ಉಡುಪಿ: ಕಳೆದ ಮೂರು ವರ್ಷಗಳ ಹಿಂದೆ ಮಣಿಪಾಲ ಪೊಲೀಸ್ ಠಾಣೆ ವ್ಯಾಪ್ತಿಯ ಮೂಡುಸಗ್ರಿ ರೈಲ್ವೆ ಹಳಿಯ ಸಮೀಪದ ಹಾಡಿಯಲ್ಲಿ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಎಸಗಿ ಕೊಲೆಗೈದ ಪ್ರಕರಣದ ಆರೋಪಿಯನ್ನು ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದಲ್ಲಿನ ಪೋಕ್ಸ್ ತ್ವರಿತ ವಿಶೇಷ ನ್ಯಾಯಾಲಯವು ದೋಷಿ ಎಂಬುದಾಗಿ ತೀರ್ಪು ನೀಡಿದ್ದು, ಶಿಕ್ಷೆಯ ಪ್ರಮಾಣವನ್ನು ಸೆ.6ರಂದು (ಇಂದು) ಪ್ರಕಟಿಸುವುದಾಗಿ ಆದೇಶ ನೀಡಿದೆ.
ಮೂಲತಃ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಹಾಗೂ ಪ್ರಸ್ತುತ ಕಾಪು ಮಲ್ಲಾರು ನಿವಾಸಿ ಹನುಮಂತ ಬಸಪ್ಪಕಂಬಳಿ (42) ಅಪರಾಧಿ.
ಉಡುಪಿಯ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ 17 ವರ್ಷ ಪ್ರಾಯದ ಬಾಲಕಿ 2019ರ ಮಾ.6ರಂದು ಮನೆಗೆ ತೆರಳುತ್ತಿದ್ದ ವೇಳೆ ಆರೋಪಿ ಹನುಮಂತ ಅಪಹರಿಸಿ, ಅತ್ಯಾಚಾರ ಎಸಗಿ ಬಳಿಕ ಕೊಲೆ ಮಾಡಿದ್ದನು. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಆಗಿನ ಮಣಿಪಾಲ ಪೊಲೀಸ್ ನಿರೀಕ್ಷಕ ಸುನೀಲ್ ಕುಮಾರ್ ತನಿಖೆ ನಡೆಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿಯ ದೃಶ್ಯಾವಳಿಯಲ್ಲಿನ ಆಧಾರದ ಮೇರೆಗೆ ಆರೋಪಿಯನ್ನು ಮಾ.30ರಂದು ಬಂಧಿಸಲಾಗಿತ್ತು. ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾದ ಆರೋಪಿಯನ್ನು ಹಿರಿಯಡ್ಕ ಜೈಲಿಗೆ ಕರೆದುಕೊಂಡು ಹೋಗುವಾಗ ಜೀಪಿನಿಂದ ಹಾರಿ ತಪ್ಪಿಸಿಕೊಂಡು ಓಡಿ ಹೋಗಿದ್ದನು. ಈ ಬಗ್ಗೆ ಆರೋಪಿ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಾಗಿತ್ತು. ನಂತರ ಆರೋಪಿಯನ್ನು ಬಂಧಿಸಿ ಮತ್ತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ತನಿಖೆ ಪೂರೈಸಿದ ತನಿಖಾಧಿಕಾರಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ಒಟ್ಟು 59 ಸಾಕ್ಷಿದಾರರ ಪೈಕಿ 29 ಸಾಕ್ಷಿಗಳನ್ನು ಪ್ರಾಸಿಕ್ಯೂಷನ್ ಪರವಾಗಿ ವಿಚಾರಣೆಯನ್ನು ಮಾಡಲಾಗಿತ್ತು. ಮುಖ್ಯವಾಗಿ ಸಾಂಧರ್ಭಿಕ ಸಾಕ್ಷ್ಯ ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಮತ್ತು ಸ್ಥಳೀಯ ಸಾಕ್ಷಿಗಳ ಆಧಾರದಂತೆ ಮತ್ತು ವೈದ್ಯಾಧಿಕಾರಿಗಳ ಸಾಕ್ಷ್ಯಗಳನ್ನು ಪರಿಗಣಿಸಿ ಆರೋಪಿ ಮೇಲಿನ ಆರೋಪಗಳು ಸಾಬೀತಾಗಿದೆ ಎಂದು ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಅವರು ಆರೋಪಿಯನ್ನು ದೋಷಿ ಎಂಬುದಾಗಿ ಆದೇಶಿಸಿದರು. ಶಿಕ್ಷೆಯ ಪ್ರಮಾಣವನ್ನು ಇಂದು ಪ್ರಕಟಿಸುವುದಾಗಿ ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ.
ಪ್ರಾಸಿಕ್ಯೂಶನ್ ಪರವಾಗಿ ಉಡುಪಿ ಪೋಕ್ಸೋ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ. ರಾಘವೇಂದ್ರ ವಾದಿಸಿದ್ದರು.
Comments are closed.