(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉದ್ಯಮಿ ಡಾ. ಗೋವಿಂದ ಬಾಬು ಪೂಜಾರಿ ಅವರು ನಿರ್ಮಿಸಿಕೊಡುತ್ತಿರುವ 9ನೇ ಮನೆ ‘ಶ್ರೀ ವರಲಕ್ಷ್ಮೀ ನಿಲಯ’ದ ಪ್ರವೇಶೋತ್ಸವ ಸೋಮವಾರ
ಬೈಂದೂರು ತಾಲೂಕಿನ ಗಂಗಾನಾಡು ನೀರೋಡಿಯಲ್ಲಿ ನಡೆಯಿತು.
ಬೆಳಗಾಂ ನಿಪ್ಪಾಣಿ ಸಧರ್ಮ ಓಂಶಕ್ತಿ ಮಠದ ಪೀಠಾಧಿಪತಿ, ಮಹಾಕಾಳಿ ಮಹಾಸಂಸ್ಥಾಪಕರಾದ ಶ್ರೀ ಅರುಣಾನಂದ ತೀರ್ಥ ಸ್ವಾಮೀಜಿಯವರು ನೂತನ ಗೃಹದ ಪ್ರವೇಶೋತ್ಸವ ನೆರವೇರಿಸಿದರು.
ಬಳಿಕ ಆಶೀರ್ವಚನ ನೀಡಿದ ಅವರು, ಪುಣ್ಯದಿಂದ ಪಡೆದ ಮಾನವ ಜನ್ಮವನ್ನು ಸತ್ಕಾರ್ಯದ ಮೂಲಕ ಯಶಸ್ವಿಗೊಳಿಸಿಕೊಳ್ಳಬೇಕಿದೆ. ನಮ್ಮನ್ನು ದೇವಯಜ್ಞ, ಪಿತೃಯಜ್ಞ, ಋಷಿಯಜ್ಞ, ಭೂತಯಜ್ಞದ ಜೊತೆಗೆ ನಾವು ಸಮಾಜಕ್ಕೇನು ಕೊಟ್ಟಿದ್ದೇವೆ ಎನ್ನುವ ಕಲ್ಪನೆಯ ಸ್ವಯಜ್ಞಗಳಂತಹ ಪಂಚಯಜ್ಞಗಳನ್ನು ಮಾನವನು ಜೀವಿತಾವಧಿಯಲ್ಲಿ ಮಾಡುವುದು ಅಗತ್ಯ. ಪರೋಪಕಾರದ ಚಿಂತನೆಯಲ್ಲಿ ತನ್ನ ಸಂಪಾದನೆಯಲ್ಲಿ ದೀನ, ದಲಿತರು, ಬಡವರ ಉದ್ದಾರಕ್ಕಾಗಿ ವಿನಿಯೋಗಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವದಡಿಯಲ್ಲಿ ಇವರು ಮಾಡುತ್ತಿರುವ ಕೆಲಸ ಎಲ್ಲರಿಗೂ ಮಾದರಿಯಾಗಿದ್ದು ಇವರಿಗೆ ಇನ್ನಷ್ಟು ಬಲ ನೀಡುವ ಕೆಲಸವನ್ನು ಈ ಭಾಗದ ಜನರು ಮಾಡಬೇಕು ಎಂದರು.
ಟ್ರಸ್ಟ್ ವತಿಯಿಂದ ಕಟ್ಟಿಸಿಕೊಡುತ್ತಿರುವ 9 ನೇ ಮನೆ ಇದಾಗಿದ್ದು ಫಲಾನುಭವಿ ಸೌಂತ್ಮನೆ ರಾಮ ಮರಾಠಿ ದಂಪತಿಗೆ ಗೃಹದ ಕೀಲಿಕೈಯನ್ನು ಹಸ್ತಾಂತರಿಸಿ ಮಾತನಾಡಿದ ಟ್ರಸ್ಟಿನ ಮ್ಯಾನೇಜಿಂಗ್ ಟ್ರಸ್ಟಿ ಡಾ. ಗೋವಿಂದ ಬಾಬು ಪೂಜಾರಿ, 5 ವರ್ಷಗಳಿಂದ ಈಮನೆ ಕೆಲಸ ಅರ್ಧಕ್ಕೆ ನಿಂತಿತ್ತು. ಮನೆಯ ಮಗನ ಅನಾರೋಗ್ಯ ವಿಚಾರದಲ್ಲಿ ಬಂದಾಗ ಸಮಸ್ಯೆ ಅರಿವಿಗೆ ಬಂದಿದ್ದು ಟ್ರಸ್ಟ್ ಮೂಲಕ ಸುಸಜ್ಜಿತ ಮನೆ ನಿರ್ಮಿಸಿಕೊಡುವ ಯೋಚನೆ ಮಾಡಿದ್ದು ಯಶಸ್ಸಾಗಿದೆ. ಕಷ್ಟವನ್ನು ಬಲ್ಲವರಿಗೆ ಮಾತ್ರ ಅದರ ಅರಿವಿರುತ್ತದೆ. ಹೀಗಾಗಿ ಟ್ರಸ್ಟ್ ಮೂಲಕ ನಿರಂತರವಾಗಿ ಸೇವಾ ಕಾರ್ಯಗಳನ್ನು ಮಾಡಲಾಗುತ್ತಿದೆ. ವಿದ್ಯಾಭ್ಯಾಸಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಈಗಾಗಾಲೇ 42 ವಿದ್ಯಾರ್ಥಿಗಳನ್ನು ದತ್ತು ಪಡೆಯಲಾಗಿದ್ದು ಈ ಮನೆಯ ವಿದ್ಯಾರ್ಥಿಯೋರ್ವಳನ್ನು ಆಕೆ ದ್ವಿತೀಯ ಪಿಯುಸಿ ಓದುವವರೆಗೆ ಶೈಕ್ಷಣಿಕವಾಗಿ ದತ್ತು ಪಡೆಯಲಾಗುತ್ತದೆ. ಮುಂದಿನ ದಿನಗಳಲ್ಲಿ ಟ್ರಸ್ಟ್ ವತಿಯಿಂದ ಶಾಲೆ ಹಾಗೂ ಗೋಶಾಲೆ ನಿರ್ಮಾಣ ಸಹಿತ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡುವ ಜೊತೆ ಬೈಂದೂರು ಭಾಗದಲ್ಲಿ ಉದ್ಯೋಗ ಸೃಷ್ಟಿಗೆ ಅಗತ್ಯವಾದ ಕಾರ್ಯಕ್ರಮ ಹಮ್ಮಿಕೊಳ್ಳುವ ಚಿಂತನೆಯಿದೆ ಎಂದರು.
ಆರ್ಎಸ್ಎಸ್ನ ಹಿರಿಯ ಸ್ವಯಂಸೇವಕ ಅಚ್ಚುತ್ ಕಲ್ಮಾಡಿ ಮಾತನಾಡಿ, ನವದುರ್ಗೆಯರ ಆರಾಧನೆಯ ಪ್ರಥಮ ದಿನದಂದು ಒಂಬತ್ತನೆಯ ಮನೆಯನ್ನು ಅರ್ಹರಿಗೆ ನೀಡುತ್ತಿರುವುದು ಮೆಚ್ಚುಗೆ ವಿಚಾರ. ಯಾವುದೇ ಅಧಿಕಾರವಿಲ್ಲದೆ ಇದ್ದಾಗಲೂ ಗೋವಿಂದ ಬಾಬು ಪೂಜಾರಿಯವರು ಮಾಡುತ್ತಿರುವ ಸಮಾಜಮುಖಿ ಕಾರ್ಯಕ್ಕೆ ಬಲ ಸಿಕ್ಕಾಗ ಇನ್ನಷ್ಟು ಜನಪರ ಕೆಲಸಗಳು ಬೈಂದೂರಿನಲ್ಲಿ ನಡೆಯುವ ವಿಶ್ವಾಸವಿದೆ ಎಂದರು.
ಈ ಸಂದರ್ಭ ಯೋಗಿ ರಾಜನಾರಾಯಣವಿಠಲ ಕೋಣ್ಕಿ ಸ್ವಾಮೀಜಿ, ಛತ್ರಪತಿ ಶಿವಾಜಿ ಯುವಸೇನೆ ಅಧ್ಯಕ್ಷ ಮಹಾಲಿಂಗ ನಾಯ್ಕ, ಗಂಗನಾಡು ವನಕೊಡ್ಲು ಶ್ರೀಮಹಾಲಿಂಗೇಶ್ವರ ದೇವಳದ ಅನುವಂಶಿಕ ಧರ್ಮದರ್ಶಿ ಡಾ. ರಾಜಮೋಹನ್ ಶೆಟ್ಟಿ, ನೀರೋಡಿ ಗುರಿಕಾರ ನಾರಾಯಣ ಮರಾಠಿ ಇದ್ದರು.
ಛತ್ರಪತಿ ಶಿವಾಜಿ ಯುವಸೇನೆ ವತಿಯಿಂದ ಡಾ. ಗೋವಿಂದ ಪೂಜಾರಿ ಇವರನ್ನು ಸನ್ಮಾನಿಸಲಾಯಿತು. ಮನೆ ಕಾರ್ಯದಲ್ಲಿ ಮುಂಚೂಣಿಯಲ್ಲಿ ತೊಡಗಿಸಿಕೊಂಡ ಚೆನ್ನಯ್ಯ ಪೂಜಾರಿ, ವಿಷ್ಣು ಮೇಸ್ತ್ರಿ ಅವರನ್ನು ಗೌರವಿಸಲಾಯಿತು.
ನಾಗರಾಜ ಯಡ್ತರೆ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.
Comments are closed.