಯಲ್ಲಿ 140 ಸೀಟು ಗೆದ್ದು ಸಂಪೂರ್ಣ ಬಲದೊಂದಿಗೆ ಬಿಜೆಪಿ ಅಧಿಕಾರಕ್ಕೆ: ಬಿ.ಎಸ್ ಯಡಿಯೂರಪ್ಪ

Pinterest LinkedIn Tumblr

ಬೆಂಗಳೂರು: ಬಿಜೆಪಿ ಹೈಕಮಾಂಡ್ ನನಗೆ ಹೊಸ ದೊಡ್ಡ ಜವಾಬ್ದಾರಿಯನ್ನು ನೀಡಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ಬಿಜೆಪಿ ಸಂಸದೀಯ ಮಂಡಳಿ ಹಾಗೂ ಬಿಜೆಪಿ ಕೇಂದ್ರ ಚುನಾವಣಾ ಸಮಿತಿಗೆ ಬಡ್ತಿ ನೀಡಿ ಹೈಕಮಾಂಡ್ ನಿಂದ ಆದೇಶ ಹೊರಬಂದ ನಂತರ ಬೆಂಗಳೂರಿನ ಕುಮಾರ ಕೃಪಾ ರಸ್ತೆಯಲ್ಲಿರುವ ತಮ್ಮ ಕಾವೇರಿ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಕಳೆದ ವರ್ಷ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಂತರ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿಯನ್ನು ಸಂಪೂರ್ಣ ಬಹುಮತದಿಂದ ಅಧಿಕಾರಕ್ಕೆ ತರಬೇಕೆಂದು ತೀರ್ಮಾನಿಸಿದ್ದೆ. ಪಕ್ಷವು ಕಾರ್ಯಕರ್ತರ ಶ್ರಮ, ಪ್ರಯತ್ನಗಳನ್ನು ಗುರುತಿಸುತ್ತದೆ. ರಾಜಕೀಯ ಮತ್ತು ಸಾರ್ವಜನಿಕ ಬದುಕಿನಿಂದ ನಾನು ನಿವೃತ್ತನಾಗಬೇಕೆಂದು ಯಾವತ್ತೂ ಬಯಸಿರಲಿಲ್ಲ. ಮುಂದಿನ ವರ್ಷ ರಾಜ್ಯದಲ್ಲಿ 140 ಸೀಟುಗಳನ್ನು ಗೆದ್ದು ಸಂಪೂರ್ಣ ಬಲದೊಂದಿಗೆ ಮತ್ತೊಂದು ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಬೇರೆ ಪಕ್ಷ ಅಧಿಕಾರಕ್ಕೆ ಬರಲು ನಾವು ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಕಳೆದ ವರ್ಷ ಜುಲೈನಲ್ಲಿ ಸಿಎಂ ಸ್ಥಾನದಿಂದ ಕೆಳಗಿಳಿದ ನಂತರ ಪಕ್ಷದಲ್ಲಿ ಬಿಎಸ್ ವೈಯವರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂಬ‌ ಮಾತುಗಳ ನಡುವೆ ಇದೀಗ ಹೈಕಮಾಂಡ್ ಅವರನ್ನು ಪಕ್ಷದ ಪ್ರಮುಖ ಸಮಿತಿಗಳಲ್ಲಿ ಸೇರಿಸಿಕೊಂಡಿದೆ. ಈ ಕ್ರಮವು ಕರ್ನಾಟಕದಲ್ಲಿ ಬಿಜೆಪಿಗೆ ದೊಡ್ಡ ಉತ್ತೇಜನವನ್ನು ನೀಡಿದೆ. ಅವರು ಈಗ ಕರ್ನಾಟಕದಲ್ಲಿ ಮಾತ್ರವಲ್ಲದೆ ಇತರ ರಾಜ್ಯಗಳಲ್ಲಿಯೂ ದೊಡ್ಡ ಪಾತ್ರವನ್ನು ವಹಿಸುವ ಸಾಧ್ಯತೆಯಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಯಡಿಯೂರಪ್ಪ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಅವರ ಸೇವೆ ಕರ್ನಾಟಕದಲ್ಲಿ ಮಾತ್ರವಲ್ಲದೆ ದಕ್ಷಿಣ ಭಾರತದ ರಾಜ್ಯಗಳಾದ್ಯಂತ ಅಗತ್ಯವಿದೆ ಎಂದು ಹೇಳಿದರು ಎಂದು ಸುದ್ದಿಗೋಷ್ಠಿಯಲ್ಲಿ ಬಿಎಸ್ ವೈ ಹೇಳಿದ್ದಾರೆ.

ಪಕ್ಷ ನನಗೆ ಎಲ್ಲವನ್ನೂ ನೀಡಿದೆ. ಆರಂಭದ ದಿನಗಳಲ್ಲಿ ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೆ. ನಮ್ಮ ನಾಯಕರು ನನ್ನ ಸಾಮರ್ಥ್ಯ ಕಂಡು ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ಪಕ್ಷಕ್ಕಾಗಿ ದುಡಿಯುವುದನ್ನು ನಾನು ಎಂದಿಗೂ ನಿಲ್ಲಿಸುವುದಿಲ್ಲ ಎಂದಿದ್ದಾರೆ.

 

Comments are closed.