ಮಂಗಳೂರು, ಸೆ. 23 : ಹೆಣ್ಣೊಬ್ಬಳು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಸತ್ಯವನ್ನು ಮನಗಂಡಿದ್ದ ಬಂಟರ ಯಾನೆ ನಾಡವರ ಮಾತೃ ಸಂಘವು ಮಂಗಳೂರಿನ ಹೃದಯ ಭಾಗದಲ್ಲಿರುವ ಲಾಲ್ ಬಾಗ್ ನಲ್ಲಿ ಸುಸಜ್ಜಿತ ಕಟ್ಟಡವನ್ನು ನಿರ್ಮಿಸಿ 1948ರಲ್ಲಿ ಸರ್ವ ಸೌಲಭ್ಯಗಳಿರುವ ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ಭವನವನ್ನು ಪ್ರಾರಂಭಿಸುವ ಮೂಲಕ ಸ್ತ್ರಿ ಶಿಕ್ಷಣಕ್ಕೆ ತನ್ನ ಕೊಡುಗೆಯನ್ನು ನೀಡಿತು.
ಗ್ರಾಮೀಣ ಭಾಗದ ಬಂಟ ಸಮಾಜದ ಹೆಣ್ಣು ಮಕ್ಕಳು ವಿಧ್ಯಾಭ್ಯಾಸದ ಅವಕಾಶದಿಂದ ವಂಚಿತರಾಗಬಾರದೆಂದು ಉದಾತ್ತ ಚಿಂತನೆಯಿಂದ ಸ್ತ್ರಿ ಸ್ವಾವಲಂಬನೆಯ ಸ್ತ್ರಿ ಸಬಲೀಕರಣದ ಸ್ವರೂಪವಾಗಿ ಪ್ರಾರಂಭಿಸಿದ ಜಿಲ್ಲೆಯ ಪ್ರಥಮ ವಿದ್ಯಾರ್ಥಿನಿ ಭವನವು ಇದೀಗ ಅಮೃತೋತ್ಸವವನ್ನು ಆಚರಿಸುತ್ತಿದೆ ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರಾದ ಮಾಲಾಡಿ ಅಜಿತ್ ಕುಮಾರ್ ರೈ, ಕೊಡಿಯಾಲ್ ಗುತ್ತು ಇವರು ತಿಳಿಸಿದರು.
ನಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ವಿವರ ನೀಡಿದ ಅವರು, ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ಭವನವು ಮುಂದಿನ ದಿನಗಳಲ್ಲಿ ಕೇವಲ ಬಂಟ ಸಮುದಾಯಕ್ಕೆ ಸೀಮಿತವಾಗದೆ ಸಮಾಜದ ಎಲ್ಲ ವರ್ಗದ ಜಾತಿಯ ವಿದ್ಯಾರ್ಥಿನಿಯರು ಮತ್ತು ಮಹಿಳೆಯರು ಸ್ವಾವಲಂಭಿ ಸ್ವಾಭಿಮಾನದ ಬದುಕಿಗೆ ನಾಂದಿಯಾಯಿತು. ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಕಲಿಕೆಗೆ, ಉದ್ಯೋಗಕ್ಕೆ ಅವಕಾಶವಿಲ್ಲದಾಗ ಊಟ, ವಸತಿ ಸೌಕರ್ಯವನ್ನು ಒದಗಿಸಿ ಅವರ ಕನಸುಗಳಿಗೆ ಬಣ್ಣ ತುಂಬಿ ಸ್ವಾವಲಂಬಿ ಬದುಕಿಗೆ ದಿಕ್ಸೂಚಿಯಾಯಿತು ಎಂದರು.
ಇದೀಗ ಸಾರ್ಥಕ 75 ವರ್ಷಗಳನ್ನು ಪೂರೈಸಿರುವ ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ಭವನದ ಅಮೃತ ಮಹೋತ್ಸವ ಆಚರಣೆಯು ಸೆಪ್ಟಂಬರ್ 24ರಂದು ಬೆಳಿಗ್ಗೆ 10ಗಂಟೆಗೆ ನಗರದ ಬಂಟ್ಸ್ ಹಾಸ್ಟೆಲ್ ಆವರಣದಲ್ಲಿ ನಡೆಯಲಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಧರ್ಶಿಗಳು ಹಾಗೂ ರಾಜ್ಯ ಸಭಾ ಸದಸ್ಯರೂ ಅಗಿರುವ ಪದ್ಮವಿಭೂಷಣ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಈ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು ಎಂದು ಅಜಿತ್ ಕುಮಾರ್ ರೈ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಶಾಲಿನಿ ರಜನೀಶ್, ಶ್ರೀಮತಿ ತೇಜಸ್ವಿನಿ ಅನಂತ ಕುಮಾರ್, ಶ್ರೀ ಸದಾಶಿವ ಶೆಟ್ಟಿ ಕನ್ಯಾನ, ಶ್ರೀಮತಿ ಸುಜಾತ ಎಸ್. ಶೆಟ್ಟಿ, ಡಾ. ಪದ್ಮಶ್ರೀ ಆರ್. ಶೆಟ್ಟಿ, ಶ್ರೀ ಉಪೇಂದ್ರ ಶೆಟ್ಟಿ, ಶ್ರೀಮತಿ ಪ್ರಗತಿ ಯು. ಶೆಟ್ಟಿ ಮುಂತಾದ ಗಣ್ಯರು ಅತಿಥಿಗಳಾಗಿ ಪಾಲ್ಗೋಳ್ಳಲಿರುವರು.
ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ, ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ಭವನಕ್ಕೆ ಅನನ್ಯ ಸೇವೆ ಸಲ್ಲಿಸಿದವರಿಗೆ ಗೌರವ ಸಮರ್ಪಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಅಜಿತ್ ರೈಯವರು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಪ್ರಧಾನ ಕಾರ್ಯದರ್ಶಿ ಗೋಪಲಕೃಷ್ಣ ಶೆಟ್ಟಿ, ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ಭವನದ ಸಂಚಾಲಕಿ ಶ್ರೀಮತಿ ಶಾಲಿನಿ ಶೆಟ್ಟಿ, ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ಭವನ ಅಮೃತೋತ್ಸವ ಸಮಿತಿಯ ಅಧ್ಯಕ್ಷೆ ಶ್ರೀಮತಿ ವೀಣಾ ಟಿ. ಶೆಟ್ಟಿ ಹಾಗೂ ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ಭವನದ ಕಾರ್ಯದರ್ಶಿ ಶ್ರೀಮತಿ ಶಾರಿಕಾ ಭಂಡಾರಿ ಉಪಸ್ಥಿತರಿದ್ದರು.
Comments are closed.