ಕುಂದಾಪುರ: ಅಂತರಾಷ್ಟ್ರೀಯ ಕಿವುಡರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೆ ಪೂರ್ವಭಾವಿಯಾಗಿ ಯುಎಇನಲ್ಲಿ ಅ.2 ರಿಂದ ಐಸಿಸಿ ಕಿವುಡರ ಚಾಂಪಿಯನ್ಸ್ ಟ್ರೋಫಿ -2020 ಟಿ-20 ಪಂದ್ಯಾಕೂಟ ಆರಂಭಗೊಳ್ಳುತ್ತಿದೆ. ಭಾರತ ತಂಡದಲ್ಲಿ ಕುಂದಾಪುರ ಮೂಲದ ಪೃಥ್ವಿರಾಜ್ ಶೆಟ್ಟಿ ಹುಂಚನಿ ಸ್ಥಾನ ಪಡೆದಿದ್ದು, ಅಂತಿಮ 11ರ ಬಳಗದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.
ಈ ಮೊದಲು ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ವಿಶ್ವಕಪ್ ನಿಗದಿಪಡಿಸಲಾಗಿದ್ದು, ಆದರೆ ಈಗ ಅದನ್ನು ಮುಂದಿನ ಮಾರ್ಚ್ -ಮೇ ತಿಂಗಳಿಗೆ ಮುಂದೂಡಲಾಗಿದ್ದು, ಕತಾರ್ ಅಥವಾ ಆಸ್ಟ್ರೇಲಿಯಾದಲ್ಲಿ ಕಿವುಡರ ಐಸಿಸಿ ವಿಶ್ವಕಪ್ ಪಂದ್ಯಾಟ ನಡೆಯಲಿದೆ. ಅದಕ್ಕೂ ಮುಂಚಿತವಾಗಿ ಅಂದರೆ ಅ.1 ರಿಂದ ಅ.9 ರವರೆಗೆ ಚಾಂಪಿಯನ್ಸ್ ಟ್ರೋಫಿ ನಡೆಯುತ್ತಿದ್ದು, ಕುತೂಹಲ ಮೂಡಿಸಿದೆ. ಅ.2 ರಂದು ಭಾರತ ಪಾಕಿಸ್ಥಾನವನ್ನು ಎದುರಿಸಲಿದ್ದು, ಅ.4ಕ್ಕೆ ದ.ಆಫ್ರಿಕಾ, ಅ.5ಕ್ಕೆ ಬಾಂಗ್ಲಾದೇಶ ಹಾಗೂ ಅ.7 ರಂದು ಆಸ್ಟ್ರೇಲಿಯಾವನ್ನು ಎದುರಿಸಲಿದೆ.
ಭಾರತ ತಂಡದಲ್ಲಿ ಬೈಂದೂರು ತಾಲೂಕಿನ ಕೊಲ್ಲೂರು ಸಮೀಪದ ಗೋಳಿಹೊಳೆ ಗ್ರಾಮದ ಹುಂಚನಿಯ ದಿ| ಸುಭಾಶ್ಚಂದ್ರ ಶೆಟ್ಟಿ ಹಾಗೂ ಶೀಲಾವತಿ ದಂಪತಿಯ ಪುತ್ರ ಪೃಥ್ವಿರಾಜ್ ಸ್ಥಾನ ಪಡೆದಿದ್ದಾರೆ. ತಂಡದ ಪ್ರಧಾನ ವೇಗದ ಬೌಲರ್ ಆಗಿರುವ 31 ವರ್ಷ ಪ್ರಾಯದ ಪ್ರಥ್ವಿ ಕೆಳ ಕ್ರಮಾಂಕದ ಬ್ಯಾಟರ್ ಆಗಿದ್ದಾರೆ.
ದಿಲ್ಲಿಯಲ್ಲಿ ಒಂದು ತಿಂಗಳ ಕಾಲ ತರಬೇತಿ ಮುಗಿಸಿದ ಭಾರತ ತಂಡವು ಟ್ರೋಫಿ ಗೆಲ್ಲುವ ವಿಶ್ವಾಸದೊಂದಿಗೆ ಯುಎಇಗೆ ಪ್ರಯಾಣ ಬೆಳೆಸಿದೆ. ಈ 15 ಮಂದಿಯ ತಂಡದಲ್ಲಿ ಪೃಥ್ವಿರಾಜ್ ಅವರು ಸ್ಥಾನ ಪಡೆದಿರುವ ಏಕೈಕ ಕನ್ನಡಿಗರಾಗಿದ್ದಾರೆ.
ಗೋಳಿಹೊಳೆಯ ಪೃಥ್ವಿರಾಜ್ ಶೆಟ್ಟಿಯವರು ಹುಟ್ಟು ಕಿವುಡರಾಗಿದ್ದರೂ, ಈ ನ್ಯೂನತೆ ಮೆಟ್ಟಿನಿಂತು ಕ್ರಿಕೆಟ್‌ನಲ್ಲಿ ಸಾಧನೆ ಮಾಡಬೇಕು ಎಂಬ ಕನಸು ಹೊತ್ತಿದ್ದಾರೆ. ಇವರ ಎದೆಗಾರಿಕೆಗೆ ನ್ಯೂನ್ಯತೆ ಅಡ್ಡಿಯಾಗಿಲ್ಲ. ಇದೀಗಾ ದೇಶದ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿರುವುದು ಅಸಾಮಾನ್ಯ ಸಾಧನೆಯಾಗಿದ್ದು ಪ್ರಥ್ವಿರಾಜ್ ಅಂಪಾರು ಮೂಡುಬಗೆಯ ವಾಗ್ಜ್ಯೋತಿ ವಿಶೇಷ ಮಕ್ಕಳ ಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದಾರೆ. ವಿಶೇಷ ಕ್ರಿಕೆಟ್ ಟೂರ್ನಿಗಳಲ್ಲಿ ಮಾತ್ರವಲ್ಲದೆ ಎಲ್ಲರಂತೆ ಎಂಪಿಲ್‌ನಲ್ಲಿ ಐಕಾನ್ ಆಟಗಾರನಾಗಿ, ಕುಂದಾಪುರದ ಟಾರ್ಪಡೋಸ್ ತಂಡದ ಆಟಗಾರನಾಗಿಯೂ ಮಿಂಚಿದ್ದಾರೆ. ಚಕ್ರವರ್ತಿ ತಂಡದ ಅರೆಕಾಲಿಕ ತರಬೇತುದಾರರಾಗಿ ಕಾರ್‍ಯನಿರ್ವಹಿಸುತ್ತಿದ್ದಾರೆ. ಕರ್ನಾಟಕ ಮೂಗರ ಕ್ರಿಕೆಟ್ ತಂಡದ ಆಟಗಾರನಾಗಿ, ಕರ್ನಾಟಕ ತಂಡದ ನಾಯಕನಾಗಿದ್ದಾರೆ.
ವೇಗದ ಬೌಲರ್ ಹಾಗೂ ಕೆಳ ಕ್ರಮಾಂಕದ ಬ್ಯಾಟರ್ ಆಗಿರುವುದರಿಂದ ಪೃಥ್ವಿರಾಜ್ ಅಂತಿಮ 11 ರ ಬಳಗದಲ್ಲಿ ಸ್ಥಾನ ಪಡೆಯುವ ವಿಶ್ವಾಸ ಹೊಂದಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಆಗಿರುವುದರಿಂದ ಪಾಲ್ಗೊಳ್ಳುವ ಎಲ್ಲ ತಂಡಗಳು ಬಲಾಢ್ಯವಾಗಿದ್ದು, ಭಾರತವು ಸಹ ಉತ್ತಮ ತಂಡವನ್ನೇ ಪಂದ್ಯಕ್ಕೆ ಕಳುಹಿಸಿದ್ದು, ಗೆಲ್ಲುವ ವಿಶ್ವಾಸ ಮೂಡಿಸಿದೆ.
Comments are closed.