(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಲೋಕಕಲ್ಯಾಣಾರ್ಥವಾಗಿ ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿಯವರು ಕೊಲ್ಲೂರಿನಲ್ಲಿ ನಾಲ್ಕು ದಿನಗಳ ಕಾಲ ಕೊಲ್ಲೂರು ದೇವಳದ ಮೂರ್ತಿದಾರಕ ಮೂರ್ತಿ ಕಾಳಿದಾಸ ಭಟ್ ಅವರ ನಿವಾಸದಲ್ಲಿ ಚಂಡಿಕಾ ಪಾರಾಯಣ ಹಾಗೂ ಶತ ಚಂಡಿಕಾ ಯಾಗ ನಡೆಸಿದ್ದು ಋತ್ವಿಜರ ಮಂತ್ರ ಪಟಣದೊಂದಿಗೆ ಹೋಮಕುಂಡಕ್ಕೆ ವಿವಿಧ ಹವಿಸ್ಸುಗಳನ್ನು ಅರ್ಪಿಸುವ ಮೂಲಕ ಶುಕ್ರವಾರ ಮಧ್ಯಾಹ್ನ 11.45 ಕ್ಕೆ ಪೂರ್ಣಾಹುತಿ ನೀಡಲಾಯಿತು.
ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿಯವರ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥವಾಗಿ ನಡೆದ ಯಾಗಕ್ಕೆ ಬೈಂದೂರು ಕ್ಷೇತ್ರ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಬಂದ ಗಣ್ಯರು ಹಾಗೂ ಭಕ್ತರು ಸಾಕ್ಷಿಯಾದರು.
ರಾಜ್ಯದ ಕನ್ನಡ ಮತ್ತು ಸಂಸ್ಕೃತಿ, ಇಂಧನ ಇಲಾಖೆ ಸಚಿವ ವಿ. ಸುನೀಲ್ ಕುಮಾರ್, ರಾಜ್ಯಸಭಾ ಸದಸ್ಯ ಹಾಗೂ ನಟ ಜಗ್ಗೇಶ್, ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಗೋಪಾಲಕೃಷ್ಣ ನಾಡ, ಡಾ. ಅತುಲ್ ಕುಮಾರ್ ಶೆಟ್ಟಿ, ರತ್ನಾ ರಮೇಶ್ ಕುಂದರ್, ಬೈಂದೂರು ಬಿಜೆಪಿ ಮಂಡಲಾಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಹಿಂದೂ ಸಂಘಟನೆ ಪ್ರಮುಖರಾದ ಟಿ. ಶಂಭು ಶೆಟ್ಟಿ, ಪ್ರೇಮಾನಂದ ಶೆಟ್ಟಿ ಕಟ್ಕೆರೆ, ಬಿಜೆಪಿ ಮುಖಂಡರಾದ ರೋಹಿತ್ ಕುಮಾರ್ ಶೆಟ್ಟಿ, ಶರತ್ ಕುಮಾರ್ ಶೆಟ್ಟಿ ಉಪ್ಪುಂದ, ರೋಹಿತ್ ಕುಮಾರ್ ಶೆಟ್ಟಿ, ಇಂದಿರಾ ಶೆಟ್ಟಿ ಆಲೂರು, ಮಂಜು ಬಿಲ್ಲವ, ಸಾಮ್ರಾಟ್ ಶೆಟ್ಟಿ, ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ. ಮೊದಲಾದವರು ಇದ್ದರು.
ಚಂಡಿಕಾ ಯಾಗ ಕ್ಷೇತ್ರದಲ್ಲಿ ನಡೆಯುವ ದೊಡ್ಡ ಸೇವೆಯಾಗಿದೆ. ನಾಡಿಗೆ ಹಾಗೂ ರಾಷ್ಟ್ರಕ್ಕೆ ಸುಭೀಕ್ಷವಾಗಲಿ ಎನ್ನುವ ನಿಟ್ಟಿನಲ್ಲಿ ಸಂಕಲ್ಪದೊಂದಿಗೆ ನಡೆಸಲಾಗಿದೆ. ಈ ಹಿಂದೆಯೂ ಹೇಳಿದಂತೆ ಯಾವುದೇ ಅಧಿಕಾರಕ್ಕಿಂತಲೂ ತಾಯಿ ಮೂಕಾಂಬಿಕೆ ಸನ್ನಿಧಿಯಲ್ಲಿ ಮಾಡುವ ಸೇವೆ ಪರಮಾಧಿಕಾರ ಎನ್ನುವ ಸಂತೃಪ್ತಿ ಇದೆ ಎಂದು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಹೇಳಿದ್ದಾರೆ.
Comments are closed.