(ವರದಿ- ಯೋಗೀಶ್ ಕುಂಭಾಸಿ)
ಉಡುಪಿ: ಉಡುಪಿಯಲ್ಲಿ ಕೆಲಸ ಮಾಡುತ್ತಿದ್ದ 17 ವರ್ಷದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರವೆಸಗಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದಲ್ಲಿನ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀನಿವಾಸ ಸುವರ್ಣ ಅವರು ಆರೋಪಿಯನ್ನು ದೋಷಿಯೆಂದು ಸೋಮವಾರ ತೀರ್ಪು ನೀಡಿದ್ದರು. ಈ ಅಪರಾಧಿಗೆ ಸೆ.6ರಂದು (ಇಂದು) ಜೀವಿತಾವಾಧಿ ಕಾರಾಗೃಹ ಶಿಕ್ಷೆ ಸಹಿತ ಇತರೆ ಪ್ರಕರಣಗಳಿಗೂ ಶಿಕ್ಷೆ ಹಾಗೂ ದಂಡ ವಿಧಿಸಿ ಮಹತ್ವದ ಆದೇಶ ಪ್ರಕಟಿಸಿದೆ. 2019ರ ಮಾ.6 ರಂದು ಆಕೆ ಮನೆಗೆ ತೆರಳುತ್ತಿದ್ದ ವೇಳೆ ಅಪರಾಧಿ ಈ ಮೃಗೀಯ ಘಟನೆ ನಡೆಸಿದ್ದು ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಮೂಲದ ಪ್ರಸ್ತುತ ಕಾಪು ಮಲ್ಲಾರು ನಿವಾಸಿ ಹನುಮಂತ ಬಸಪ್ಪಕಂಬಳಿ (42) ಅಪರಾಧಿಯಾಗಿದ್ದು ಆತನಿಗೆ ಐಪಿಸಿ ಕಲಂ 302 (ಕೊಲೆ) ಅಡಿಯಲ್ಲಿ ಜೀವಿತಾವಧಿ (ಕೊನೆಯ ಉಸಿರಿರುವ ತನಕ) ಜೈಲು ಶಿಕ್ಷೆ 15 ಸಾವಿರ ದಂಡ, ಪೋಕ್ಸೋ ಕಾಯ್ದೆಯಡಿ ಬರುವ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ 20 ವರ್ಷ ಜೈಲು 10 ಸಾವಿರ ದಂಡ, ಅಪ್ರಾಪ್ತ ಬಾಲಕಿಯನ್ನು ಅಪಹರಿಸಿದ ಬಗ್ಗೆ 10 ವರ್ಷ ಜೈಲು 5 ಸಾವಿರ ದಂಡ, ಸಾಕ್ಷ್ಯನಾಶದಡಿ 7 ವರ್ಷ ಜೈಲು 2 ಸಾವಿರ ದಂಡ ವಿಧಿಸಿದ್ದು ದಂಡ ಪಾವತಿ ಮಾಡಲು ತಪ್ಪಿದಲ್ಲಿ 1 ವರ್ಷ ಕಠಿಣ ಸಜೆ ವಿಧಿಸಿದೆ.
ದಂಡದ 32 ಸಾವಿರ ಮೊತ್ತದಲ್ಲಿ 7 ಸಾವಿರ ಸರ್ಕಾರಕ್ಕೆ, 25 ಸಾವಿರ ಮೊತ್ತ ಮೃತ ಬಾಲಕಿ ಕುಟುಂಬಕ್ಕೆ ಹಾಗೂ ಸರ್ಕಾರದಿಂದ ಬಾಲಕಿ ಪೋಷಕರಿಗೆ 4 ಲಕ್ಷ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
ಅಭಿಯೋಜನೆಗೆ ಪೂರಕ ಸಾಕ್ಷ್ಯಗಳು..
ದಂಪತಿಗಳು ಕಟ್ಟಿಗೆ ಸಂಗ್ರಹಕ್ಕೆ ತೆರಳಿದ ವೇಳೆ ಕೊಲೆಯಾದ ಸ್ಥಿತಿಯಲ್ಲಿ ಬಾಲಕಿ ಶವ ಕಂಡು ಬಂದಿತ್ತು. ಈ ಬಗ್ಗೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಲ್ಲದೆ ದೂರು ದಾಖಲು ಮಾಡಿದ್ದರು. ಆರೋಪಿ ಹಾಗೂ ಮೃತ ಬಾಲಕಿ ಘಟನೆಗೂ ಮೊದಲು ಒಟ್ಟಿಗೆ ತೆರಳಿದ್ದನ್ನು ರಿಕ್ಷಾ ಚಾಲಕರೊಬ್ಬರು ನೋಡಿದ್ದರು. ಅಂಗಡಿಗಳ ಮಾಲಿಕರು ತಮ್ಮ ಅಂಗಡಿಗೆ ಅಳವಡಿಸಿದ್ದ ಸಿಸಿ ಟಿವಿ ದೃಶ್ಯಾವಳಿಗಳನ್ನು ತನಿಖಾಧಿಕಾರಿಗೆ ನೀಡಿ ಸಹಕಾರ ನೀಡಿದ್ದರು. ಪ್ರಕರಣದ ಬಗ್ಗೆ ಅಂದಿನ ಮಣಿಪಾಲ ಪೊಲೀಸ್ ನಿರೀಕ್ಷಕ ಸುನೀಲ್ ಕುಮಾರ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಒಟ್ಟು 59 ಸಾಕ್ಷಿದಾರರ ಪೈಕಿ 30 ಸಾಕ್ಷಿಗಳನ್ನು ಪ್ರಾಸಿಕ್ಯೂಷನ್ ಪರವಾಗಿ ವಿಚಾರಣೆಯನ್ನು ಮಾಡಲಾಗಿತ್ತು. ಮುಖ್ಯವಾಗಿ ಸಾಂದರ್ಭಿಕ ಸಾಕ್ಷ್ಯ ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಮತ್ತು ಸ್ಥಳೀಯ ಸಾಕ್ಷಿಗಳ ಆಧಾರದಂತೆ ಮತ್ತು ವೈದ್ಯಾಧಿಕಾರಿಗಳ ಸಾಕ್ಷ್ಯಗಳು ಅಭಿಯೋಜನೆಗೆ ಪೂರಕವಾಗಿದ್ದು ಇದನ್ನು ಪರಿಗಣಿಸಿ ಆರೋಪಿ ಮೇಲಿನ ದೋಷಾರೋಪಗಳು ಸಾಬೀತಾಗಿದೆ. ಬಹುತೇಕ ಎಲ್ಲಾ ಸಾಕ್ಷಿದಾರರು ಸ್ವಯಂಪ್ರೇರಿತರಾಗಿ ಆಗಮಿಸಿ ನ್ಯಾಯಾಲಯದಲ್ಲಿ ಸಾಕ್ಷಿ ನುಡಿದಿದ್ದು ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ ಈ ಪ್ರಕರಣದಲ್ಲಿ ಅಪರಾಧಿಗೆ ಶಿಕ್ಷೆಯಾಗುವಂತೆ ಮಾಡಲು ಪ್ರಾಸಿಕ್ಯೂಶನ್ ಗೆ ಸಹಕಾರಿಯಾಗಿತ್ತು.
ಪ್ರಾಸಿಕ್ಯೂಶನ್ ಪರವಾಗಿ ಉಡುಪಿ ಪೋಕ್ಸೋ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ. ರಾಘವೇಂದ್ರ ವಾದಿಸಿದ್ದರು.
Comments are closed.