(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಉಡುಪಿಯ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಅವರು ಮಂಗಳವಾರ ಕೊಲ್ಲೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದರು.
ವಿಚಾರಣಾ ವಿಭಾಗ, ಔಷಧಾಲಯ, ಪ್ರಯೋಗಾಲಯ, ನೋಂದಣಿ ವಿಭಾಗ, ವಾರ್ಡ್ ಗಳು, ವಿದ್ಯುತ್, ಶೌಚಾಲಯ ವ್ಯವಸ್ಥೆ ಮೊದಲಾದವುಗಳನ್ನು ಖುದ್ದು ಪರಿಶೀಲಿಸಿದ ಅವರು ಆಸ್ಪತ್ರೆ ಕಟ್ಟಡ ಶಿಥೀಲಗೊಂಡಿರುವ ಬಗ್ಗೆ ಮಾಹಿತಿ ಪಡೆದುಕೊಂಡರು. ಆಸ್ಪತ್ರೆಗೆ ಸಿಸಿ ಕ್ಯಾಮೆರಾ ಅಳವಡಿಕೆ ಕುರಿತು ಗಮನಸೆಳೆದರು.
ಇದೇ ಸಂದರ್ಭ ನ್ಯಾಯಾಧೀಶರು ಆಸ್ಪತ್ರೆಯಲ್ಲಿದ್ದ ರೋಗಿಗಳ ಆರೋಗ್ಯ ವಿಚಾರಿಸಿದ್ದು ಬೇಡಿಕೆಗಳೇನಾದರು ಇದೆಯಾ ಎಂದು ಪ್ರಶ್ನಿಸಿದರು. ಕೊಲ್ಲೂರು ಪ್ರವಾಸಿ ಕೇಂದ್ರವಾಗಿದ್ದು 24 ಗಂಟೆ ಆಸ್ಪತ್ರೆಯಲ್ಲಿ ರೋಗಿಗಳಿಗೆ ವೈದ್ಯಕೀಯ ಸೇವೆ ಸಿಕ್ಕರೆ ಅನುಕೂಲ ಎಂದು ಮಹಿಳೆಯೊಬ್ಬರು ಅವಲತ್ತುಕೊಂಡರು.
ವೈದ್ಯಾಧಿಕಾರಿ ಡಾ. ಶೈಲೇಶ್ ರಾವ್, ಕೊಲ್ಲೂರು ಗ್ರಾ.ಪಂ ಅಧ್ಯಕ್ಷ ಶಿವರಾಮಕೃಷ್ಣ ಭಟ್, ಎನ್.ಆರ್.ಎಲ್. ಎಂ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಪ್ರಭಾಕರ್ ಆಚಾರ್ ಇದ್ದರು.
ಉಚ್ಚ ನ್ಯಾಯಾಲಯದ ನಿರ್ದೇಶನದಂತೆ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಲಾಗುತ್ತಿದೆ. ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿದಾಗ ಕೆಲವು ಸಮಸ್ಯೆಗಳು ಗಮನಕ್ಕೆ ಬಂದಿದೆ. ಆಸ್ಪತ್ರೆಯಲ್ಲಿ 24 ಗಂಟೆ ವೈದ್ಯಕೀಯ ಸೇವೆ ಬೇಕೆಂಬುದು ಹಾಗೂ ಅಂಬುಲೆನ್ಸ್ ಕೊರತೆ ಬಗ್ಗೆ ದೂರುಗಳು ಕೇಳಿಬಂದಿದೆ. ಅಲ್ಲದೆ ಸಿಬ್ಬಂದಿ ಕೊರತೆಯಿದ್ದು ಸುಸಜ್ಜಿತ ಕಟ್ಟಡದ ಅಗತ್ಯತೆಯೂ ಇದೆ. ಈ ಎಲ್ಲಾ ಸಮಸ್ಯೆಗಳ ಬಗ್ಗೆ ಉಚ್ಚ ನ್ಯಾಯಾಲಯದ ಗಮನಕ್ಕೆ ತಂದು ಸೂಕ್ತ ಕ್ರಮಕ್ಕಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ.
- ಶರ್ಮಿಳಾ (ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ
Comments are closed.