ಬೆಂಗಳೂರು: ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಯಾದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಅವರ ಪತ್ನಿ ನೂತನ ಕುಮಾರಿ ಅವರಿಗೆ ಗುತ್ತಿಗೆ ಆಧಾರದಲ್ಲಿ ಹಿರಿಯ ಸಹಾಯಕ ಹುದ್ದೆ ನೀಡಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.
ಇತ್ತೀಚಿಗೆ ದೊಡ್ಡಬಳ್ಳಾಪುರದಲ್ಲಿ ನಡೆದಿದ್ದ ಜನಸ್ಪಂದನ ಸಮಾವೇಶದಲ್ಲಿ ಪ್ರವೀಣ್ ನೆಟ್ಟಾರು ಕುಟುಂಬದ ಸದಸ್ಯರೊಬ್ಬರಿಗೆ ತಮ್ಮ ಕಚೇರಿಯಲ್ಲಿಯೇ ನೌಕರಿ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಣೆ ಮಾಡಿದ್ದು ಪ್ರವೀಣ್ ನೆಟ್ಟಾರು ಅವರ ಪತ್ನಿ ನೂತನ ಕುಮಾರಿ ಅವರಿಗೆ ಸಿ ಗ್ರೂಪ್ ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ನೇಮಿಸಿ ರಾಜ್ಯ ಸರ್ಕಾರ ಇಂದು ಅಧಿಕೃತ ಆದೇಶ ಹೊರಡಿಸಿದೆ.
ಈ ಹಿಂದೆ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಬಿಜೆಪಿ ಪಕ್ಷದಿಂದ 25 ಲಕ್ಷ ರೂಪಾಯಿ ಹಾಗೂ ಸರ್ಕಾರದಿಂದ 25 ಲಕ್ಷ ರೂ. ಪರಿಹಾರ ನೀಡಲಾಗಿತ್ತು. ಅಷ್ಟೇ ಅಲ್ಲದೇ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು 5 ಲಕ್ಷ ರೂ. ಪರಿಹಾರವನ್ನು ನೀಡಿದ್ದರು.
2022 ರ ಜು.26ರಂದು ದುಷ್ಕರ್ಮಿಗಳಿಂದ ಹತ್ಯೆಗೆ ಒಳಗಾದ ಪ್ರವೀಣ್ ನೆಟ್ಟಾರು ಪ್ರಕರಣವನ್ನು ರಾಜ್ಯ ಸರ್ಕಾರ ಎನ್ಐಎಗೆ ಶಿಫಾರಸು ಮಾಡಿತ್ತು. ಬಳಿಕ ಎನ್ಐಎ ಅಧಿಕಾರಿ ದ.ಕ. ಜಿಲ್ಲೆಗೆ ಆಗಮಿಸಿ ಪ್ರಾಥಮಿಕ ತನಿಖೆ ನಡೆಸಿದ್ದರು. ಈ ಹತ್ಯೆಗೆ ಸಂಬಂಧಿಸಿ ಈಗಾಗಲೇ 10ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದ್ದು, ಬೆಂಗಳೂರು ಜೈಲಿಗೆ ಸ್ಥಳಾಂತರಿಸಲಾಗಿದೆ.
Comments are closed.