ಉಡುಪಿ: ಸಿದ್ದಾಪುರ ಗ್ರಾಮದ ಜನತಾ ಕಾಲನಿ ನಿವಾಸಿ ಗಣೇಶ ಶೆಟ್ಟಿ ತಾನು ಮಾಡಿದ ತಪ್ಪಿಗೆ ಕೊರಗಜ್ಜನ ಸನ್ನಿಧಿಯಲ್ಲಿ ಕ್ಷಮೆ ಕೇಳುತ್ತೇನೆ ಎಂದು ಕರೆ ಮಾಡಿ ಕರೆಸಿ ತಲವಾರಿನಿಂದ ಹಲ್ಲೆ ಮಾಡಿದ್ದಾನೆ ಎಂದು ಸಿದ್ದಾಪುರ ಗ್ರಾಮದ ಬಾಳೆಬೇರು ಭಾಸ್ಕರ ಶೆಟ್ಟಿ (43) ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಭಾಸ್ಕರ ಶೆಟ್ಟಿ ಹಾಗೂ ಗಣೇಶ ಶೆಟ್ಟಿ ಅವರ ನಡುವೆ ಆಗಾಗ ಗಲಾಟೆಗಳು ನಡೆಯುತ್ತಿರುತ್ತಿತ್ತು. ಹೀಗೆ ನಡೆದ ಗಲಾಟೆಯ ಬಗ್ಗೆ ಭಾಸ್ಕರ ಶೆಟ್ಟಿ ಅವರು ಆರೋಪಿ ಗಣೇಶ ಶೆಟ್ಟಿಯ ಮೇಲೆ ದೂರು ನೀಡಿದ್ದರು. ಆರೋಪಿ ಗಣೇಶ ಶೆಟ್ಟಿ ಮಾಡಿದ ಗಲಾಟೆಯ ಬಗ್ಗೆ ಕ್ಷಮೆ ಕೇಳುತ್ತೇನೆ ಎಂದು ಕರೆ ಮೂಲಕ ಭಾಸ್ಕರ ಶೆಟ್ಟಿಯನ್ನು ಕೊರಗಜ್ಜನ ಸನ್ನಿಧಿಗೆ ಬರಲು ಹೇಳಿದ್ದ ಎನ್ನಲಾಗಿದೆ.
ಆರೋಪಿ ಗಣೇಶ ಶೆಟ್ಟಿಯ ಆಟೋ ರಿಕ್ಷಾದಲ್ಲಿ ಭಾಸ್ಕರ ಶೆಟ್ಟಿ ಸಿದ್ದಾಪುರ ಪೇಟೆಯಿಂದ ಒಟ್ಟಿಗೆ ಹೊರಟ ಬಳಿಕ ಗಣೇಶ ಶೆಟ್ಟಿ ಚಕ್ತೇಬೇರು ಎಂಬಲ್ಲಿ ದೇವಸ್ಥಾನದ ಒಳಗೆ ಹೋಗಿ ಕ್ಷಮೆ ಕೇಳಿದಂತೆ ಮಾಡಿ, ಹೊರಬಂದು ಆಟೋ ರಿಕ್ಷಾದಲ್ಲಿದ್ದ ತಲವಾರು ತೆಗೆದು ಭಾಸ್ಕರ ಶೆಟ್ಟಿ ಮೇಲೆ ಹಲ್ಲೆಗೆ ಯತ್ನಿಸಿದ. ಆ ಸಮಯದಲ್ಲಿ ತಲವಾರು ತಪ್ಪಿ ಭಾಸ್ಕರ ಶೆಟ್ಟಿಯ ಬಲಭುಜಕ್ಕೆ ತಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಬಗ್ಗೆ ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.