ಕರ್ನಾಟಕ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ

Pinterest LinkedIn Tumblr

ಮೈಸೂರು: ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಆಯೋಜಿಸಿದ್ದ ವರ್ಣರಂಜಿತ ಸಮಾರಂಭದಲ್ಲಿ ನಾಡಿನ ಅಧಿದೇವತೆ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಪುಷ್ಪಾರ್ಚನೆಗೈದು ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದರು. ದಸರಾ ಉದ್ಘಾಟನೆಗಾಗಿ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಾಷ್ಟ್ರಪತಿಗಳನ್ನು ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯಪಾಲರು ಸ್ವಾಗತಿಸಿದರು.

ಬಳಿಕ ಅಲ್ಲಿಂದ ನೇರವಾಗಿ ಚಾಮುಂಡಿ ಬೆಟ್ಟ ನಾಡ ಅಧಿದೇವತೆಯ ದರ್ಶನ ಪಡೆದ್ರು. ನಂತರ ಉದ್ಘಾಟನಾ ಕಾರ್ಯಕ್ರಮಕ್ಕೆ ತೆರಳಿದ್ರು. ಬೆಳ್ಳಿ ಪಲ್ಲಕ್ಕಿಯಲ್ಲಿ ಪವಡಿಸಿರುವ ನಾಡ ಅಧಿದೇವತೆ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆಆರತಿ ಬೆಳಗಿ, ಪುಷ್ಪಾರ್ಚನೆಗೈದು ನಮಿಸಿ, ದೀಪ ಬೆಳಗುವ ಮೂಲಕ ವಿದ್ಯುಕ್ತ ಚಾಲನೆ ನೀಡಿದರು. ಬೆಳಿಗ್ಗೆ 9.45 ರಿಂದ‌10.05ರ ವೃಶ್ಚಿಕ ಲಗ್ನದಲ್ಲಿ ಸಾಂಪ್ರದಾಯಿಕ, ವೈಭವಯುತವಾದ ದಸರಾ ಮಹೋತ್ಸವಕ್ಕೆ ಚಾಲನೆ ಸಿಕ್ಕಿತು.

ಚಾಮುಂಡಿಬೆಟ್ಟಕ್ಕೆ ಆಗಮಿಸುತ್ತಿದ್ದಂತೆಯೇ ಮೊದಲು ತಾಯಿ ಚಾಮುಂಡೇಶ್ವರಿಯ ದರ್ಶನಕ್ಕೆ ತೆರಳಿದ ರಾಷ್ಟ್ರಪತಿ ತಾಯಿಯ ದರ್ಶನ ಪಡೆದರು. ದೇವಸ್ಥಾನದ ಕುರಿತು ಮಾಹಿತಿ ಪಡೆದುಕೊಂಡರು. ಬಳಿಕ ಅವರು ವೇದಿಕೆಗೆ ಆಗಮಿಸುತ್ತಿದ್ದಂತೆಯೇ ಪೊಲೀಸ್ ಬ್ಯಾಂಡ್ ವತಿಯಿಂದ ರಾಷ್ಟ್ರಗೀತೆ ಮೊಳಗಿತು.

ದಸರಾ ಉದ್ಘಾಟನೆ ಬಳಿಕ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ಮೈಸೂರು ದಸರಾ ಭಾರತೀಯ ಸಂಸ್ಕೃತಿಯ ಪ್ರತೀಕ. ಮಹಿಳಾ ಪ್ರಾಧಿನ್ಯತೆಯೇ ದಸರೆಯ ವಿಶೇಷ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು.

ಕನ್ನಡದಲ್ಲೇ ಭಾಷಣ ಆರಂಭಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ಚಾಮುಂಡಿ ತಾಯಿಗೆ ನನ್ನ ಮನ ಪೂರ್ವಕ ನಮಸ್ಕಾರಗಳು, ಎಲ್ಲರಿಗೂ ನನ್ನ ಹೃದಯ ಪೂರ್ವಕ ನಮಸ್ಕಾರಗಳು ಎಂದರು. ಈ ವರ್ಷದ ದಸರಾ ಮಹೋತ್ಸವ ಉದ್ಘಾಟಿಸಿದ್ದು ಬಹಳ ಸಂತೋಷವಾಗಿದೆ. ನಾಡದೇವತೆ ಚಾಮುಂಡೇಶ್ವರಿ ಇದೇ ಸ್ಥಳದಲ್ಲಿ ಮಹಿಷಾಸುರನನ್ನು ಸಂಹಾರ ಮಾಡಿದ್ದಾಳೆ. ಎಲ್ಲರಿಗೂ ಚಾಮುಂಡೇಶ್ವರಿ ಆಶೀರ್ವಾದ ಸಿಗಲಿ ಎಂದು ಹೇಳಿದರು.

ದಸರಾ ಉದ್ಘಾಟನೆಗೆ ತನ್ನನ್ನು ಆಹ್ವಾನಿಸಿರುವುದು ಬಹಳ ಸಂತಸ ತಂದಿದೆ. ಕಲಬುರುಗಿ ಸೂಫಿಸಂತರ ನಾಡಾಗಿತ್ತು. ಈ ರಾಜ್ಯ ಬಸವಣ್ಣ, ಅಲ್ಲಮಪ್ರಭು ಹಲವು ಸಂತರ ನಾಡು. ಭಕ್ತಿ, ಸ್ವಾತಂತ್ರ್ಯಕ್ಕೆ ಕರ್ನಾಟಕ ಹೆಸರುವಾಸಿ. ಬಸವಣ್ಣ ಅಲ್ಲಮಪ್ರಭು ಆದರ್ಶ ವ್ಯಕ್ತಿಗಳಾಗಿದ್ದರು. ಅವರ ವಚನ ಜನತಂತ್ರ ವ್ಯವಸ್ಥೆಗೆ ಮಾದರಿಯಾಗಿದೆ. ದಸರಾ ಪರಂಪರೆ ಇಂದಿಗೂ ಮುಂದುವರೆಯುತ್ತಿರುವುದು ನಮ್ಮ ಹೆಮ್ಮೆ. ರಾಜ್ಯ ಸರ್ಕಾರದ ಪ್ರಯತ್ನದಿಂದ ಮತ್ತಷ್ಟು ವೈಭವೋಪೂರಿತವಾಗಿ ದಸರಾ ಆಚರಿಸಲಾಗುತ್ತಿದೆ. ರಾಣಿ ಅಬ್ಬಕ್ಕ, ಕಿತ್ತೂರು ರಾಣಿ ಚನ್ನಮ್ಮರಂತಹ ವೀರವನಿತೆಯರಿದ್ದಾರೆ. ಮೈಸೂರು ದಸರಾ ಭಾರತೀಯ ಸಂಸ್ಕೃತಿ ಪ್ರತೀಕ . ಮಹಿಳಾ ಪ್ರಾಧಿನ್ಯತೆಯೇ ದಸರಾ ವಿಶೇಷ. ಈ ಪರಂಪರೆಯಲ್ಲಿ ಭಾಗಿಯಾಗಲು ಅವಕಾಶ ನೀಡಿದ್ದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ದ್ರೌಪದಿ ಮುರ್ಮು ಅವರು ಹೇಳಿದರು.

ಬೆಳಗ್ಗೆ 9:45 ರಿಂದ 10:05ರೊಳಗಿನ ಶುಭ ವೃಶ್ಚಿಕ ಲಗ್ನದಲ್ಲಿ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆಗೈದು ದಸರೆಗೆ ಚಾಲನೆ ನೀಡಬೇಕಿತ್ತು‌. ಆದರೆ ಶುಭ ಮುಹೂರ್ತ ಮುಗಿದ 5 ನಿಮಿಷದ ಬಳಿಕ ಪುಷ್ಪಾರ್ಚನೆಗೈದ ಗಣ್ಯರು ನಂತ್ರ ದೇಗುಲಕ್ಕೆ ತೆರಳಿ ತಾಯಿಯ ದರ್ಶನ ಪಡೆದರು.

ಈ ವೇಳೆ ಮಾತನಾಡಿದ ಸಿಎಂ ಬೊಮ್ಮಾಯಿ, ಕನ್ನಡ ನಾಡನ್ನು ಎಲ್ಲಾ ರಂಗದಲ್ಲಿಯೂ ಸರ್ವ ಶ್ರೇಷ್ಠವಾಗಿಸಬೇಕು ಎಂದರು. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ರಂಗಗಳಲ್ಲಿ ಕಟ್ಟುವ ಕೆಲಸ ಮಾಡಬೇಕಿದೆ. ನಮ್ಮಲ್ಲಿರುವ ಬಡ ಜನರ ಬದುಕನ್ನು ಎತ್ತರಕ್ಕೆ ಕೊಂಡೊಯ್ಯಬೇಕಿದೆ. ಸರ್ವರಿಗೂ ಲೇಸನ್ನು ಬಯಸುವ ಕಲ್ಯಾಣದ ಚಿಂತನೆಯ ಅವಶ್ಯಕತೆ ಇದೆ. ಅಂಥ ಸದ್ಭುದ್ಧಿ ನೀಡಿ, ಕನ್ನಡ ನಾಡನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲಿ ಎಂದರು.

Comments are closed.