ಕರಾವಳಿ

ಕುಂದಾಪುರದ ನೇರಳಕಟ್ಟೆಯಲ್ಲಿ ಪತ್ತೆಯಾದ ಎರಡು ವಾಮನ ಮುದ್ರೆ ಕಲ್ಲುಗಳು

Pinterest LinkedIn Tumblr

ಕುಂದಾಪುರ: ತಾಲೂಕಿನ ಕರ್ಕುಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನೇರಳಕಟ್ಟೆ ಅರಳಿಕಟ್ಟೆಯ ಬಾವಿಕಟ್ಟೆಯ ಬಳಿ ಹಾಗೂ ನೇರಳಕಟ್ಟೆಯ ಜಾಡ್ಕಟ್ಟು ರಾಮ ಮೊಗವೀರ ಇವರ ಮನೆಯ ಬಳಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಸಮಿಪದಲ್ಲಿ ವಾಮನ ಮುದ್ರಿಕೆಯ ಕಲ್ಲು ಪತ್ತೆಯಾಗಿದೆ.

ಶೈವರು, ವೈಷ್ಣವರು, ಜೈನರ ಆರಾಧನೆಗೆ ಸಂಬಂಧಿಸಿದ ಹಾಗೂ ಅವರ ಆರಾಧನೆಗೆ ಗಡಿಗಳನ್ನು ಗುರುತಿಸುವುದು ಸಹಜ. ಶೈವರ ಗಡಿಗಳಿಗೆ ಲಿಂಗ ಮುದ್ರಿಕೆ ಕಲ್ಲು ಅಥವಾ ಶೈವ ಮುದ್ರಿಕೆ ಕಲ್ಲು, ವೈಷ್ಣವರ ಗಡಿಗಳಿಗೆ ವಾಮನ ಮುದ್ರಿಕೆ ಕಲ್ಲು, ಜೈನರ ಗಡಿಗಳಿಗೆ ಮುಕ್ಕೋಡೆ ಕಲ್ಲುಗಳನ್ನು ಹಾಕುತ್ತಿದ್ದರು. ಈ ಮೂಲಕ ಬಹಳ ಸ್ಪಷ್ಟವಾಗಿ ಅವರವರ ಗಡಿಗಳನ್ನು ಗುರುತಿಸಲು ಸಾಧ್ಯವಾಗುತ್ತಿತ್ತು ಎನ್ನಲಾಗಿದೆ.

ನೇರಳಕಟ್ಟೆಯ ಎರಡು ವಾಮನ ಮುದ್ರಿಕೆಯ ಕಲ್ಲುಗಳಲ್ಲಿ ಸೂರ್ಯ ಚಂದ್ರ ಇರುವ ತನಕ ಅಜರಾಮರವಾಗಿರಲಿ ಎಂದು ಸಂದೇಶ ಸಾರುವಂತಹ‌ ಸೂರ್ಯ ಹಾಗೂ ಚಂದ್ರ ಶಿಲ್ಪ ಕಲೆಯೊಂದಿಗೆ ವ್ಯಕ್ತಿ ಅಂದರೆ ವಾಮನ ಅವರ ಒಂದು ಕೈಯಲ್ಲಿ ಕೊಡೆ ಇನ್ನೊಂದು ಕೈಯಲ್ಲಿ ಕಮಂಡಲವಿದ್ದು ಇದು ವಾಮನ ಶಿಲ್ಪ ಕಲೆಯಲ್ಲಿ ಸಹಜವಾಗಿ ಕಂಡುಬರುತ್ತದೆ.

ಅಂತೆಯೇ ವಾಮನ ಮುದ್ರಿಕೆಯ ಕಲ್ಲಿನ ಅಣತಿ ದೂರದಲ್ಲಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನವಿದೆ. ಈ ವಾಮನ ಮುದ್ರಿಕೆ ಕಲ್ಲು ಶ್ರೀ ಲಕ್ಷ್ಮೀ ವೆಂಕಟರಮಣ ದೇಗುಲದ ಇತಿಹಾಸದ ಮೇಲೆ ಬೆಳಕು ಚೆಲ್ಲುವಂತಿದೆ.

ಈ ಹಿಂದೆ ನೇರಳಕಟ್ಟೆಯ ಬಾವಿ ಕಟ್ಟೆ‌ ಬಳಿ, ಕಂದಾವರದ ಶ್ರೀ ವೀರಾಂಜನೇಯ ದೇವಾಲಯದ ಬಳಿ, ನಂದ್ರೋಳ್ಳಿ ಶ್ರೀ ಲಕ್ಷ್ಮೀನಾರಾಯಣ ದೇವಾಲಯದ ಬಳಿ ವಾಮನ ಮುದ್ರಿಕೆ ಕಲ್ಲು ಕಂಡು ಬಂದಿತ್ತು.

ಈ ವಾಮನ ಮುದ್ರಿಕೆ ಕಲ್ಲುಗಳನ್ನು ಭಾರತೀಯ ಇತಿಹಾಸ ಸಂಕಲನ ಸಮಿತಿ ಕರ್ನಾಟಕದ ಉಡುಪಿ ಜಿಲ್ಲೆಯ ಜಿಲ್ಲಾ ಸಂಚಾಲಕ ಪ್ರದೀಪ ಕುಮಾರ್ ಬಸ್ರೂರು ಹಾಗೂ ಸಂತೋಷ್ ನೇರಳಕಟ್ಟೆ ಇವರು ಪತ್ತೆ ಹಚ್ಚಿದ್ದು ಇವರಿಗೆ ಕರ್ಕುಂಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸಂತೋಷ್ ಪೂಜಾರಿ, ಸುಕುಮಾರ್ ನೇರಳಕಟ್ಟೆ, ಜಯರಾಮ ನೇರಳಕಟ್ಟೆ, ಗಿರಿ ಪೂಜಾರಿ ನೇರಳಕಟ್ಟೆ ಸಹಕರಿಸಿದ್ದರು.

Comments are closed.